ನಾರಾವಿ: ಪಂಚಾಯತು ಮೀಸಲು ಜಾಗದಲ್ಲಿ ಅಕ್ರಮವಾಗಿ ವ್ಯಕ್ತಿಯೋರ್ವ ನಿರ್ಮಿಸಿದ ಶೆಡ್‌ನ್ನು, ಪಂಚಾಯತು ದೂರಿನ ಹಿನ್ನಲೆಯಲ್ಲಿ ಕಂದಾಯ ಇಲಾಖೆಯವರು ಪೊಲೀಸರ ಸಹಕಾರದಲ್ಲಿ ತೆರವುಗೊಳಿಸಿದ ಪ್ರಕರಣ ಜೂ.೨೪ ರಂದು ವರದಿಯಾಗಿದೆ.

ಪ್ರತಿ ಗ್ರಾಮ ಪಂಚಾಯತುಗಳು ತಮ್ಮ ಪಂಚಾಯತು ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಜಾಗವನ್ನು ಮೀಸಲಿಡಬೇಕು ಎಂದು ಈ ಹಿಂದೆಯೇ ಸರಕಾರ ಆದೇಶ ಮಾಡಿದೆ. ಅದರಂತೆ ನಾರಾವಿ ಗ್ರಾಮ ಪಂಚಾಯತು ಆಡಳಿತ ಮಂಡಳಿ ಸಾರ್ವಜನಿಕ ಉದ್ದೇಶಕಕ್ಕಾಗಿ ನಾರಾವಿ ಮತ್ತು ಹಾಡಿ ಬಳಿ ಸುಮಾರು ೧೫ ಎಕ್ರೆ ಜಾಗವನ್ನು ಮೀಸಲಿಟ್ಟಿದೆ. ಇದರಲ್ಲಿ ೪.೮೦ ಎಕ್ರೆ ಪ್ರೌಢ ಶಾಲೆಗೆ, 1 ಎಕ್ರೆ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ, ೧ ಎಕ್ರೆ ಹಿಂದೂ ರುದ್ರಭೂಮಿ ಉಳಿದ ಜಾಗ ಆಟದ ಮೈದಾನ ಮತ್ತು ಪಿಯು ಕಾಲೇಜಿಗೆ ಕಾಯ್ದಿರಿಸಲಾಗಿದೆ. ಪಂಚಾಯತು ವತಿಯಿಂದ ಜಾಗದ ಸುತ್ತಾ ಕಲ್ಲಿನ ಕಂಪೌAಡ್ ನಿರ್ಮಿಸಲಾಗಿದ್ದು, ಜಾಗಕ್ಕೆ ರಕ್ಷಣೆ ಮಾಡಲಾಗಿದೆ.
ಈ ನಡುವೆ ಕಳೆದ ಒಂದು ವಾರದ ಹಿಂದೆ ನಾರಾವಿ ಗ್ರಾ.ಪಂ ವ್ಯಾಪ್ತಿಯ ವಿಜಯ ಎಂಬವರು ಜಾಗದೊಳಗೆ ಪ್ರವೇಶಿಸಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದರು. ಮೀಸಲು ಜಾಗದಲ್ಲಿ ಒಂದು ಶೆಡ್ ನಿರ್ಮಾಣವಾಗುತ್ತಿದ್ದಂತೆ ಕೆಲ ಸಾರ್ವಜನಿಕರು ನಾವು ಕೂಡಾ ಆ ಜಾಗದಲ್ಲಿ ಶೆಡ್ ನಿರ್ಮಿಸುತ್ತೇವೆ. ನಮಗೂ ಅದರಲ್ಲಿ ಜಾಗ ನೀಡಿ ಎಂದು ಪಂಚಾಯತ್‌ಗೆ ಒತ್ತಡ ಹಾಕತೊಡಗಿದರು. ಈ ವಿಷಯವನ್ನರಿತ ಗ್ರಾ.ಪಂ ಆಡಳಿತ ಮಂಡಳಿ ಪಂಚಾಯತು ಮೀಸಲು ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಶೆಡ್‌ನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ರಿಗೆ ದೂರು ನೀಡಿದ್ದರು.
ಕಂದಾಯ ಇಲಾಖೆಯವರು ಜಾಗವನ್ನು ಪರಿಶೀಲಿಸಿ ತಹಶೀಲ್ದಾರ್‌ಗೆ ನೀಡಿದ ವರದಿಯಂತೆ ತಹಶೀಲ್ದಾರ್ ಅಕ್ರಮವಾಗಿ ಶೆಡ್ ಕಟ್ಟಿದ ವಿಜಯರಿಗೆ ನೋಟೀಸು ಜಾರಿ ಮಾಡಿದರು. ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತದ ಪಿಡಿಒ ಹಾಗೂ ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಶೆಡ್‌ನ್ನು ತೆರವುಗೊಳಿಸಿದರು. ಈ ಸಂದರ್ಭ ಪಂಚಾಯತದ ಅಧ್ಯಕ್ಷ ರಾಜವರ್ಮ ಜೈನ್, ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಪಿಡಿಓ ಸುಧಾಕರ ಪೂಜಾರಿ, ಗ್ರಾಮ ಕರಣಿಕ ಅಕ್ಷತ್, ಪಂಚಾಯತ್ ಸದಸ್ಯರಾದ ಉದಯ ಹೆಗ್ಡೆ ನಾರಾವಿ, ನಾರಾಯಣ ಪೂಜಾರಿ ಹಾಗೂ ಪೋಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.











