ಬೆಳ್ತಂಗಡಿ: ಉಜಿರೆಯ NABH ಪುರಸ್ಕೃತ ಬೆನಕ ಆಸ್ಪತ್ರೆಯಲ್ಲಿ ‘ಡಿ ‘ಲೆವೆಲ್ ಐ ಸಿ ಯು ಸೌಲಭ್ಯವುಳ್ಳ ನವೀನ ಅಂಬ್ಯುಲನ್ಸನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಮತ್ತು ಡಾ. ಭಾರತಿ ದಂಪತಿಗಳು ಗಣಪತಿ ವಿಗ್ರಹಕ್ಕೆ ಪುಷ್ಪ ಮಾಲೆಯನ್ನು ಅರ್ಪಿಸುವ ಮೂಲಕ ಲೋಕಾರ್ಪಣೆ ಮಾಡಿದರು. ಇದು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ವೆಂಟಿಲೇಟರ್ ಸಹಿತ ಐ ಸಿ ಯು ನಲ್ಲಿರುವ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತದೆ. ಮತ್ತು ವಿಶೇಷವಾಗಿ ಹವಾನಿಯಂತ್ರಿತ ಶೈತ್ಯಾಗಾರವಿದ್ದು ಉಜಿರೆಯಿಂದ ದೂರದ ಕಾಶ್ಮೀರದವರೆಗೂ ಶವವನ್ನು (ಕೆಡದಂತೆ) ಸಾಗಿಸಲು ಸಹಕಾರಿಯಾಗಲಿದೆ ಎಂದು ಡಾ.ಗೋಪಾಲಕೃಷ್ಣ ಮಾಹಿತಿ ನೀಡಿದರು. ಆಸ್ಪತ್ರೆಯು ಪ್ರಾರಂಭವಾಗಿ 25ನೇ ವರ್ಷದಲ್ಲಿ ಇಂಥ ಹೈಟೆಕ್ ವ್ಯವಸ್ಥೆಯ ಅಂಬ್ಯುಲನ್ಸನ್ನು ಈ ಪರಿಸರಕ್ಕೆ ಕೊಡುಗೆಯಾಗಿ ನೀಡಲು ಹೆಮ್ಮೆಯಾಗುತ್ತಿದೆ ಎಂದು ಡಾ.ಗೋಪಾಲಕೃಷ್ಣ ದಂಪತಿಗಳು ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರುಗಳಾದ ಡಾ.ಆದಿತ್ಯ ರಾವ್, ಡಾ. ಅಂಕಿತ ಜಿ ಭಟ್, ಡಾ. ಪ್ರದ್ಯೋತ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.






