April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ನೇತೃತ್ವ ರೂ. 6 ಕೋಟಿ ವೆಚ್ಚದ ನೂತನವಾಗಿ ನಿರ್ಮಿಸಲಾದ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಹಾಗೂ ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ಎ.20 ರಂದು ಶೃಂಗೇರಿ ಮಠದ ಶ್ರೀಮಜ್ಜದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿಯವರಿಂದ ಲೋಕಾರ್ಪಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ನೇತೃತ್ವದಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಹಾಗೂ ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾಭವನದ ಲೋಕಾರ್ಪಣಾ ಸಮಾರಂಭವು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಪರಮಪ್ಯೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಆಶೀರ್ವಾದಾನುಗ್ರಹದಿಂದ ತಕ್ಕರಕಮಲ ಸಂಜಾತರಾದ ಶ್ರೀ ಮಜ್ಜದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿವರ ಅಮೃತ ಹಸ್ತದಿಂದ ಎ.20 ರಂದು ಪೂರ್ವಾಹ್ನ 10 ಕ್ಕೆ ಹಳೆಕೋಟೆಯಲ್ಲಿರುವ ವಾಣಿ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್. ಪದ್ಮಗೌಡ ಬೆಳಾಲು ಹೇಳಿದರು.


ಅವರು ಎ.15ರಂದು ವಾಣಿ ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎ.20 ರಂದು ನಡೆಯುವ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ತತ್ಕರಕಮಲ ಸಂಜಾತ ಶ್ರೀ ಮಜ್ಜಗದ್ಗರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೊಳಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.


ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟನೆ:
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಉಪ ಮುಖ್ಯ ಮತ್ತು ಜಲ ಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ ಕೆ ಶಿವಕುಮಾರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ. ವಿ ಸದಾನಂದ ಗೌಡ, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸವೋಚ್ಚ ನ್ಯಾಯಾಲಯದ ಸೀನಿಯರ್ ಅಡ್ವಕೇಟ್ ಶೇಖರ ಜಿ. ದೇವಸ, ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಎಂ.ಎಲ್.ಸಿಗಳಾದ ಬೋಜೇ ಗೌಡ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್, ಹಾವೇರಿ ಜಾನಪದ ವಿ.ವಿ ವಿಶ್ರಾಂತ ಉಪಕುಲಪತಿಗಳಾದ ಡಾ| ಕೆ. ಚಿನ್ನಪ್ಪ ಗೌಡ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಎಂ.ಎಲ್.ಸಿ ಕೆ. ಹರೀಶ್‌ಕುಮಾರ್, ಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ, ತಾಲೂಕು ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮ ಗೌಡ, ಬೆಂಗಳೂರಿನ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ, ಧರ್ಮದರ್ಶಿ ನಾರಾಯಣ ಬೇಗೂರು, ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಇವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


1990 ರಲ್ಲಿ ವಾಣಿ ಶಿಕ್ಷಣ ಸಂಸ್ಥೆ ಸ್ಥಾಪನೆ:
ನಮ್ಮ ಸಮಾಜದ ಹಿರಿಯರು ಮತ್ತು ಪ್ರಜ್ಞಾವಂತ ಯುವಕರು ಸೇರಿ, ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತೀರ ಹಿಂದುಳಿದಿದ್ದ ಕಾರಣಕ್ಕೆ ಸಮಾಜದ ಬಂಧುಗಳಿಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಪ್ರಾರಂಭಿಸಿ1983 ರಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘವು ಅಧಿಕೃತವಾಗಿ ಆಸ್ತಿತ್ವಕ್ಕೆ ಬಂದಿತ್ತು. ವಿಶೇಷವಾಗಿ ಶೈಕ್ಷಣಿಕವಾಗಿ ಸಮಾಜವನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಪ್ರತೀ ಗ್ರಾಮಗಳಲ್ಲಿ ಸಮಿತಿಯನ್ನು ಮಾಡಿ ಸಮಾಜದ ಬಂಧುಗಳಿಗೆ ಅರಿವು ಮೂಡಿಸಿ, ಗುಣಮಟ್ಟದ ಶಿಕ್ಷಣ ನೀಡುವ ಮಹತ್ವವಾದ ಉದ್ದೇಶದಿಂದ 1990 ರಲ್ಲಿ ವಾಣಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ವಿದ್ಯಾಸಂಸ್ಥೆ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಖ್ಯಾತಿಯನ್ನು ಪಡೆದಿದೆ ಎಂದು ತಿಳಿಸಿದರು.


ಆದಿಚುಂಚನಗಿರಿ ಮಹಾಸ್ವಾಮೀಜಿಗಳಿಗೆ ವಿಶೇಷ ಗೌರವ :
ಶ್ರೀ ಆದಿಚುಂಚಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಬೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ೨೦೦೪ರಲ್ಲಿ ನಮ್ಮ ಪದವಿ ಪೂರ್ವ ಕಾಲೇಜಿನ ಉದ್ಘಾಟನಾ ಸಮರಂಭಕ್ಕೆ ಆಗಮಿಸಿ ಆಶೀರ್ವಚನ ನೀಡಿರುವುದು ಅತ್ಯಂತ ಮಹೋನ್ನತ ಸಂಗತಿಯಾಗಿದೆ .ಪರಮಪೂಜ್ಯ ಸ್ವಾಮೀಜಿಯವರು ತಾಲೂಕಿನಾದ್ಯಂತ ಪರ್ಯಟನೆ ಮಾಡಿ ಸಮಾಜದ ಬಂಧುಗಳಿಗೆ ಆಶೀರ್ವಚನ ನೀಡಿರುತ್ತಾರೆ. ೨೦೧೪ರಲ್ಲಿ ಆದಿಚುಂಚನಗಿರಿ ಮಹಾಕ್ಷೇತ್ರದ ಇಂದಿನ ಮಹಾಸ್ವಾಮೀಜಿಗಳಾದ ಶ್ರೀ ಡಾ| ನಿರ್ಮಾಲಾನಂದನಾಥ ಸ್ವಾಮೀಜಿಗಳವರು ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿರುತ್ತಾರೆ. ಶ್ರೀ ಆದಿಚುಂಚನಗಿರಿ ಕ್ಷೇತ್ರದ ಮಹಾಸ್ವಾಮೀಜಿಗಳಿಗೆ ವಿಶೇಷ ಗೌರವಗಳನ್ನು ಸಲ್ಲಿಸುತ್ತೇವೆ ಎಂದು ಪದ್ಮಗೌಡ ಅವರು ಈ ಸಂದರ್ಭ ನುಡಿದರು.


2400 ವಿದ್ಯಾರ್ಥಿಗಳು ವಾಣಿ ಶಿಕ್ಷಣ ಸಂಸ್ಥೆಯಲ್ಲಿದ್ದಾರೆ:
1990 ರ ಅವಧಿಯಲ್ಲಿ ಬೆಳ್ತಂಗಡಿ ಪಟ್ಟಣದಲ್ಲಿ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳು ಇಲ್ಲದ ಕಾರಣ ಕಡಿಮೆ ಶುಲ್ಕದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ವಾಣಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ವಿಷಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು 2004 ರಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಾರಂಭಿಸಲಾಯಿತು. ನಮಗೆ ಹಿಂದೆ ಪ್ರೇರಕ ಶಕ್ತಿಯಾಗಿ ನಿಂತು ನಮ್ಮನ್ನೆಲ್ಲರನ್ನು ಹುರಿದುಂಬಿಸಿದ್ದು ಮಾತ್ರವಲ್ಲದೇ ಆರ್ಥಿಕ ಸಹಾಯವನ್ನು ನೀಡಿ ಸಹಕರಿಸಿದ ದಿ|ಕುರುಂಜಿ ವೆಂಕಟ್ರಮಣ ಗೌಡರು ಪ್ರಾತಃ ಸ್ಮರಣೀಯರು, ಆರ್ಥಿಕ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಕೈಕುರೆ ದಿ| ರಾಮಣ್ಣ ಗೌಡರವರು ನಿವೇಶನ ಖರೀದಿಗೆ ವಿಶೇಷವಾಗಿ ಆರ್ಥಿಕ ಸಹಕಾರವನ್ನು ನೀಡಿದ್ದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಇಂದು ಈ ಶಿಕ್ಷಣ ಸಂಸ್ಥೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರತೀ ವರ್ಷವು ಸಂಸ್ಥೆಯು ಎಸ್.ಎಸ್.ಎಲ್.ಸಿ ಶೇಕಡಾ 100 ಮತ್ತು ಪದವಿ ಪೂರ್ವ ವಿಭಾಗದಲ್ಲಿ ಶೇಕಡಾ 98 ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆಯುತ್ತಿರುವ ಹಿರಿಮೆಗೆ ಪಾತ್ರವಾಗಿದೆ. ಪ್ರಸ್ತುತ ವರ್ಷದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ-ಹೀಗೆ ಮೂರು ಸಂಯೋಜನೆಗಳನ ತಾಲೂಕಿನ ಕಾಲೇಜುಗಳಲ್ಲಿ ನಮ್ಮ ಪದವಿ ಪೂರ್ವ ಕಾಲೇಜು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸ್ತುತ ಎಲ್.ಕೆ.ಜಿ ಯಿಂದ ಪಿಯುಸಿ ತನಕ ಸುಮಾರು ೨೪೦೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದು ಹೇಳಿದರು.


ಪ್ರತಿ ವರ್ಷ ರೂ.15 ಲಕ್ಷದಷ್ಟು ಶುಲ್ಕ ವಿನಾಯತಿ:
ವಿದ್ಯಾರ್ಥಿಗಳಿಗೆ ಕೃಷಿಕ್ ಸರ್ವೋದಯ ಪೌಂಡೇಶನ್ ಬೆಂಗಳೂರು, ರೋಟರಿ ಕ್ಲಬ್ ಬೆಳ್ತಂಗಡಿ, ಜಿಂದಾಲ್ ಪೌಂಡೇಶನ್ ಮತ್ತು ಸರ್ಕಾರಿ ವಿದ್ಯಾರ್ಥಿವೇತನದ ಜೊತೆಗೆ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸುಮಾರು ರೂ. 15.೦೦ ಲಕ್ಷ ಶುಲ್ಕ ವಿನಾಯಿತಿ ಪ್ರತಿ ವರ್ಷವೂ ನೀಡಲಾಗುತ್ತಿದೆ. 2019ರಲ್ಲಿ ಆರಂಭಗೊಂಡ ವಾಣಿ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ಪ್ರಸ್ತುತ ಸೋಮಂತಡ್ಕ ಮತ್ತು ಕಲ್ಲೇರಿಗಳಲ್ಲಿ ಶಾಖೆಗಳನ್ನು ಹೊಂದಿದೆ. 2020 ರಿಂದ ಸ್ಪಂದನಾ ಸೇವಾ ಸಂಘದ ಮೂಲಕ ಸಮಾಜದ ಬಡ ಅನಾರೋಗ್ಯ ಪೀಡಿತರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಹೆಚ್. ಪದ್ಮಗೌಡ ತಿಳಿಸಿದರು.


ಗೌಡ ಪರಂಪರೆಗೆ ಶೃಂಗೇರಿ ಶಾರದಾ ಪೀಠ ಗುರುಪೀಠ
ಸಮುದಾಯದ ಮಠ ಶ್ರೀ ಆದಿಚುಂಚನಗಿರಿ ಮಠ:
ನಮ್ಮ ಪರಂಪರೆಗೆ ಶೃಂಗೇರಿ ಶಾರದಾ ಪೀಠವು ಗುರುಪೀಠವಾಗಿದೆ. ಕುಲಗುರುಗಳು ಶೃಂಗೇರಿಯ ಗುರುಗಳಾಗಿದ್ದಾರೆ. ನಮ್ಮ ಸಮುದಾಯದಲ್ಲಿ ಯಾವುದೇ ಶುಭ ಸಂದರ್ಭದ ಸಂಕಲ್ಪಗಳಲ್ಲಿ ಮನೆದೇವರು, ಗ್ರಾಮದೇವರು ಮತ್ತು ಶೃಂಗೇರಿ ಗುರುಪೀಠಕ್ಕೆ ಕಾಣಿಕೆಯನ್ನು ಎತ್ತಿಡುವ ಸಂಪ್ರದಾಯವು ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುತ್ತಿದೆ. ಈ ಗುರುಕಾಣಿಕೆಯನ್ನು ಗ್ರಾಮ ಗೌಡರಿಗೆ ಹಸ್ತಾಂತರಿಸಿ ಅವರು ಮಾಗಣೆ ಗೌಡರ (ಎಂಟು ಗ್ರಾಮಕ್ಕೆ ಒಬ್ಬ ಮಾಗಣೆ ಗೌಡರು) ಮುಖಾಂತರ ಕಟ್ಟೆಮನೆಗೆ (ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಳ್ಯತಾಲೂಕಿನ ಕೂಜುಗೋಡು ಮತ್ತು ಪುತ್ತೂರು ತಾಲೂಕಿನ ಬಲ್ನಾಡು ಎಂಬ ಎರಡು ಪ್ರತಿಷ್ಠಿತ ಮನೆತನಗಳು ಕಟ್ಟೆಮನೆಗಳು) ತಲುಪಿಸುತ್ತಿದ್ದು, ಕಟ್ಟೆಮನೆಯವರು ವರ್ಷಕ್ಕೊಮ್ಮೆ ಕಾರ್ಯಕ್ರಮವು ರೂಢಿಯಲ್ಲಿತ್ತು. ಕಾಲಕ್ರಮೇಣ ಗ್ರಾಮ ಗೌಡರು, ಮಾಗಣೆಗೌಡರು, ಕಟ್ಟೆಮನೆಗಳ ಸಂಪರ್ಕವು ತಪ್ಪಿಹೋದರೂ ಕೂಡ ಶುಭಕಾರ್ಯಕ್ರಮಗಳಲ್ಲಿ ಗುರುಕಾಣಿಕೆ ಎತ್ತಿಡುವ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಾ ಬಂದಿದೆ. ಸಂಪರ್ಕದ ಕೊರತೆಯಿಂದ ಈ ಗುರುಕಾಣಿಕೆಯು ಶೃಂಗೇರಿ ಗುರು ಮಠಕ್ಕೆ ತಲುಪದೆ ಇರುವುದರಿಂದ ಹಲವಾರು ತರವಾಡು ಮನೆಗಳಲ್ಲಿ ಅಷ್ಟಮಂಗಲ ಪ್ರಶ್ನೆಗಳಲ್ಲಿ ಕಂಡುಬAದ ಪ್ರಕಾರ ಮತ್ತು ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮ ಸಮಿತಿಗಳ ಮತ್ತು ಗ್ರಾಮ ಗೌಡರುಗಳ ಅಭಿಪ್ರಾಯದಂತೆ ಬೆಳ್ತಂಗಡಿ ಸಂಘದ ಮೂಲಕ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷ ಪರಿಹಾರಾರ್ಥ ಗುರು ಪೀಠಕ್ಕೆ ಮುಷ್ಟಿ ಹಣ ಸಮರ್ಪಿಸಿ ಮಂತ್ರಾಕ್ಷತೆ ಪಡೆಯುವ ಕಾರ್ಯಕ್ರಮ ಕೂಡಾ ಎ.20 ರಂದು ನಡೆಯಲಿದೆ ಎಂದು ಹೆಚ್. ಪದ್ಮಗೌಡ ಈ ಸಂದರ್ಭ ಹೇಳಿದರು.


ಗುರುಪೀಠಗಳಿಗೆ ಅವಮಾನ:
ದ.ಕ ಜಿಲ್ಲೆಯ ಗೌಡ ಸಮಾಜದವರಿಗೆ ಶೃಂಗೇರಿ ಶಾರದಾ ಪೀಠ ಗುರುಪೀಠ, ಕುಲಗುರುಗಳು ಶೃಂಗೇರಿಯ ಗುರುಗಳಾಗಿದ್ದಾರೆ. ಶ್ರೀ ಆದಿಚುಂಚನ ಗಿರಿ ನಮ್ಮ ಸಮುದಾಯದ ಮಠವಾಗಿದೆ. ಸಮಾಜದ ಗುರುಗಳಾಗಿ ಆದಿಚುಂಚನಗಿರಿ ಸ್ವಾಮೀಜಿಯವರನ್ನು ಸ್ವೀಕರಿಸಿದ್ದೇವೆ. ನಾವು ಅವರನ್ನು ನಮ್ಮ ಕಾರ್ಯಕ್ರಮಕ್ಕೆ ಆನೇಕ ಬಾರಿ ಕರೆದಿದ್ದೇವೆ. ನಮ್ಮ ಹೆಮ್ಮೆಯ ವಿದ್ಯಾ ಸಂಸ್ಥೆಯು `ವಾಣಿ’ ಹೆಸರಿನಲ್ಲಿ ನಡೆಯುತ್ತಿರುವುದರಿಂದ ಹಾಗೂ ನಮ್ಮ ಪರಂಪರೆಗೆ ಶೃಂಗೇರಿ ಶಾರದಾ ಪೀಠವು ಗುರುಪೀಠವಾಗಿರುವುದರಿಂದ ಮತ್ತು ವಿವಿಧ ಸಮಾಜದ ವಿದ್ಯಾರ್ಥಿಗಳು, ಪೋಷಕರು, ನೌಕರರು ನಮ್ಮ ಸಂಸ್ಥೆಯಲ್ಲಿರುವುದರಿಂದ ಶೃಂಗೇರಿ ಜಗದ್ಗುರುಗಳ ಆಗಮನವು ಅತ್ಯಂತ ಅರ್ಥಪೂರ್ಣವಾಗಿರುತ್ತದೆ. ನಮಗೆ ಶೃಂಗೇರಿ ಮತ್ತು ಆದಿಚುಂಚನಗಿರಿ ಎರಡು ಮಠಗಳ ಮೇಲೂ ಗೌರವ, ಪ್ರೀತಿ, ಅಭಿಮಾನ ಇದೆ. ಆದರೆ ಇತ್ತಿಚೇಗೆ ಬೆಳ್ತಂಗಡಿ ತಾಲೂಕು ಒಕ್ಕಲಿಗರ, ಗೌಡರ ಸೇವಾ ಟ್ರಸ್ಟ್ನವರು ಗೊಂದಲದ ಹೇಳಿಕೆ ನೀಡುವ ಮೂಲಕ ಶೃಂಗೇರಿ ಮಠಕ್ಕೆ ಮತ್ತು ಆದಿಚುಂಚನಗಿರಿ ಮಠಕ್ಕೆ ಅವಮಾನ ಮಾಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ. ಆದಿಚುಂಚನಗಿರಿ ಸ್ವಾಮೀಜಿಯವರನ್ನು ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದ ಮಾತ್ರಕ್ಕೆ ಅವಮಾನ ಹೇಗಾಗುತ್ತದೆ. ನಮ್ಮ ಸಂಘಕ್ಕೂ, ಸೇವಾ ಟ್ರಸ್ಟ್ ಗೆ ಯಾವುದೇ ಸಂಬಂಧ ಇಲ್ಲ, ಅವರ ಯಾವುದೇ ಕೊಡುಗೆ ನಮ್ಮ ಸಂಘಕ್ಕೆ ಇಲ್ಲ, ಈ ಕಟ್ಟಡ, ಸಭಾಭವನದ ಉದ್ಘಾಟನೆಯಲ್ಲಿ ಅವರಿಗೆ ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ, ಸಂಘಟನೆಗಳು ಇರುವುದು ಸಾಮಾರಸ್ಯಕ್ಕೆ , ಸಂಘರ್ಷಕ್ಕಾಗಿ ಅಲ್ಲ ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಕಾರ್ಯಕ್ರಮ ಸಂಯೋಜಕ ಯುವರಾಜ್ ಅನಾರು, ಉಪಾಧ್ಯಕ್ಷ ಧರ್ಣಪ್ಪ ಗೌಡ ಬಾನಡ್ಕ, ಜೊತೆ ಕಾರ್ಯದರ್ಶಿ ಶ್ರೀನಾಥ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ನಿರ್ದೇಶಕರಾದ ಮಾಧವ ಗೌಡ ಬೆಳ್ತಂಗಡಿ, ದಿನೇಶ್ ಗೌಡ ಕೊಯ್ಯೂರು, ಉಷಾದೇವಿ ಉಜಿರೆ, ವಸಂತ ನಡ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾರಾಮಣ್ಣ ಗೌಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭೇಟಿ

Suddi Udaya

ಮೈರೊಳ್ತಡ್ಕ ಖಂಡಿಗ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿತ

Suddi Udaya

ವಿಪರೀತ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕೊಲ್ಲಿಯ ನೇತ್ರಾವತಿ ನದಿ

Suddi Udaya

ಉಜಿರೆ ಗ್ರಾ.ಪಂ. ವ್ಯಾಪ್ತಿಯ ಯುವ ಮತಗಟ್ಟೆ ಸಂಖ್ಯೆ 98ರಲ್ಲಿ ಬಿರುಸಿನ ಮತದಾನ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಪರಿಸರ ದಿನಾಚರಣೆ

Suddi Udaya

ನಿಟ್ಟಡೆ ಕುಂಭಶ್ರೀ ಪ.ಪೂ. ಕಾಲೇಜಿಗೆ ಶೇ.100 ಫಲಿತಾಂಶ

Suddi Udaya
error: Content is protected !!