ಬೆಳ್ತಂಗಡಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆದಲ್ಲಿ ಕಾರಿನಲ್ಲಿಯೇ ಮಹಿಳೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜು.1ರಂದು ನಡೆದಿದೆ.
ಅಗತ್ಯ ಕೆಲಸದ ನಿಮಿತ್ತ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಮಾಲ್ ಕರಾಯ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯೆಯೇ ಕಾರಿನಲ್ಲೇ ಮಹಿಳೆಗೆ ಹೆರಿಗೆಯಾದ ಘಟನೆ ವೈದ್ಯರದಿನದಂದು ನಡೆದಿದೆ. ತಾಯಿ ಮಗು ಇಬ್ಬರೂ ಸುರಕ್ಷಿತರಾಗಿದ್ದು ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದಾರೆ.
ಸುನ್ನತ್‌ಕೆರೆ ನಿವಾಸಿ ಇಕ್ಬಾಲ್ ಅವರ ಪತ್ನಿ ತುಂಬು ಗರ್ಬಿಣಿ ಸಫಿಯಾ ಅಳದಂಗಡಿ ಅವರು ತೀವ್ರವಾದ ಹೆರಿಗೆ ನೋವಿನೊಂದಿಗೆ ರಸ್ತೆ ಬದಿನಿಂತುಕೊAಡಿದ್ದರು. ಇದನ್ನು ಗಮನಿಸಿದ ಜಮಾಲ್ ಅವರು ತನ್ನ ಕಾರನ್ನು ತಿರುಗಿಸಿ ಬಂದು ವಿಚಾರಿಸಿದರು. ದಂಪತಿಯ ಸಂಕಷ್ಟ ಅರಿತ ಅವರು ತಕ್ಷಣ ಮಹಿಳೆಯನ್ನು ತನ್ನ ಕಾರಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಯತ್ತ ಪ್ರಯಾಣ ಬೆಳೆಸಿದರು. ಆದರೆ ಅದಾಗಲೇ ಸಫಿಯಾ ಅವರು ಕಾರಿನಲ್ಲೇ ಪ್ರಸವಿಸಿದ್ದಾರೆ. ಪ್ರಸವದ ವೇಳೆ ಪತಿ ಇಕ್ಬಾಲ್ ಮತ್ತು ಜಮಾಲ್ ಅವರು ಮಹಿಳೆಗೆ ತುರ್ತು ಸ್ಪಂದಿಸಿದ್ದು ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರ ದಿನದಂದು ಸಫಿಯಾ ಪಾಲಿಗೆ ಪತಿ ಮತ್ತು ಜಮಾಲ್ ವೈದ್ಯರಂತೆ ಕಂಡಿರುವುದು ಸತ್ಯ. ಜಮಾಲ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.











