ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಟಿಪ್ಪಣಿ ಆಧರಿಸಿ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಿರುವುದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಈ ಬಗ್ಗೆ ಬೆಳ್ತಂಗಡಿ ತಾಲೂಕು ಗೇರುಕಟ್ಟೆ ನಿವಾಸಿ ದಿವಾಕರ ಆಚಾರ್ಯ ಹಾಗೂ ಜನರ್ದಾನ ಪೂಜಾರಿ ಅರ್ಜಿ ಸಲ್ಲಿಸಿದ್ದು, ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಎ.7ರಂದು ಅರ್ಜಿಯು ವಿಚಾರಣೆಗೆ ಬಂದಿತ್ತು. ಜಿಲ್ಲಾ ಧಾರ್ಮಿಕ ಪರಿಷದ್ ಹಾಗೂ ವ್ಯವಸ್ಥಾಪನ ಸಮಿತಿಗೆ ನೇಮಕವಾಗಿರುವ ಸದಸ್ಯರನ್ನು ಅರ್ಜಿಯಲ್ಲಿ ಪ್ರತಿ ವಾದಿಗಳನ್ನಾಗಿ ಮಾಡಲಾಗಿದೆ. ಪ್ರತಿ ವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಎಪ್ರಿಲ್ 21ಕ್ಕೆ ಮುಂದೂಡಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಶಿಫಾರಸ್ಸು ಪತ್ರದಲ್ಲಿ ಸಲ್ಲಿಸಿದ್ದ ಪಟ್ಟಿಯಲ್ಲಿದ್ದದರನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದರಂತೆ ಜಿಲ್ಲಾ ಧಾರ್ಮಿಕ ಪರಿಷದ್ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಎಂ. ರಾಘವೇಂದ್ರ, ನೀನಾ ಕುಮಾರ್, ಪಿ. ರೀಟಾ, ಮೋಹಿನಿ, ಹೇಮಂತ್ ಕುಮಾರ್, ಶರತ್ ಕುಮಾರ್, ಎಚ್.ರಾಘವ, ಕೆ.ಹರೀಶ್ ಹಾಗೂ ಬಿ. ಹರೀಶ್ ಕುಮಾರ್ ಅವರನ್ನು ಸಮಿತಿಗೆ ನೇಮಕ ಮಾಡಲಾಗಿದೆ. ಈ ನೇಮಕಾತಿಯು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.