32.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ಸೌತಡ್ಕ: ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣ ಎಣಿಕೆ ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗಳಿಂದಲೇ ಗೋಲ್‌ಮಾಲ್

ಕೊಕ್ಕಡ: ಜೂ.20ರಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣ ಎಣಿಕೆ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳೇ ಗೋಲ್‌ಮಾಲ್ ಎಸಗಿರುವ ಆರೋಪ ಕೇಳಿಬಂದಿದೆ.

ರಾಜ್ಯದ ಹೆಸರಾಂತ ದೇವಾಲಯಗಳ ಪಟ್ಟಿಯಲ್ಲಿರುವ, ರಾಜ್ಯ ಸರಕಾರದ ಮುಜರಾಯಿ ಇಲಾಖೆಗೆ ಸೇರಿದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ದಿನವೊಂದರಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು ಲಕ್ಷಾಂತರ ರೂ.ಕಾಣಿಕೆ ಸಂದಾಯವಾಗುತ್ತಿದೆ. ಕಾಣಿಕೆ ರೂಪದಲ್ಲಿ ಭಕ್ತರಿಂದ ಸಂದಾಯವಾಗುವ ಹಣಗಳ ಎಣಿಕೆ ಪ್ರತಿ ತಿಂಗಳೂ ನಡೆಯುತ್ತದೆ. ಎಣಿಕೆ ಮಾಡಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಕೊಕ್ಕಡ ಶಾಖೆಯಲ್ಲಿ ಜಮೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಬ್ಯಾಂಕ್‌ನ ಸಿಬ್ಬಂದಿಗಳೇ ಹಣ ಎಣಿಕೆ ಯಂತ್ರದೊಂದಿಗೆ ದೇವಸ್ಥಾನಕ್ಕೆ ಬಂದು ಹಣ ಸಂಗ್ರಹಿಸಿಕೊಂಡು ಹೋಗುತ್ತಾರೆ.ದೇವಸ್ಥಾನದ ಸಿಬ್ಬಂದಿಗಳ ಜೊತೆ ಗ್ರಾಮದ ಇತರೇ ಭಕ್ತರೂ ಸ್ವಯಂ ಸೇವಕರಾಗಿ ಸೇರಿಕೊಂಡು ಹಣ ಎಣಿಕೆಗೆ ಸಹಕಾರ ನೀಡುತ್ತಾರೆ. ಭಕ್ತರು 10, 20, 50, 100, 500 ರೂಪಾಯಿಗಳ ನೋಟುಗಳನ್ನು ಪ್ರತ್ಯೇಕವಾಗಿಸಿಕೊಡುತ್ತಾರೆ. ಬಳಿಕ ಬ್ಯಾಂಕ್‌ನಿಂದ ಬಂದ ಸಿಬ್ಬಂದಿಗಳು ಯಂತ್ರದ ಸಹಾಯದಿಂದ ತಲಾ 100 ನೋಟ್‌ಗಳಂತೆ ಒಂದೊಂದೇ ಬಂಡಲ್ ಮಾಡಿ ಸಂಗ್ರಹವಾದ ಒಟ್ಟು ಹಣದ ಲೆಕ್ಕ ಹಾಕಿ ಖಾತೆಗೆ ಜಮೆ ಮಾಡುತ್ತಾರೆ.

ಬಂಡಲ್‌ನಲ್ಲಿ 10ಕ್ಕಿಂತ ಹೆಚ್ಚು ನೋಟ್ ಪತ್ತೆ: ಜೂ.20ರಂದು ಹಣ ಎಣಿಕೆ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಯಂತ್ರದ ಮೂಲಕ ತಲಾ 100 ನೋಟ್‌ಗಳಂತೆ ಬಂಡಲ್ ಮಾಡಿ ಜೋಡಿಸಿಟ್ಟಿದ್ದ ಬಂಡಲ್‌ವೊಂದನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಕೈಯಲ್ಲಿ ಮರು ಎಣಿಕೆ ಮಾಡಿದ ವೇಳೆ ಅದರಲ್ಲಿ ಏಳೆಂಟು ನೋಟ್‌ಗಳು ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಬ್ಯಾಂಕ್‌ನ ಸಿಬ್ಬಂದಿಗಳನ್ನು ಪ್ರಶ್ನಿಸಿದಾಗ ನೋಟ್‌ಗಳು ಒದ್ದೆಯಾಗಿರುವುದರಿಂದ ಬಂಡಲ್‌ನಲ್ಲಿ ಹೆಚ್ಚು ಹೋಗಿರಬಹುದು ಎಂದು ಉತ್ತರಿಸಿದ್ದಾರೆ. ಆದರೆ ಇದರಿಂದ ಸಮಾಧಾನಗೊಳ್ಳದ ಅಧ್ಯಕ್ಷರು, ದೇವಸ್ಥಾನದ ಸಿಬ್ಬಂದಿಗಳ ಮೂಲಕ ಕೆಲವೊಂದು ಹಣದ ಬಂಡಲ್‌ಗಳನ್ನು ಮತ್ತೆ ಎಣಿಕೆ ಮಾಡಿಸಿದ್ದಾರೆ. ಈ ವೇಳೆಯೂ ಬಹುತೇಕ ಬಂಡಲ್‌ಗಳಲ್ಲಿ ನಾಲ್ಕರಿಂದ ಎಂಟು ನೋಟ್‌ಗಳ ತನಕ ಹೆಚ್ಚುವರಿಯಾಗಿ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಟ್‌ಗಳ ಎಲ್ಲಾ ಬಂಡಲ್‌ಗಳನ್ನು ದೇವಸ್ಥಾನದ ಸಿಬ್ಬಂದಿಗಳೇ ಎಣಿಕೆ ಮಾಡಿ ಬ್ಯಾಂಕ್‌ಗೆ ಜಮೆ ಮಾಡಿದ್ದಾರೆ ಎಂದು ವರದಿಯಾಗಿದೆ. ಎಣಿಕೆ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯವರು ಉಪಸ್ಥಿತರಿದ್ದರು.

ದೂರು ನೀಡಲಾಗುವುದು: ದೇವಸ್ಥಾನದ ಕಾಣಿಕೆ ಡಬ್ಬಿಯ ಹಣ ಎಣಿಕೆ ವೇಳೆ ಬ್ಯಾಂಕ್‌ನ ಸಿಬ್ಬಂದಿಗಳು ಗೋಲ್‌ಮಾಲ್ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ನಮ್ಮ ವ್ಯವಸ್ಥಾಪನಾ ಸಮಿತಿ ಅಧಿಕಾರಕ್ಕೆ ಬಂದ ಬಳಿಕ ಜೂ.20ರಂದು ಮೊದಲ ಬಾರಿಗೆ ಹುಂಡಿ ಹಣ ಎಣಿಕೆ ನಡೆದಿದೆ. ಅನುಮಾನದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಯಂತ್ರದ ಮೂಲಕ ಎಣಿಕೆ ಮಾಡಿ ಜೋಡಿಸಿಟ್ಟಿದ್ದ ಬಂಡಲ್‌ವೊಂದನ್ನು ಕೈಯಲ್ಲಿ ಒಂದೊಂದೇ ನೋಟುಗಳಂತೆ ಎಣಿಕೆ ಮಾಡಿದಾಗ ಏಳೆಂಟ್ ನೋಟು ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಟಿನ ಕಂತೆಗಳನ್ನು ದೇವಸ್ಥಾನದ ಸಿಬ್ಬಂದಿಗಳ ಸಹಾಯದಿಂದ ಮರು ಎಣಿಕೆ ಮಾಡಿಸಿದ್ದೇವೆ. ಈ ವೇಳೆಯೂ ಬಂಡಲ್‌ಗಳಲ್ಲಿ ಹೆಚ್ಚುವರಿ ನೋಟು ಇರುವುದು ಪತ್ತೆಯಾಗಿದೆ. ಬಳಿಕ ಎಲ್ಲಾ ಕಂತೆಗಳನ್ನು ಸಿಬ್ಬಂದಿಗಳಿಂದಲೇ ಎಣಿಕೆ ಮಾಡಿಸಿ ಬ್ಯಾಂಕ್‌ಗೆ ಜಮೆ ಮಾಡಲಾಗಿದೆ. ಅವ್ಯವಹಾರವೆಸಗಿರುವ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಮುಜರಾಯಿ ಇಲಾಖೆಗೆ .21 ದೂರು ನೀಡಲಾಗುವುದು. -ಸುಬ್ರಹ್ಮಣ್ಯ ಶಬರಾಯ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ

Related posts

ಓಡಿಲ್ನಾಳ: ಶಕ್ತಿ ಯುವಕ ಮಂಡಲ ರೇಷ್ಮೆ ರೋಡ್ ಇದರ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮರೋಡಿ:ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಕ್ರೀಡಾಂಗಣ ಉದ್ಘಾಟನೆ

Suddi Udaya

ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25ಗಂಟೆಗಳ ನಿರಂತರ ಮ್ಯಾರಥಾನ್ ಯೋಗ ತರಬೇತಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್

Suddi Udaya

ಬಂದಾರು : ಪೆರ್ಲ – ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮಹಿಳಾ ಸಮಿತಿಯ ವತಿಯಿಂದ ಮಹಿಳಾ ಸಿರಿ ಕಾರ್ಯಕ್ರಮ

Suddi Udaya

ವಾಣಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ನೇಜಿ ನಾಟಿ

Suddi Udaya

ಸ್ನೇಹ ಸಂಗಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು

Suddi Udaya
error: Content is protected !!