ಮಡಂತ್ಯಾರು: ಇತ್ತೀಚೆಗೆ ಬೀಸಿದ ಭಾರಿ ಗಾಳಿ ಮಳೆಗೆ ಪಡಂಗಡಿಯ ಬಂಟ ಮಹಿಳೆಯ ಮನೆಯು ಸಂಪೂರ್ಣ ಹಾನಿಯಾಗಿದ್ದು ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯದಿಂದ ಸುಮಾರು ರೂ. ಒಂದು ಲಕ್ಷ ವೆಚ್ಚದಲ್ಲಿ ಮಹಿಳೆಯ ಮನೆ ರಿಪೇರಿ ಮಾಡಿಕೊಟ್ಟು ಮಾದರಿಯಾಗಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಬೀಸಿದ ಅನಿರೀಕ್ಷಿತ ಗಾಳಿ ಮಳೆಗೆ ಪಡಂಗಡಿ ಗ್ರಾಮದ ಕೆಲವು ಮನೆಗಳಿಗೆ ಹಾನಿಯಾಗಿತ್ತು. ಈ ಪೈಕಿ ಬಂಟ ಮಹಿಳೆ ಶ್ರೀಮತಿ ಸೇಸಮ್ಮ ಶೆಟ್ಟಿ ಮನೆಯ ಸಿಮೆಂಟ್ ಶೀಟ್ ಗಳು ಸಂಪೂರ್ಣವಾಗಿ ಗಾಳಿಗೆ ಹಾರಿ ಹೋಗಿ ಅಪಾರ ನಷ್ಟ ಉಂಟಾಗಿತ್ತು ಈ ಬಗ್ಗೆ ತಿಳಿದ ಪಡಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ದಿವಾಕರ ಶೆಟ್ಟಿ ಹಂಕರಜಾಲ್, ಮಡಂತ್ಯಾರ್ ವಲಯ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗ್ಗಿತ್ತಿಲು, ವಲಯದ ಕಾರ್ಯದರ್ಶಿ ಹರ್ಷ ನಾರಾಯಣ ಶೆಟ್ಟಿ, ನೆತ್ತರ ಹಾಗೂ ಕೆಲವು ಬಂಟ ಯುವಕರೊಂದಿಗೆ ಅನಾಹುತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶ್ರೀಮತಿ ಸೇಸಮ್ಮ ಶೆಟ್ಟಿ ಅವರ ಸಮಸ್ಯೆಗೆ ಸ್ಪಂದಿಸಿದ ಮಡಂತ್ಯಾರ್ ವಲಯ ಬಂಟರ ಸಂಘದವರು ಮನೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡರು. ಕೇವಲ 45 ದಿನಗಳ ಅವಧಿಯೊಳಗೆ, ಅಡುಗೆ ಕೋಣೆ, ಗ್ಯಾಸ್ ಕನೆಕ್ಷನ್, ಶೌಚಾಲಯ, ಟೈಲ್ಸ್ ಹಾಕಿದ ನೆಲ, ಇತ್ಯಾದಿ ಸೌಕರ್ಯಗಳನ್ನು ಒಳಗೊಂಡ, ಸುಣ್ಣ ಬಣ್ಣ ಬಳಿದ ಚಿಕ್ಕದಾದ ಸುಂದರ ಮನೆಯೊಂದನ್ನು ನಿರ್ಮಿಸಿ ಕೊಟ್ಟರು. ಮಾತ್ರವಲ್ಲದೆ ಎ. 23 ರಂದು ಗೃಹಪ್ರವೇಶ ಕಾರ್ಯಕ್ರಮವನ್ನೂ ನಡೆಸಿಕೊಟ್ಟು ಸಂಭ್ರಮಿಸಿದರು.
ಶ್ರೀಮತಿ ದಿವ್ಯ ಶೆಟ್ಟಿ, ಗುಜೊಟ್ಟು ಇವರ ಅಧ್ಯಕ್ಷತೆಯ ವಲಯ ಬಂಟರ ಮಹಿಳಾ ಘಟಕದವರು ಸಂಗ್ರಹಿಸಿ ಕೊಟ್ಟು ಸಹಕರಿಸಿದರು.