ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ರಕ್ಷಿತಾರಣ್ಯದ ಬಸ್ಟ್ಯಾಂಡ್ ಪಕ್ಕದಲ್ಲಿ ಪಂಚಾಯತ್ ವತಿಯಿಂದ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಎ.9 ರಂದು ರಾತ್ರಿ ಯಾರೋ ಕಳ್ಳರು ಎಗರಿಸಿದ್ದಾರೆ.
ಒಂದು ತಿಂಗಳ ಹಿಂದೆ ಗ್ರಾಮದ ಆಯ್ದ ನಾಲ್ಕು ಕಡೆ ಸೂಕ್ಷ್ಮ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ತಿಂಗಳ ಅಂತರದಲ್ಲೇ ಇದೀಗ ಒಂದು ಕ್ಯಾಮರಾವನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಗ್ರಾಮದಲ್ಲಿ ಅಲ್ಲಲ್ಲಿ ತ್ಯಾಜ್ಯ ತಂದೆಸೆಯುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಳಿ ಹರಿಕೆ ಡಬ್ಬಿಗಳ ಕಳ್ಳತನ ಸೇರಿದಂತೆ ಇತರೇ ಅಪರಾಧ ಚಟುವಟಿಕೆಗಳು ಹೆಚ್ಚಿದ್ದರಿಂದ ಪಂಚಾಯತ್ ವತಿಯಿಂದ ಈ ಹೊಸ ಪ್ರಯತ್ನ ನಡೆಸಲಾಗಿತ್ತು. ಇದರ ಆಧಾರದಲ್ಲಿ ಕೆಲವು ಅಪರಾಧ ಪ್ರಕರಣ ಪತ್ತೆಯೂ ಆಗಿತ್ತು. ತ್ಯಾಜ್ಯ ತಂದು ಹಾಕಿದವರನ್ನು ಗುರುತಿಸಿ ಅವರಿಂದಲೇ ಮತ್ತೆ ಹೆಕ್ಕಿಸಿದ ಪ್ರಸಂಗವೂ ನಡೆದಿತ್ತು.
ಎಲ್‌ಐಸಿ ಯವರು ಹಾಕಿದ್ದ ಲ್ಯಾಂಪ್ ಕಳ್ಳತನವಾಗಿತ್ತು; ಹಲವು ವರ್ಷಗಳ ಹಿಂದೆ ಎಲ್‌ಐಸಿ ವತಿಯಿಂದ ಇದೇ ಈ ಸೀಟು ಭಾಗದಲ್ಲಿ ಬ್ಯಾಟರಿ ಸ್ಟ್ಯಾಂಡ್ ಸಹಿತ ಬೀದಿ ದೀಪ ಅಳವಡಿಸಲಾಗಿದ್ದುದನ್ನು ಬ್ಯಾಟರಿ ಸಹಿತ ಯಾರೋ ಕಳ್ಳರು ಕದ್ದೊಯ್ದಿದ್ದರು. ಇದೀಗ ಭದ್ರತೆಯ ದೃಷ್ಟಿಯಿಂದ ಹಾಕಲಾಗಿದ್ದ ಸಿಸಿ ಕ್ಯಾಮರಾವನ್ನೂ ಕೂಡ ಕಳ್ಳರು ಕದ್ದೊಯ್ದಿದ್ದಾರೆ.