
ಬೆಳ್ತಂಗಡಿ: ಇಂದು ಗುರುವಾಯನಕೆರೆಯ ಶಕ್ತಿನಗರದಲ್ಲಿ ನಡೆಯಲಿರುವ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ.
ಸಮಾವೇಶದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಸಚಿವರಾದ ಚೆಲುವರಾಯ ಸ್ವಾಮಿ , ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಮಟ್ಟದ ಹಲವಾರು ನಾಯಕರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಹತ್ತಾರು ದಿನಗಳಿಂದ ತಾಲುಕಿನಾದ್ಯಂತ ವ್ಯಾಪಕ ಪ್ರಮಾಣದ ಪ್ರಚಾರ ಬ್ಯಾನರ್ , ಪಕ್ಷದ ಧ್ವಜಗಳು ಸೇರಿದಂತೆ ಬಂಟಿಂಕ್ಸ್ ಗಳನ್ನು ಅಳವಡಿಸಲಾಗಿತ್ತು.

ಕಳೆದ ರಾತ್ರಿ ಗುರುವಾಯನಕೆರೆ ಎಂಬಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಘಟನೆಯನ್ನು ಖಂಡಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ” ಪಕ್ಷದ ಬೆಳವಣಿಗೆಯನ್ನು ಸಹಿಸದೆ ಬಿಜೆಪಿ ಕಾರ್ಯಕರ್ತರು ಹತಾಶೆಯಿಂದ ಈ ಕಾರ್ಯ ನಡೆಸಿದ್ದಾರೆ. ಇಂತಹ ಕಾರ್ಯದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮತ್ತು ಪಕ್ಷವನ್ನು ಬೆದರಿಸಲು ಸಾಧ್ಯವಿಲ್ಲ. ನೀವು ಚಿವುಟಿದಷ್ಟು ನಾವು ಚಿಗುರುತ್ತೇವೆ ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎಂದಿದ್ದಾರೆ.