ಬೆಳ್ತಂಗಡಿ: ತುಳುನಾಡಿನ ಸತ್ಯನಾಪುರದ ‘ಸತ್ಯದ ಸಿರಿಗಳ’ ಮೂಲ ಆಲಡೆಯ ಪುಣ್ಯಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ ಎ.12ರಂದು ನಡೆಯಿತು.
ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ, ಶ್ರೀ ನಾಗಬ್ರಹ್ಮರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಪುಣ್ಯಾಹ, ಸ್ಥಳ ಶುದ್ಧಿ, ಕಲಾತತ್ವ ಹೋಮ, ಸರ್ವಪ್ರಾಯಶ್ಚಿತ್ತ, ವೇದಮೂರ್ತಿ ನಾಗಪಾತ್ರಿ ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ ಇವರ ನೇತೃತ್ವದಲ್ಲಿ ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ, ಮಧ್ಯಾಹ್ನ ಶ್ರೀ ದೇವರ ಉತ್ಸವ, ಶ್ರೀ ನಾಗದೇವರ ಮತ್ತು ಶ್ರೀ ಲೋಕನಾಥೇಶ್ವರ ದೇವರ ಭೇಟಿ, ಮಹಾಪೂಜೆ ಪಲ್ಲಪೂಜೆ, ನಡೆಯಿತು.

ಸಂಜೆ ಕೊಲ್ಲಿ ಶ್ರೀ ದುರ್ಗಾದೇವಿ ಭಜನಾ ಮಂಡಳಿ ಮತ್ತು ಗುರಿಪಳ್ಳ ಶ್ರೀ ಗುರುರಾಘವೆಂದ್ರ ಭಜನಾ ಮಂಡಳಿಯಿಂದ ಭಜನೆ ‘ಭಾವ-ಗಾನ-ಕುಣಿತ ನಡೆಯಿತು.
ರಾತ್ರಿ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆಪೂಜೆ “ವಾರ್ಷಿಕ ನಡ್ವಾಲ್ ಸಿರಿಜಾತ್ರೆ”, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಊರ-ಪರವೂರ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಶ್ರೀ ಸಿದ್ಧಿವಿನಾಯಕ ಕಲಾತಂಡ ಗುರಿಪಳ್ಳ ಅಭಿನಯದ ಕುತೂಹಲಭರಿತ ತುಳು ಹಾಸ್ಯಮಯ ನಾಟಕ “ಕಥೆ ಏರ್ ಬರೆಪೆರ್…? ” ಜರಗಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಪಾಂಡುರಂಗ ಮರಾಠ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್, ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ, ಜಾತ್ರೋತ್ಸವ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.