ತೆಕ್ಕಾರು: ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು-ಜೋಡುಕಟ್ಟೆ, ಕೊಡಿಬೆಟ್ಟು-ದೇವರಗುಡ್ಡೆ, ದೇವರಗುಡ್ಡೆ-ತೆಕ್ಕಾರು ರಸ್ತೆ ದುರಸ್ತಿಗೊಳಿಸಲು ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ಈ ರಸ್ತೆಗಳ ಅಭಿವೃದ್ಧಿಗೆ ಬೇಡಿಕೆ ನೀಡುತ್ತಾ ಬಂದಿದ್ದು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ತೆಕ್ಕಾರು ಗ್ರಾಮದಲ್ಲಿ ನೂರಾರು ವರ್ಷದ ಹಿಂದಿನ ದೇವಾಲಯ ಪುನರುತ್ಥಾನಗೊಂಡು ಉತ್ಸವಕ್ಕೆ ತಯಾರಿಯಾಗಿದೆ. ಗೋಪಾಲಕೃಷ್ಣ ದೇವರ ಬ್ರಹ್ಮಕಲಶದ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ನೀರಿಕ್ಷೆಯಿದೆ. ಈ ಎಲ್ಲಾ ಅಂಶಗಳನ್ನು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನಹರಿಸಬೇಕು. ಬಾಜಾರು-ಜೋಡುಕಟ್ಟೆ 750 ಮೀಟರ್, ಕೊಡಿಬೆಟ್ಟು-ದೇವರಗುಡ್ಡೆ 350 ಮೀ., ದೇವರಗುಡ್ಡೆ-ತೆಕ್ಕಾರು ಸುಮಾರು 2 ಕೀ.ಮೀ. ಉದ್ದದ ರಸ್ತೆಗೆ ಪಿಎಂಜಿ ಯೋಜನೆ ಮೂಲಕ ಡಾಮರೀಕರಣ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ, ಶೀಘ್ರವಾಗಿ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.