ಗುರುವಾಯನಕೆರೆ: ಇಲ್ಲಿಯ ವಿದ್ವತ್ ಪಿಯು ಕಾಲೇಜಿನಲ್ಲಿ ಎ.17ರಂದು ವಿದ್ವತ್ ಕ್ಲಾಸ್ ಕನೆಕ್ಟ್ ಉದ್ಘಾಟನೆ ಹಾಗೂ ಓರಿಯೆಂಟೇಷನ್ ಕಾರ್ಯಕ್ರಮ ನಡೆಯಿತು. ಹತ್ತನೇ ತರಗತಿ ಪರೀಕ್ಷೆ ಬರೆದು ಮುಂದಿನ ಪಿಯು ಶಿಕ್ಷಣಕ್ಕಾಗಿ ಮಹದಾಸೆಯನ್ನಿಟ್ಟುಕೊಂಡಿರುವ ನೀಟ್/ ಜೆಇಇ / ಸಿಇಟಿ ಮುಂತಾದ ಆಕಾಂಕ್ಷಿಗಳು ಈ ವಿದ್ವತ್ ಪ್ರೇರಣಾ ಕೋಚಿಂಗ್ ಗೆ ನೊಂದಾಯಿಸಿಕೊಂಡಿದ್ದಾರೆ.

ಕಾರ್ಯಕ್ರಮದ ಅಂಗವಾಗಿ, ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆ ಅವರು ವಿದ್ಯಾರ್ಥಿಗಳು ಪಿಯು ಕಾಲೇಜು ಅಭ್ಯಾಸದ ಸಮಯದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಎಚ್ಚರಿಕೆಯಿಂದ ತಯಾರಿ ಆರಂಭಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಜ್ವಲ ಮಾರ್ಗದರ್ಶನ ನೀಡಿದರು.
ಪಿಯು ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ 27 ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡುವ ಮೂಲಕ, ಅವರು ಸ್ಪರ್ಧಾತ್ಮಕ ಜಗತ್ತಿನ ಬಾಗಿಲು ತೆರೆದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಪ್ರದೀಪ್ ನಾವೂರ್ ಅವರು ವಿದ್ಯಾರ್ಥಿಗಳಿಗೆ ಉತ್ಸಾಹದ ಸಂದೇಶವನ್ನು ನೀಡುತ್ತಾ, ಸಾಧನೆಯ ಹಾದಿಯಲ್ಲಿ ಬರುವ ಸವಾಲುಗಳನ್ನು ಸ್ವೀಕರಿಸುವ ಬಗೆ ಹಾಗೂ ಆತ್ಮಶಕ್ತಿಯನ್ನು ವೃದ್ಧಿಸಿಕೊಳ್ಳುವ ಬಗೆಗಳನ್ನು ಮನಮುಟ್ಟುವಂತೆ ತಿಳಿಸಿ, ಆಕಾಂಕ್ಷಿಗಳ ಭವಿಷ್ಯಕ್ಕೆ ಶುಭಕೋರಿದರು.
ಅಧ್ಯಕ್ಷೀಯ ನುಡಿಗಳನ್ನು ಹಂಚಿಕೊಂಡ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿಯವರು, ವಿದ್ವತ್ ಪ್ರೇರಣಾ ಕ್ಲಾಸ್ ಕನೆಕ್ಟ್ ನ ಮಹತ್ವವನ್ನು ವಿವರಿಸುತ್ತಾ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮುನ್ನಡೆಗೆ ಹೇಗೆ ಸಹಾಯಕ ಎಂಬುದನ್ನು ತಿಳಿಸಿದರು.ಸಮಾರಂಭದಲ್ಲಿ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಜ್ವಲ್ ರೈ, ಹಿರಿಯ ಸಲಹೆಗಾರರಾದ ಶ ರಾಧಾಕೃಷ್ಣ ರೈ ಹಾಗೂ ವಿದ್ವತ್ ಪಿಯು ಕಾಲೇಜಿನ ಉಪನ್ಯಾಸಕರ ತಂಡ ಹಾಗೂ ರಾಜ್ಯದ ಎಲ್ಲೆಡೆಯಿಂದ ಬಂದಂತಹ ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.