ಬೆಳ್ತಂಗಡಿ: ಧರ್ಮಸ್ಥಳದ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಪಂಜಾಬ್ ನ ಜಲಂದರ್ ನಲ್ಲಿರುವ ಕಾಲೇಜಿನಲ್ಲಿ ಮೇ 18ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಸರಕಾರ ಕುಟುಂಬದೊಂದಿಗೆ ನಿಂತು ನ್ಯಾಯ ದೊರಕಿಸಿಕೊಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ, ಪ್ರಸ್ತುತ ಬೆಳ್ತಂಗಡಿಯ ಲಾಯಿಲ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗಳ ಪುತ್ರಿ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಎಸ್ ನಾಯರ್ (22) ಪಂಜಾಬಿನ ಎಲ್.ಪಿ.ಯು ಪಗ್ವಾಡ ಕಾಲೇಜಿನಲ್ಲಿ ನಿಗೂಢವಾಗಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜು ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದರೆ ಸತ್ಯಾಸತ್ಯತೆಯು ಬಯಲಿಗೆ ಬರಲಿದೆ.
ಅಲ್ಲಿನ ಸ್ಥಳೀಯ ಪೊಲೀಸರು ಆಕಾಂಕ್ಷ ಕುಟುಂಬದ ದೂರನ್ನು ಠಾಣೆಯಲ್ಲಿ ಸ್ವೀಕರಿಸದೇ, ಪೊಲೀಸರೇ ಬೇರೆ ದೂರು ದಾಖಲಿಸಿಕೊಂಡು ವಂಚಿಸಲು ಯತ್ನಿಸಿದ್ದರು. ಈ ಹಿನ್ನಲೆಯಲ್ಲಿ ಆಕಾಂಕ್ಷ ಕುಟುಂಬ ಮೇಲಾಧಿಕಾರಿಗಳಿಗೆ ದೂರು ನೀಡಿತ್ತು. ಇದೀಗ ಪ್ರಕರಣದ ಆರೋಪಿ ಬಿಜಿಲ್ ಮ್ಯಾಥ್ಯೂ ಎಂಬನನ್ನು ಬಂಧಿಸಲಾಗಿದೆ ಎಂದು ವರದಿ ಆಗಿದೆ. ರಾಜ್ಯ ಸರ್ಕಾರವು ಪಂಜಾಬ್ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಹಾಗೂ ಪರಿಹಾರ ನೀಡಬೇಕು ಎಂದು ಅಕ್ಬರ್ ಬೆಳ್ತಂಗಡಿ ಆಗ್ರಹಿಸಿದ್ದಾರೆ.