ಬೆಳ್ತಂಗಡಿ: ನಿದ್ದೆ ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಲಾವಿದ ಜಯರಾಂ ಕೆ. ಇಂದು ಸಂಜೆ ಮೃತಪಟ್ಟಿದ್ದಾರೆ. ಇವರು ತಾಯಿ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞಿರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ(96 ವ) ಅವರು ಮೇ.12ರಂದು ಸಾವನ್ನಪ್ಪಿದ್ದರು.
ಅವರ ಪುತ್ರ ಚಿತ್ರಕಲಾ ಶಿಕ್ಷಕ, ರಾಜ್ಯ ಮಟ್ಟದ ಕಲಾವಿದ ಜಯರಾಂ ಕೆ. ಅವರು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದತ್ತಿದ್ದು, ಇಂದು ಸಂಜೆ ಮೃತಪಟ್ಟಿದ್ದಾರೆ.
ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ತಾಯಿ ಮಗ ಇಬ್ಬರೂ ಕಳೆದ ಮೇ.9 ರಂದು ರಾತ್ರಿ ಕೂಳೂರು ಮನೆಯಲ್ಲಿ ಅತಿಯಾಗಿ ನಿದ್ದೆ ಮಾತ್ರೆ ಸೇವಿಸಿದ್ದರು.ಮೇ. 10 ರಂದು ಬೆಳಗ್ಗೆ ಜಯರಾಂ ಅವರ ಮನೆಯ ಬಳಿಯಿಂದ ಯಾವುದೇ ಶಬ್ದ ಕೇಳದೆ ಇದ್ದುದರಿಂದ ನೆರೆ ಹೊರೆ ಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಜೊತೆಯಾಗಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಊರವರು ಹಾಗೂ ಅಣ್ಣನ ಮಕ್ಕಳ ಸಹಕಾರದೊಂದಿಗೆ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿದ್ದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಕಲ್ಯಾಣಿ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದು ಈ ಪೈಕಿ ಶ್ರೀಧರ ನಾಯರ್ ಮತ್ತು ರಾಜನ್ ನಾಯರ್ ಅವರು ಈಗಾಗಲೇ ಮೃತಪಟ್ಟಿದ್ದಾರೆ.
ಮೃತ ಜಯರಾಂ ಅವರು ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಮಾಜಿ ಅಧ್ಯಕ್ಷ, ರಾಜ್ಯಮಟ್ಟದ ಕಲಾವಿದ, ಕಲಾರಾಧಕ, ಹವ್ಯಾಸಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ಅವರ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಶನಿವಾರ (ನಾಳೆ)ಮರಣೋತ್ತರ ಪರೀಕ್ಷೆ ಜರುಗಲಿದೆ. ಬಳಿಕ ಮೃತದೇಹವನ್ನು ಸೋಮಂತಡ್ಕ ಪೇಟೆಯಲ್ಲಿರುವ ಅವರ ಮೆಚ್ಚಿನ ಸಂಸ್ಥೆ ಕಲಾಕುಂಚದ ಎದುರಿನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಬಳಿಕ ಪಾರ್ಥಿವ ಶರೀರವನ್ನು ಅವರ ಕೂಳೂರು ನಿವಾಸಕ್ಕೆ ತಂದು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಮುಂಡಾಜೆ ಹಿಂದೂರುದ್ರ ಭೂಮಿಯಲ್ಲಿ ಅಂತಿಮಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬದವರು ತಿಳಿಸಿರುತ್ತಾರೆ.