ಬೆಳ್ತಂಗಡಿ: ಯಶಸ್ವಿ ಪ್ರದರ್ಶನ ಕಂಡ ತುಳು ಸಿನಿಮಾ ‘ದಸ್ಕತ್’ ಈಗ ಕನ್ನಡದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆದಿದೆ.
ಈ ಚಿತ್ರದ ಕುರಿತು ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಮಾತನಾಡಿ, ‘ದಸ್ಕತ್ ಅಂದರೆ ಸಹಿ ಮಾಡುವುದು ಎಂದರ್ಥ. ಒಂದು ಹಳ್ಳಿಯಲ್ಲಿ ಜನ ಸಹಿಗಾಗಿ ಎಷ್ಟು ಕಷ್ಟ ಪಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಒಂದು ಸಹಿಯಿಂದ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತದೆ. ಶ್ರೀಮಂತರು, ಬಡವರು ಹಾಗೂ ಅಧಿಕಾರಿಗಳ ನಡುವಿನ ತಳಮಳದ ಜೊತೆಗೆ ಬದುಕು ಹೇಗೆಲ್ಲಾ ಸಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಕರಾವಳಿ ಭಾಗದ ಸುತ್ತ ಚಿತ್ರೀಕರಿಸಿರುವ ತುಳು ಚಿತ್ರ ‘ದಸ್ಕತ್’ ಬಿಡುಗಡೆಗೊಂಡು ಯಶಸ್ವಿ 70 ದಿನವನ್ನು ಪೂರೈಸಿದೆ. ಹಾಗೆಯೇ ಕೆನಡಾ, ನೈಜೀರಿಯಾ, ದುಬೈ ಸೇರಿದಂತೆ ನಾನಾ ಭಾಗಗಳಲ್ಲಿ ಪ್ರದರ್ಶನ ಕಂಡಿದೆ. ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನಗೊಂಡು ಮೂರನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ’ ಎಂದು ಹೇಳಿದ್ದಾರೆ.
ಈ ಚಿತ್ರದ ನಾಯಕ ದೀಕ್ಷಿತ್ ಮಾತನಾಡಿ, ‘ಇದು ನನ್ನ ಮೊದಲ ಕನ್ನಡ ಚಿತ್ರ. ಈಗಾಗಲೇ ನಾನು ತುಳು ಭಾಷೆಯಲ್ಲಿ ಮೂರು ಚಿತ್ರವನ್ನು ಮಾಡಿದ್ದೇನೆ. ಇದರಲ್ಲಿ ನನ್ನದು ಶೇಖರ್ ಎಂಬ ಪಾತ್ರ’ ಎಂದು ಹೇಳಿದ್ದಾರೆ.
ನಾಯಕಿ ಭವ್ಯಾ ಪೂಜಾರಿ ಮಾತನಾಡಿ, ‘ನಾನು ಈಗಾಗಲೇ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದೇನೆ. ಇದೊಂದು ಹಳ್ಳಿ ಹುಡುಗಿಯ ಪಾತ್ರ. ನಿಮ್ಮೆಲ್ಲರ ಪ್ರೀತಿ, ಸಹಕಾರ ಈ ಚಿತ್ರದ ಮೇಲೆ ಇರಲಿ’ ಎಂದು ಕೋರಿದ್ದಾರೆ.
ಈ ಚಿತ್ರದ ಸಂಗೀತ ನಿರ್ದೇಶಕ ಸಮರ್ಥನ್. ಎಸ್. ರಾವ್ ಮಾತನಾಡಿ, ‘ಈ ಚಿತ್ರದಲ್ಲಿ ಮೂರು ಸಾಂಗ್ ಹಾಗೂ ಮೂರು ಬಿಟ್ಸ್ ಇವೆ’ ಎಂದು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಮೋಹನ್ ಶೇಣಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ ಹಾಗೂ ಗಣೇಶ್ ನೀರ್ಚಾಲ್ ಸಂಕಲನವಿದೆ.