ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ದೂರುದಾರ ಚಿನ್ನಯ್ಯ ನೀಡಿದ ದೂರು ಸುಳ್ಳು ಎಂದು ಸರ್ಕಾರಿ ವಿಶೇಷ ಅಭಿಯೋಜಕರು ಮಾನ್ಯ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಚಿನ್ನಯ್ಯ ನೀಡಿದ ದೂರು ನಂತರ ಆತ ತೋರಿಸಿದ ಜಾಗಗಳು ಸರಿಯಾದುದ್ದಲ್ಲ. ಆತ ದೂರು ಸಲ್ಲಿಸುವ ಮುನ್ನ ನಮ್ಮ ಜತೆ ಚರ್ಚೆ ಮಾಡಿದ್ದಾನೆ ಅದನ್ನೂ ಕೂಡ ಉತ್ಖನನ ಮಾಡಬೇಕು ಎಂದು ದೂರುದಾರರಾದ ಪುರಂದರ ಗೌಡ ಹಾಗೂ ತುಕಾರಾಮ್ ಗೌಡ ಎಸ್ ಐ ಟಿ ಗೆ ದೂರು ಸಲ್ಲಿಸಿ ತನಿಖೆ ನಡೆಸಲು ಕೋರಿದ್ದರು. ನಂತರ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿ ತಾವು ನೀಡಿದ ಮಾಹಿತಿ ಪ್ರಕಾರ ತನಿಖೆ ನಡೆಸಲು ಕೋರಿದ್ದರು.
ಈ ಪ್ರಕರಣ ಇಂದು ಮಾನ್ಯ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಎಸ್ ಐ ಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರು ಹಾಜರಾಗಿ, ಚಿನ್ನಯ್ಯ ನೀಡಿದ ದೂರು ಸುಳ್ಳಿನಿಂದ ಕೂಡಿದ್ದು, ಆತ ನೀಡಿದ ದೂರಿನಲ್ಲಿ ಯಾವುದೇ ಹುರುಳಿಲ್ಲ, ಯಾವುದೇ ಸತ್ಯಾಂಶವಿಲ್ಲದಿದ್ದಿಂದ ಆತನನ್ನೇ ಆರೋಪಿಯನ್ನಾಗಿ ಮಾಡಲಾಗಿದೆ. ಈ ಬುರುಡೆ ಪ್ರಕರಣಕ್ಕೆ ಸಂಭಂಧಿಸಿದಂತೆ ಚಿನ್ನಯ್ಯ ತಂದ ಬುರುಡೆ ಚಿನ್ನಯ್ಯ ಉತ್ಖನನ ಮಾಡಿದ್ದಲ್ಲ, ಇತರ ಇಬ್ಬರು ಸಹಕಾರವನ್ನು ನೀಡಿದ್ದಾರೆ. ಆ ಬುರುಡೆಯನ್ನು ದೆಹಲಿಗೆ ತೆಗೆದುಕೊಂಡು ಹೋಗಿ ನಂತರ ದೂರು ದಾಖಲಿಸಲಾಗಿದೆ. ಈ ಬೆಳವಣಿಗೆಗಳ ಹಿಂದೆ ದೊಡ್ಡ ಷಡ್ಯಂತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಈ ಷ್ಯಡ್ಯಂತದ ಹಿಂದಿರುವ ಕೈಗಳು ಯಾರೆಂದು ತಿಳಿಯುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾನ್ಯ ಹೈಕೋರ್ಟ್ ಗಮನಕ್ಕೆ ತಂದರು.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಚಿನ್ನಯ್ಯನ ಹೇಳಿಕೆಯನ್ನು ಮಾನ್ಯ ಬೆಳ್ತಂಗಡಿ ನ್ಯಾಯಾಲಯ ದಾಖಲಿಸಬೇಕಿತ್ತು, ಸಕಾರಣಗಳಿಲ್ಲದೇ ಮುಂದೂಲಾಗಿದೆ ಎಂಬ ಮಾಹಿತಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಷ್ಯಡ್ಯಂತ್ರದ ಭಾಗವಾಗಿ ಈ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯಲ್ಲಿ ತುಕಾರಾಂ ಹಾಗೂ ಪುರಂದರ ಗೌಡ ಇವರಿಗೆ ಯಾವುದೆ ವಿಶೇಷ ಮಾಹಿತಿ ಇರುವುದಿಲ್ಲ. ಅವರುಗಳು ಚಿನ್ನಯ್ಯ ನೀಡಿದ ಹೇಳಿಕೆ ಪ್ರಕಾರವಾಗಿ ಈ ಅರ್ಜಿಯನ್ನು ಸಲ್ಲಿಸಿರುವುದಾಗಿ ಹೇಳಿರುತ್ತಾರೆ, ಆದಕಾರಣ ಈ ಷಡ್ಯಂತ್ರದ ಭಾಗವಾಗಿ ಅರ್ಜಿ ಸಲ್ಲಿಸಿರುವ ಸಾಧ್ಯತೆ ಇದೆ ಎಂದು ಮಾನ್ಯ ನ್ಯಾಯಾಲಯದ ಗಮನವನ್ನು ವಿಶೇಷ ಸರ್ಕಾರಿ ಅಭಿಯೋಜಕರು ಸೆಳೆದರು.
ಇನ್ನು ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಜಾತಾ ಭಟ್ ನೀಡಿದ ದೂರು ಉಲ್ಲೇಖಿಸಿದ ಅಭಿಯೋಜಕರು, ದೂರಿನ ಅನ್ವಯ ಆರೋಪಿಸಿದಂತೆ ಅನನ್ಯ ಭಟ್ ಅವರ ಮಗಳಲ್ಲ, ಮೃತ ಹೊಂದಿರುವುದು ಧರ್ಮಸ್ಥಳದಲ್ಲಿ ಅಲ್ಲ, ಬೆಂಗಳೂರಿನಲ್ಲಿ ಅದೂ ಕೂಡ ಬೇರೆ ಕಾರಣಗಳಿಂದ. ಈ ದೂರು ಕೂಡ ಷಡ್ಯಂತ್ರದ ಭಾಗ ಎಂದು ಮನವರಿಕೆ ಮಾಡಿಕೊಟ್ಟರು.
ಈ ಎಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯ ಒಂದು ಹಂತದಲ್ಲಿ ಷಡ್ಯಂತ್ರದ ಭಾಗ ಯಾರು, ಯಾರ ವಿರುದ್ಧ ಮಾಡಲಾಗಿದೆ ಎಂಬ ಪ್ರಶ್ನೆ ಮಾನ್ಯ ನ್ಯಾಯಾಲಯ ಇಟ್ಟಾಗ. ಆ ಆಯಾಮದಲ್ಲಿ ತನಿಖೆ ನಡೆಯುತ್ತಿದೆ, ಆರೋಪಿ ಚಿನ್ನಯ್ಯನ ಹೇಳಿಕೆ ದಾಖಲಾದ ದಿನದಲ್ಲಿ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದರು.
ಮಾನ್ಯ ನಂತರ ನ್ಯಾಯಾಲಯ ತುಕಾರಾಮ್ ಗೌಡ ಮತ್ತು ಪುರಂದರ ಗೌಡ ಇವರಿಗೆ ನಿಮ್ಮ ಬಳಿ ಚಿನ್ನಯ್ಯ ನೀಡಿದ ದೂರ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತ್ರವಲ್ಲದೆ ಬೇರೆ ಏನಾದರೂ ದಾಖಲೆಗಳಿದ್ದಲ್ಲಿ ಅದನ್ನು ನ್ಯಾಯಾಲಯದ ಗಮನಕ್ಕೆ ಕೊಡಿ ಆ ನಂತರ ನಾವು ಈ ಬಗ್ಗೆ ಅರ್ಜಿ ವಿಚಾರಣೆಗೆ ಅರ್ಹವೋ ಅಲ್ಲವೋ ಎಂಬ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ದಾಖಲಿಸಿ ಮುಂದಿನ ವಿಚಾರಣೆಯನ್ನು 25.9.2025 ಕ್ಕೆ ಮುಂದೂಡಿದೆ.











