24.3 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಹುಮುಖ ಕ್ಷೇತ್ರದ ಸಾಧಕ ಬಿ. ಸೋಮಶೇಖರ ಶೆಟ್ಟಿ ಉಜಿರೆ

ಸಮಾಜ ನಮಗೆ ಏನನ್ನು ನೀಡಿದೆ ಎನ್ನುವುದಕ್ಕಿಂತಲೂ ಸಮಾಜಕ್ಕೆ ನಾವು ಏನನ್ನು ನೀಡಿದ್ದೇವೆ ಎಂಬುವುದು ಮುಖ್ಯವಾಗುತ್ತದೆ. ಇದೇ ರೀತಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಸೃಜನಶೀಲ, ಉತ್ಸಾಹಿ ಕ್ರಿಯಾಶೀಲ ಮಾತಿನಮಲ್ಲ ಸರಳ ಸಜ್ಜನಿಕೆಯ ವ್ಯಕ್ತಿ ಸೋಮಶೇಖರ ಶೆಟ್ಟಿ ಉಜಿರೆ.


ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯ ಮತ್ತು ಮಾರ್ಗದರ್ಶನದಲ್ಲಿ ಅಧ್ಯಾಪಕರಾಗಿ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾಗಿ, ಐದು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಇವರು, ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರಾಗಿ, ಜೈನ್ ಮಿಲನ್ ವಲಯ ನಿರ್ದೇಶಕರಾಗಿ, ದಕ್ಷಿಣ ಕನ್ನಡ ಜಿಲ್ಲಾ ವಿಜ್ಞಾನ ಪರಿಷತ್ತಿನ ತಾಲೂಕು ಘಟಕದ ಸದಸ್ಯರಾಗಿ, ಸಮೂಹ ಸಂಘಟನೆಯ ಖಜಾಂಚಿಯಾಗಿ,ಕರ್ನಾಟಕ ರಾಜ್ಯ ಜೈನ ಶಿಕ್ಷಕರ ವೇದಿಕೆಯ , ದ.ಕ.ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಜೇಸಿ ಸಂಸ್ಥೆಯ ಪೂರ್ವ ಅಧ್ಯಕ್ಷರಾಗಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಹಾಯಕ ಕಮಿಷನರ್ ಆಗಿ, ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡರೂ ಯಶಸ್ವಿಯಾಗಿ ನಿರ್ವಹಿಸಬಲ್ಲ, ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆ ಇವರದು.
ಸ್ವಾಸ್ಥ್ಯ ಸಂಕಲ್ಪ, ಮೌಲ್ಯ ಶಿಕ್ಷಣ, ಜೀವನ ಕೌಶಲ್ಯ ಮತ್ತು ಜೀವನ ಮೌಲ್ಯಗಳು, ಶಿಕ್ಷಕರ ಪುನಃಶ್ಚೇತನ ಶಿಬಿರ, ಪರಿಣಾಮಕಾರಿ ಭಾಷಣ ಕಲೆ, ಸಭಾ ನಡವಳಿಕೆಗಳು, ಇತ್ಯಾದಿ ವಿಷಯಗಳಲ್ಲಿ, ಸಮರ್ಥವಾಗಿ ಮಾರ್ಗದರ್ಶನ ಮಾಡುವ, ಅನೇಕ ತರಗತಿಗಳನ್ನು ನಡೆಸಿಕೊಟ್ಟಿದ್ದಾರೆ, ಉತ್ತಮ ವಾಲಿಬಾಲ್ ಆಟಗಾರರಾಗಿ, ಖೋ ಖೊ, ಕಬಡ್ಡಿ ಆಟಗಾರರಾಗಿ ಶಾಲಾ ಜೀವನದಲ್ಲಿ ಗುರುತಿಸಿಕೊಂಡವರು. ನಿಷ್ಠುರವಾದಿಯಾಗಿ, ಪ್ರಖರ ವಾಗ್ಮಿಯಾಗಿ, ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ, ಗಟ್ಟಿ ನಿಲುವು ಹೊಂದಿರುವವರು. ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ, ಸಂಘಟಕರಾಗಿ ಸೇವೆ ಸಲ್ಲಿಸಿದ ಅನುಭವಿ. ಪೂಜ್ಯ ಹೆಗ್ಗಡೆಯವರು, ಅವರ ಕುಟುಂಬದ ಆಶ್ರಯದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಅನೇಕ ಅವಕಾಶಗಳನ್ನು, ಬಳಸಿಕೊಂಡು ಯಶಸ್ವೀ ಜೀವನ ನಡೆಸುತ್ತಿದ್ದಾರೆ, ಅನೇಕ ಪ್ರಶಸ್ತಿ, ಗೌರವಗಳಿಂದ ಪುರಸ್ಕೃತರಾಗಿದ್ದಾರೆ.

ಇವರ ಗಂಭೀರ ವ್ಯಕ್ತಿತ್ವ, ಬೇರೆಯವರಿಗೆ ನೋವಾಗದಂತೆ ಹಿತಮಿತವಾಗಿ, ಕೇಳುವವರಿಗೆ ಮತ್ತೆ ಮತ್ತೆ ಕೇಳೋಣ ಅನ್ನಿಸುವಂತೆ ಸದಾ ಮುಗುಳು ನಗುತ್ತಾ ಮಾತಾಡುವ ಸ್ವಭಾವ ಇವರದ್ದಾಗಿದೆ. ಇವರ ಹುಟ್ಟೂರು ಇಜಿಲಂಪಾಡಿ. ಪದ್ಮರಾಜ ಶೆಟ್ಟಿ ಮತ್ತು ಬಿ. ಶಿವದೇವಿ ಅಮ್ಮ ದಂಪತಿಯ ಪುತ್ರ.

1975ರಲ್ಲಿ ಶಿಕ್ಷಕ ತರಬೇತಿ ಸಂಪೂರ್ಣಗೊಳಿಸಿದ ತಕ್ಷಣ ಬೈಂದೂರು ಸಮೀಪದ ಶ್ರೀ ಧ.ಮಂ. ಹಿ.ಪ್ರಾ.ಶಾಲೆ ಮಯ್ಯಾಡಿಯಲ್ಲಿ ಶಿಕ್ಷಕನಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಸತತ 17 ವರುಷಗಳ ಕಾಲ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. 1992ರಲ್ಲಿ ಶ್ರೀ ಧ.ಮಂ.ಹಿ.ಪ್ರಾ. ಶಾಲೆ ಉಜಿರೆಗೆ ವರ್ಗಾವಣೆಯಾಗಿ ಬಂದರು. 2012 ತನಕ ಶಿಕ್ಷಕನಾಗಿ ಸೇವೆ ಸಲ್ಲಿಸಿದರು. 2012 ಮೇ ತಿಂಗಳಿನಲ್ಲಿ ಶ್ರೀ ಧ.ಮಂ.ಹಿ.ಪ್ರಾ.ಶಾಲೆ ಧರ್ಮಸ್ಥಳಕ್ಕೆ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ವರ್ಗಾವಣೆಯಾಗಿ ಬಂದರು, 2015ರ ತನಕ ಸೇವೆ ಸಲ್ಲಿಸಿ ನಿವೃತ್ತಿಯಾದರು.

ಇವರಿಗೆ ಬಾಲ್ಯದಿಂದಲೂ ಮಾತುಗಾರಿಕೆ, ಚರ್ಚೆಯಲ್ಲಿ ಪಾಲ್ಗೊಳ್ಳುವುದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತುಂಬಾ ಆಸಕ್ತಿ. ಇವರಲ್ಲಿರುವ ಹವ್ಯಾಸಗಳು ನಿರೂಪಣೆ, ಭಾಷಣ, ಚಿತ್ರಕಲೆ, ನಾಟಕ, ಇತ್ಯಾದಿ. ಇವರು ಉತ್ತಮ ಈಜುಗಾರ ಮತ್ತು ರಾಜ್ಯಮಟ್ಟದ ವಾಲಿಬಾಲ್ ಆಟಗಾರರಾಗಿದ್ದಾರೆ. ಇವರು ಯಾವುದೇ ವಿಷಯದಲ್ಲಿ ಭಾಷಣಕ್ಕೆ ನಿಂತರೆ ಗಂಟೆಗಟ್ಟಲೆ ಮಾತನಾಡಿ ಸಭಿಕರನ್ನು ಆಯಸ್ಕಾಂತದAತೆ ಸೆಳೆಯುವ ಪಾಂಡಿತ್ಯ ಹೊಂದಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ್ದಾರೆ.

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ, ಮಹಾನಡಾವಳಿ, ವಿಶ್ವ ತುಳು ಸಮ್ಮೇಳನ, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ, ಬಸದಿಗಳ ಪಂಚಕಲ್ಯಾಣ ಹಾಗೂ ಬೇರೆ ಬೇರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಭಾರತೀಯ ಜೈನ್ ಮಿಲನ್‌ನಲ್ಲಿ ವಲಯ-೮ ಇದರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಎಸ್.ಡಿ.ಎಂ. ಕಲಾ ಕೇಂದ್ರದ ಎಸ್.ಡಿ.ಎಂ. ಕಲಾವೈಭವ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಯಾವತ್ತೂ ಇವರು ಪ್ರಶಸ್ತಿಯ ಬೆನ್ನೇರಿ ಹೋದವರಲ್ಲ, ಪ್ರಶಸ್ತಿಗಳೇ ಇವರ ಬೆನ್ನು ಹತ್ತಿವೆ.

ಇವರು ಪಡೆದ ಪ್ರಶಸ್ತಿಗಳು : 2010 ರಲ್ಲಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, 2003-04 ಸಾಲಿನ ದ.ಕ. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 1999-2000 ಸಾಲಿನ ತಾಲೂಕಿನ ಪ್ರತಿಭಾವಂತ ಪ್ರಶಸ್ತಿ, ಮುರುಗರಾಜೇಂದ್ರ ಮಠ ಚಿತ್ರದುರ್ಗ ವತಿಯಿಂದ ಶಿಕ್ಷಕ ಭೂಷಣ ಪ್ರಶಸ್ತಿ , ದ.ಕ. ಜಿಲ್ಲಾ ಮಟ್ಟದ ಶಿಕ್ಷಣ ಪ್ರೇಮಿ ಪ್ರಶಸ್ತಿ, ರಾಜ್ಯಮಟ್ಟದ ಬಸವ ಜ್ಯೋತಿ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅಂತರರಾಷ್ಟ್ರೀಯ ಸಂಸ್ಥೆ ಜೇಸಿ ವತಿಯಿಂದ ಎಚ್.ಜಿ.ಎಫ್. ಪ್ರಶಸ್ತಿ ಮತ್ತು ಜೀಸಿ ಸಂಸ್ಥೆಯ ಸಾಧನಾ ಶ್ರೀ ಪ್ರಶಸ್ತಿ

ಸಾಧನೆಯ ಹಾದಿಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ, ಪುರಸ್ಕಾರಗಳನ್ನು ಪಡೆದಿದ್ದಾರೆ. ಸಾಧಿಸುವ ಛಲ ಇದ್ದರೆ ಯಾವುದೇ ಸವಾಲು ಬಂದರೂ ಅದನ್ನು ಲೆಕ್ಕಿಸದೆ ಮುನ್ನಡೆದರೆ ಯಶಸ್ಸು ಖಚಿತ ಎಂಬುದಕ್ಕೆ ಇವರೇ ಸಾಕ್ಷಿ. ಪ್ರತಿಭೆಗಳಲ್ಲಿ ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಭೇದ ಮರೆತು ಎಲ್ಲರನ್ನೂ ಸಮಾನತೆಯಿಂದ ನೋಡುವ ಮತ್ತು ಪ್ರೋತ್ಸಾಹ ನೀಡುತ್ತಿರುವ ಒಬ್ಬ ಹೃದಯಶ್ರೀಮಂತ ವ್ಯಕ್ತಿಯಾಗಿ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕ ಹಾಗೂ ಸ್ಫೂರ್ತಿದಾಯಕರಾಗಿದ್ದಾರೆ. ಇವರ ಪ್ರತಿ ಸಾಧನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ವಿಶೇಷವಾಗಿ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ , ಡಾ,ಬಿ.ಯಶೋವರ್ಮ ಅವರ ಮಾರ್ಗದರ್ಶನವನ್ನು ನೆನಪಿಸುತ್ತಾರೆ.ಹಾಗೂ ಖಾವಂದರ ಕುಟುಂಬಸ್ಥರ ಪ್ರೋತ್ಸಾಹವೇ ಮೂಲ ಕಾರಣ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಇವರು. ಇವರು ನಡೆದು ಬಂದ ದಾರಿ, ಸಾಧಿಸಿದ ಕ್ಷೇತ್ರ ಮತ್ತು ಇವರ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸೋಣ.

ಬರಹ : ಸುರೇಂದ್ರ ಜೈನ್ ನಾರಾವಿ

Related posts

ನ.24: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಮಹಿಳಾ ಹಾಗೂ ಯುವ ಬಂಟರ ವಿಭಾಗದ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೈರಂಡ ಶ್ರೀಮತಿ ಸಂಗೀತಾ ಮತ್ತು ಸನತ್ ಕುಮಾರ್ ದಂಪತಿ ಹಾಗೂ ಮನೆಯವರಿಂದ ಬೆಳ್ಳಿಯ ಮಂಟಪ ಸಮರ್ಪಣೆ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ಕ್ಷೇಮ ನಿಧಿಯ 15ನೇ ಸಹಾಯಧನ ವಿತರಣೆ

Suddi Udaya

ಶಾಸಕ ಹರೀಶ್ ಪೂಂಜ ಹಾಗೂ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ‘ದಸ್ಕತ್’ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

Suddi Udaya

ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ: ಹೊಸ ದಾಖಲೆ ನಿರ್ಮಿಸಿದ ಬಾಂಜಾರುಮಲೆಯ ಮತದಾರರು

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರೋತ್ಸವ

Suddi Udaya
error: Content is protected !!