ಬೆಳ್ತಂಗಡಿ : ವಾಣಿ ಕಾಲೇಜು ಹಳೆಕೋಟೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಮತ್ತು ವಾಣಿ ಕಾಲೇಜಿನ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ಟಾಪನಾ ದಿನಾಚರಣೆ ಜರಗಿತು.
ರಸಾನುಭವ ಮತ್ತು ರಸಾಭಿವ್ಯಕ್ತಿಗೆ ಭಾಷೆ ಬೇಕು. ನಮಗೆ ನಮ್ಮದೇ ಆದ ಅನನ್ಯತೆಯನ್ನು ಉಳಿಸಿಕೊಳ್ಳಲು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು. ಹಿಂದೆಲ್ಲ ಕಲಿಕೆಯಲ್ಲಿದ್ದ ಮತ್ತು ಕಡಿಮೆ ಅಂಕದ ಫಲಿತಾಂಶ ಬಂದರೂ ಇರುತ್ತಿದ್ದ ಸಂತಸ ಮತ್ತು ಸಂತೃಪ್ತಿ ಈಗ ಕಲಿಕೆಯಲ್ಲೂ ಇಲ್ಲ ಮತ್ತು ನೂರು ಶೇಕಡಾ ಅಂಕದ ಫಲಿತಾಂಶ ಬಂದರೂ ಇಲ್ಲದಾಗಿದೆ. ಅದಕ್ಕೆಲ್ಲ ನಮ್ಮ ಮಾತೃ ಭಾಷಾ ಕಲಿಕೆಯ ಮತ್ತು ಸಾಹಿತ್ಯಿಕ ಓದಿನ ಕೊರತೆಯೇ ಕಾರಣ. ಸಂಸ್ಕೃತಿಯ ಉತ್ಪನ್ನವಾಗಿರುವ ಭಾಷೆಯ ಬಳಕೆ, ಸಾಹಿತ್ಯದ ಅಧ್ಯಯನ ಮತ್ತು ಓದಿನ ಅಗತ್ಯತೆ ಇಂದಿನ ಅನಿವಾರ್ಯತೆ ಎಂದು ಬೆಳ್ತಂಗಡಿ ತಾಲ್ಲೂಕು ಕ ಸಾ ಪ ದ ಅಧ್ಯಕ್ಷರು, ಕ ಸಾ ಪ ಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಿ. ಯದುಪತಿ ಗೌಡರು ಅಭಿಪ್ರಾಯಪಟ್ಟರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ವಾಣಿ ಕಾಲೇಜಿನ ಉಪನ್ಯಾಸಕರಾದ ಬೆಳ್ಳಿಯಪ್ಪ ರವರು, ಕ ಸಾ ಪ ದ ಪ್ರಸ್ತುತತೆ ಮತ್ತು ಮಹತ್ವದ ಬಗ್ಗೆ ಮಾತನಾಡುತ್ತಾ, ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಗೆ ತೊಂದರೆ ಮತ್ತು ಅಡ್ಡಿಗಳು ಎದುರಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಎಲ್ಲಾ ಕನ್ನಡಿಗರೂ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ವಾಣಿ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕ ಸಾ ಪ ದ ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಸ್ವಾಗತಿಸಿ ವಂದಿಸಿದರು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.