ಬೆಳ್ತಂಗಡಿ: ಮನೆಯಲ್ಲಿ ಜನರು ನಿದ್ರಿಸುತ್ತಿರುವಾಗಲೇ ಕಳ್ಳತನ ನಡೆಸಿ ಚಿನ್ನಾಭರಣ ಸಹಿತ ನಗದುಗಳನ್ನು ದೋಚಿಕೊಂಡು ಹೋದ ಘಟನೆ ತೆಕ್ಕಾರು ಎಂಬಲ್ಲಿ ಎ.23ರಂದು ರಾತ್ರಿ ಸಂಭವಿಸಿದೆ.

ತೆಕ್ಕಾರುವಿನ ಗುತ್ತು ಮನೆ ನಿವಾಸಿ ಮುಸ್ತಫಾ ರವರ ಮನೆಗೆ ಹೊಕ್ಕ ಕಳ್ಳರು ಹಿಂಬದಿ ಬಾಗಿಲಿನಿಂದ ಚಿಲಕ ತೆರೆದು ಮನೆಯೊಳಗೆ ಹೊಕ್ಕಿ ಸುಮಾರು 5 ಪವನ್ ನಷ್ಟು ಚಿನ್ನ ಮೂರು ಸಾವಿರ ರೂ ನಗದುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.

ಮನೆಯವರ ಹೇಳಿಕೆಯಂತೆ ನಿನ್ನೆ ಸುಮಾರು ಮೂರರಿಂದ ನಾಲ್ಕುಗಂಟೆ ಹೊತ್ತಿಗೆ ಮನೆ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮುಸ್ತಫಾ ರವರ ಮನೆಗೆ ನೆಂಟರು ಬಂದಿದ್ದು ನೆಂಟರಿಷ್ಟರ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಅದೇ ವೇಳೆ ಅವರ ಬ್ಯಾಗ್ ಗಳನ್ನು ಎತ್ತಿಕೊಂಡು ಹೋಗಿದ್ದು ಪಕ್ಕದ ಅಂಗಳದಲ್ಲಿ ದೋಚಿ ಬಿಸಾಕಿ ಹೋಗಿದ್ದಾರೆ.

ಇದೇ ಸಂದರ್ಭದಲ್ಲಿ ತೆಕ್ಕಾರುವಿನ ಕೋಡಿ ನಿವಾಸಿ ಅನ್ವರ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು ಮನೆಯೊಳಗಡೆ ಕಪಾಟ್ ನ ಒಳಗಡೆಯಿದ್ದ ನಗದನ್ನು ದೋಚಿಕೊಂಡಿದ್ದು ಆದರೆ ಆಕಸ್ಮಾತ್ ಅವರ ಜೇಬಿಗೆ ಹಾಕುವ ಹಣವು ಕೆಳಗಡೆ ಬಿದ್ದಿದ್ದು ಬೆಳಿಗ್ಗೆ ಹೊತ್ತು ಮನೆಯ ಯಜಮಾನಿ ನೀರು ಕುಡಿಯಲೆಂದು ಎದ್ದಾಗ ಕಳ್ಳತನ ನಡೆದ ಬಗ್ಗೆ ಅರಿವಾಗಿದೆ. ಮನೆಯ ಹಿಂಬಾಗಿಲು ತೆರೆದ ಸ್ಥಿತಿಯಲ್ಲಿದ್ದು ದೋಚಿದ ಮೂರು ಸಾವಿರ ಹಣ ಅಂಗಳದಲ್ಲಿ ಬಿದ್ದು ಸಿಕ್ಕಿದೆ ಎಂದು ಅನ್ವರ್ ಮನೆಯವರು ತಿಳಿಸಿದ್ದಾರೆ.

ಇದೇ ರೀತಿ ತೆಕ್ಕಾರು ವ್ಯಾಪ್ತಿಯ ಹಲವು ಮನೆಗಳಲ್ಲಿ ಕಳ್ಳತನ ನಡೆದಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಹೆಚ್ಚಿನ ವಿವರಗಳು ಹೊರ ಬರಬೇಕಿದೆ.