32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಖಂಡಿಸಿ ಸೂಕ್ತ ಕ್ರಮಕ್ಕೆ ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ತಹಶೀಲ್ದಾರ್, ವಿಶೇಷ ತನಿಖಾದಳಕ್ಕೆ, ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಪಡ್ಯಂತ್ರದ ಪರಿಣಾಮವಾಗಿ ಉಂಟಾಗಿರುವ ಅಹಿತಕರ ವಾತಾವರಣವನ್ನು ತಿಳಿಗೊಳಿಸುವ ಕುರಿತು ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ವತಿಯಿಂದ ತಹಶೀಲ್ದಾರ್, ವಿಶೇಷ ತನಿಖಾದಳಕ್ಕೆ ಹಾಗೂ ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಆ.25 ರಂದು ಮನವಿ ಸಲ್ಲಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ 800 ವರ್ಷಗಳಷ್ಟು ಇತಿಹಾಸವಿರುವ ಕರ್ನಾಟಕದ ಪವಿತ್ರ ಧಾರ್ಮಿಕ ಕ್ಷೇತ್ರ. ನಾಡಿನ ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಇಲ್ಲಿ ಕ್ಷೇತ್ರದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಆಣತಿಯಂತೆ ಅನ್ನದಾನ, ಔಷಧ ದಾನ, ವಿದ್ಯಾದಾನ ಮತ್ತು ಅಭಯ ದಾನಗಳೆಂಬ ಚತುರ್ವಿಧ ದಾನ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ವಿಶೇಷವಾಗಿ ಶ್ರೀಕ್ಷೇತ್ರದ ಈಗಿನ ‘ಹೆಗ್ಗಡೆ’ಯವರಾದ ಡಿ. ವೀರೇಂದ್ರ ಹೆಗ್ಗಡೆಯವರ ಅವಧಿಯಲ್ಲಿ ಮೇಲೆ ಹೇಳಿದ ಚತುರ್ವಿಧ ದಾನಗಳ ಜೊತೆಗೆ ರಾಜ್ಯದ ಬಡ ಜನರ ಪಾಲಿಗೆ ಜೀವನದಾನವನ್ನು ನೀಡುವ ನೂರಾರು ಯೋಜನೆಗಳು ಪ್ರಾರಂಭವಾಗಿ, ಅತ್ಯಂತ ಯಶಸ್ವಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಇಲ್ಲಿ ನಡೆಯುತ್ತಿರುವ ದಾನ-ಧರ್ಮಾದಿಗಳ ಕಾರಣದಿಂದಾಗಿಯೇ “ಕುಡುಮ’ ಎಂಬ ಈ ಊರು ಇಂದು ‘ಧರ್ಮಸ್ಥಳ’ವಾಗಿ, ಜೈನ-ಶೈವ-ವೈಷ್ಣವ ಸಂಪ್ರದಾಯಗಳ ಅಪೂರ್ವ ಸಂಗಮವಾಗಿ ಸರ್ವಧರ್ಮ ಸಮನ್ವಯತೆ ಹಾಗೂ ಸಹಿಷ್ಣುತೆಯ ಮಾದರಿ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಸನಾತನ ಧರ್ಮದಲ್ಲಂತೂ ಶ್ರೀಕ್ಷೇತ್ರಕ್ಕೆ ಅತ್ಯಂತ ವಿಶಿಷ್ಠ ಮತ್ತು ಗೌರವಪೂರ್ವಕವಾದ ಸ್ಥಾನ ಇರುತ್ತದೆ.

ಆದರೆ ಶ್ರೀಕ್ಷೇತ್ರದ ಜನತಾ ಸೇವೆಯಿಂದ ಹಾಗೂ ಜನಮಾನಸದಲ್ಲಿ ಶ್ರೀಕ್ಷೇತ್ರ ಹಾಗೂ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಪಡೆದಿರುವ ಗೌರವಾದರಗಳಿಂದ ಅಸೂಯೆಗೊಳಗಾಗಿರುವ ಕೆಲವೊಂದು ವ್ಯಕ್ತಿಗಳು ಮತ್ತು ಶಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಇತ್ತೀಚಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಭಕ್ತಾದಿಗಳ ಮನಸಿನಲ್ಲಿ ಗೊಂದಲ ಸೃಷ್ಟಿಸುವ ಕಾನೂನು ಬಾಹಿರ ಮತ್ತು ಅನ್ಯಾಯದ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ‘ಹೆಣ್ಣು ಮಗಳೊಬ್ಬಳ ದುರಂತ ಸಾವಿಗೆ ನ್ಯಾಯ ಕೇಳುವುದು’ ಎಂಬ ಹೆಸರಿನಲ್ಲಿ ಆರಂಭವಾದ ಈ ಹೋರಾಟ ಇಂದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಧರ್ಮಸ್ಥಳ ಕ್ಷೇತ್ರದ ಪಾವಿತ್ರ‍್ಯತೆಗೆ ಧಕ್ಕೆ ತರುವಂತಹ ರೀತಿಯಲ್ಲಿ ವ್ಯವಸ್ಥಿತ ಅಪಪ್ರಚಾರ ಮಾಡುವ ಮಟ್ಟಕ್ಕೆ ಬೆಳೆದಿದೆ. ಅದಕ್ಕಿಂತ ಹೆಚ್ಚಾಗಿ ಕಳೆದ ಕೆಲ ತಿಂಗಳುಗಳಿAದ ಸ್ಥಾಪಿತ ಹಿತಾಸಕ್ತಿಗಳೊಂದಗೂಡಿದ ದುಷ್ಟಕೂಟವೊಂದು ಇದೇ ದುರುದ್ದೇಶದ ಈಡೇರಿಕೆಗಾಗಿ ಅತ್ಯಂತ ಘೋರ ಮತ್ತು ಹೇಯ ಷಡ್ಯಂತ್ರವೊAದನ್ನು ಹೆಣೆದಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಆಡಳಿತ ವ್ಯವಸ್ಥೆಯ ಕುರಿತಾಗಿ ಸುಳ್ಳು ಸುದ್ದಿಗಳನ್ನೇ ಹರಡಿ, ಎಲ್ಲರ ಮನದಲ್ಲಿ ಅಪನಂಬಿಕೆಯ ಬೀಜ ಬಿತ್ತುತ್ತಿದೆ. ಒಂದರ ಹಿಂದೆ ಒಂದು ಅನ್ನುವಂತೆ ಹಲವು ಸುಳ್ಳು ಮತ್ತು ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಾ, ‘ಕ್ಷೇತ್ರದಲ್ಲಿ ಅಪಾರ ಸಾವು-ನೋವುಗಳಾಗಿವೆ’ ಎನ್ನುವ ೧ ನಿರಾಧಾರ ಸುದ್ದಿಗಳನ್ನು ತಂತ್ರಜ್ಞಾನ ಬಳಸಿ ವೈಭವೀಕರಿಸಿ, ಅವುಗಳನ್ನು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುತ್ತಾ, ಕ್ಷೇತ್ರದ ಭಕ್ತರ ಮನಸುಗಳನ್ನು ಘಾಸಿಗೊಳಿಸಲಾಗುತ್ತಿದೆ. ಶ್ರೀಕ್ಷೇತ್ರದಿಂದ ನಡೆಯುವ ಅದೆಷ್ಟೋ ಜನಪರ, ಸಾಮಾಜಿಕ ಸದುದ್ದೇಶದ ಕಾರ್ಯಕ್ರಮಗಳ ಬಗ್ಗೆಯೂ ಸುಳ್ಳು ಮಾಹಿತಿ ಪಸರಿಸಿ, ಜನರ ಮನಸ್ಸಿನಲ್ಲಿ ಅಪನಂಬಿಕೆ ಮೂಡಿಸುವ ಈ ಹುನ್ನಾರ ಸಮಾಜದ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಜೊತೆಗೆ ಸಮಾಜದ ವಿವಿಧ ವಿಭಾಗಗೊಳಗೆ ಕಂದಕವನ್ನು ಸೃಷ್ಟಿಸುತ್ತಾ, ಸಾಮಾಜಿಕ ಶಾಂತಿಯನ್ನು ದೊಡ್ಡ ಮಟ್ಟದಲ್ಲಿ ಕದಡುವ ಪ್ರಯತ್ನಗಳೂ ನಡೆಯುತ್ತಿರುವುದು ಈಗಾಗಲೇ ತಮ್ಮ ಗಮನಕ್ಕೂ ವೇದ್ಯವಾದ ವಿಷಯವೇ ಆಗಿರುತ್ತದೆ, ಇದಕ್ಕೂ ಮಿಗಿಲಾಗಿ, ಅವರ ಕುಕೃತ್ಯಗಳನ್ನು ಆಕ್ಷೇಪಿಸುವ/ವಿರೋಧಿಸುವವರ ವಿರುದ್ಧ ಅತ್ಯಂತ ಕೀಳು ಮಟ್ಟದ ಸುಳ್ಳು ಪ್ರಚಾರದ ಮೂಲಕ ಅಂತಹವರ ಚಾರಿತ್ರ‍್ಯಹನನ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ.

ಧರ್ಮಸ್ಥಳದ ಬಗ್ಗೆ ನಡೆದಿರುವ ಈ ಷಡ್ಯಂತ್ರವನ್ನು ಈಗಾಗಲೇ ಸರ್ಕಾರ ಗಮನಿಸಿ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವು ಮಟ್ಟದ ತನಿಖೆ, ವಿಶೇಷ ತನಿಖಾದಳ (ಎಸ್‌ಐಟಿ) ರಚನೆಯಂತಹ ಉಪಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ. ಇದನ್ನು ತಾಲೂಕಿನ ಮಹಾಜನತೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ. ತಮ್ಮ ವಿಶೇಷ ತನಿಖಾ ದಳ ಈತನಕ ನಡೆಸಿರುವ ತನಿಖೆಯಲ್ಲಿ ಹಲವು ಸತ್ಯಾಂಶಗಳು ಮತ್ತು ಶ್ರೀಕ್ಷೇತ್ರದ ವಿರುದ್ಧ ನಡೆಯುತ್ತಿರುವ ಘೋರ ಷಡ್ಯಂತ್ರದ ಆಳ, ಅಗಲ ಮತ್ತು ದುಷ್ಪರಿಣಾಮಗಳು ತಮ್ಮ ಗಮನಕ್ಕೂ ಬಂದಿವೆ ಎಂಬುದು ನಮ್ಮ ಪ್ರಾಮಾಣಿಕ ಅನಿಸಿಕೆ. ಜೊತೆಗೆ ಜವಾಬ್ದಾರಿಯುತ ಮಾಧ್ಯಮಗಳೂ ಈ ಷಡ್ಯಂತ್ರವನ್ನು ಬಯಲಿಗೆಳೆಯುವ ಮತ್ತು ನಿಜ ವಿಚಾರಗಳನ್ನು ಜನತೆಯ ಮುಂದೆ ಇಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ.

ಈ ಷಡ್ಯಂತ್ರದ ಕಾರಣದಿಂದಾಗಿ ಈಗಾಗಲೇ ಕರ್ನಾಟಕ ಸರ್ಕಾರವು ಜನತೆಯ ತೆರಿಗೆಯ ಹಣದಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯರ್ಥವಾಗಿ ಖರ್ಚು ಮಾಡಬೇಕಾಗಿ ಬಂದಿರುತ್ತದೆ ಮತ್ತು ಆಡಳಿತ ವ್ಯವಸ್ಥೆಯ ಮೇಲೆ ಅನಗತ್ಯ ಹೊರೆಯನ್ನು ಹೊರಿಸಬೇಕಾಗಿ ಬಂದಿರುತ್ತದೆ. ಯಾರದೋ ಸ್ವಾರ್ಥ ಸಾಧನೆಗಾಗಿ ಮತ್ತು ದುರುದ್ದೇಶದ ಈಡೇರಿಕೆಗಾಗಿ ಸರ್ಕಾರದ ಹಣವನ್ನು ಅನಗತ್ಯವಾಗಿ ಪೋಲು ಮಾಡಬೇಕಾಗಿ ಬಂದಿರುವುದು ಅತ್ಯಂತ ದುರಂತದ ಸಂಗತಿ.

ಆದರೆ ಇನ್ನು ಮುಂದಕ್ಕೂ ಇದೇ ಕಾರಣವನ್ನು ಮುಂದಿಟ್ಟುಕೊಂಡು, ಶ್ರೀಕ್ಷೇತ್ರದ ಮೇಲೆ ನಡೆಯುತ್ತಿರುವ ದುಷ್ಟಕೂಟದ ದಾಳಿಯನ್ನು ತಾಲೂಕಿನ ಜವಾಬ್ದಾರಿಯುತ ನಾಗರಿಕರು ಇನ್ನೂ ಕೂಡಾ ಸಹಿಸುತ್ತಾ ಕೂರುವುದು ಸಾಧ್ಯವಿಲ್ಲ. ಹೀಗಾಗಿ ತಮ್ಮ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹುಡುತ್ತಿರುವ ಕ್ಷೇತ್ರದ ಬಗೆಗಿನ ಹಾಗೂ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕುರಿತಾದ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಿ, ಆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ. ಅಲ್ಲದೇ ತಮ್ಮ ಪನಿಖಾದಳ ನಡೆಸುತ್ತಿರುವ ತನಿಖೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ತಿಗೊಳಿಸಿ, ಸಮಾಜಘಾತುಕ ಶಕ್ತಿಗಳು ಹೂಡಿರುವ ಷಡ್ಯಂತ್ರದ ಎಲ್ಲಾ ವಿವರಗಳನ್ನೂ ತಮ್ಮ ತನಿಖೆಯ ಮೂಲಕ ಹೊರಗೆಳೆದು ಜನತೆಯ ಮುಂದಿಡಬೇಕಾಗಿಯೂ, ಅಂತಹ ಕುಕೃತ್ಯಗಳಲ್ಲಿ ತೊಡಗಿರುವ ಎಲ್ಲಾ ವ್ಯಕ್ತಿಗಳ ಮತ್ತು ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಶ್ರೀಕ್ಷೇತ್ರದ ಪಾವಿತ್ರ‍್ಯತೆ ಮತ್ತು ಘನತೆಗಳಿಗೆ ಯಾವುದೇ ಚ್ಯುತಿ ಬರದಂತೆ ಮಾಡಬೇಕಾಗಿಯೂ, ಜೊತೆಗೆ ಡಿ. ವೀರೇಂದ್ರ ಹೆಗ್ಗಡೆಯವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ವಿನಾಕಾರಣ ಹಾನಿಯಾಗದಂತೆಯೂ ನೋಡಿಕೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಮೇಲೆ ಹೇಳಿದ ಷಡ್ಯಂತ್ರದ ಪರಿಣಾಮವಾಗಿ ಸಮಾಜದಲ್ಲಿ ಉಂಟಾಗಿರುವ ಗೊಂದಲಗಳು, ಅಸಹಿಷ್ಣುತೆ ಮತ್ತು ಅಶಾಂತಿಯನ್ನು ನಿವಾರಿಸಬೇಕಾಗಿಯೂ ತಾಲೂಕಿನ ಶಾಂತಿಪ್ರಿಯ ಮತ್ತು ಜವಾಬ್ದಾರಿಯುತ ಜನತೆಯ ಪರವಾಗಿ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇವೆ.

ಅದರ ಜೊತೆಗೆ ಮೇಲೆ ಹೇಳಿದ ಷಡ್ಯಂತ್ರದ ಪರಿಣಾಮವಾಗಿ ಸರ್ಕಾರವು ಅನಗತ್ಯವಾಗಿ ವೆಚ್ಚ ಮಾಡಬೇಕಾಗಿ ಬಂದ ಎಲ್ಲಾ ಮೊತ್ತಗಳನ್ನೂ, ಈ ಷಡ್ಯಂತ್ರಕ್ಕೆ ಭಾಗಿಗಳಾದವರಿಂದ ವಸೂಲಿ ಮಾಡುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಯು.ಸಿ.ಪೌಲೋಸ್, ಶಿವಪ್ರಸಾದ್ ಅಜಿಲ, ಯೋಗೀಶ್ ನಡ್ಕರ, ಕಾಸಿಂ ಮಲ್ಲಿಗೆ ಮನೆ, ಪ್ರತಾಪಸಿಂಹ ನಾಯಕ್, ಬಿ.ಕೆ.ಧನಂಜಯ್ ರಾವ್, ವಸಂತ ಸಾಲ್ಯಾನ್ ಕಾಪಿನಡ್ಕ, ವೆಂಕಟರಾಮಣ ಹೆಬ್ಬಾರ್, ಡಿ.ಎ.ರೆಹಮಾನ್, ಶಾರದಾ ರೈ, ಪೂರನ್ ವರ್ಮ, ಜಗದೀಶ್, ಲಕ್ಷ್ಮೀ ಮೋಹನ್ ಕುಮಾರ್, ಸಂತೋಷ್ ಕಾಪಿನಡ್ಕ , ರಾಜು ಪೂಜಾರಿ, ನಿತ್ಯಾನಂದ ನಾವರ, ಈಶ್ವರ ಬೈರ, ಲಕ್ಷ್ಮಣ್ ಸಾಪಲ್ಯ, ಸುಬ್ರಹ್ಮಣ್ಯ ಅಗರ್ತ ಸಹಿತ ಮತ್ತಿತರರು ಉಪಸ್ಥಿತರಿದ್ದರು.

Related posts

ಜಾತಿನಿಂದನೆ ಮಾಡಿ ವ್ಯಕ್ತಿಯ ಕೊಲೆಗೆ ಯತ್ನ: ನಾವೂರು ನೌಷದ್ ನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ: ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ರೌಫ್ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ.ಶಿಕ್ಷಕ ರಕ್ಷಕ ಸಂಘದ ಪೋಷಕರ ಸಭೆ .

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಬಿಷಪ್ ಜೇಮ್ಸ್ ಪಟ್ಟೇರಿಲ್ ರವರನ್ನು ಅಭಿನಂದಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ ಸಮಾರೋಪ

Suddi Udaya

ಕಳೆಂಜ ಕುಶಾಲಪ್ಪ ಗೌಡರ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಗ್ಗೆ ಆರೋಪ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪತ್ರಿಕಾಗೋಷ್ಠಿ

Suddi Udaya
error: Content is protected !!