ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಚುನಾಯಿತ ಸದಸ್ಯರ ಅಧಿಕಾರಾವಧಿ ನ.7ರಂದು ಪೂರ್ಣಗೊಳ್ಳಲಿದೆ. ಇದರೊಂದಿಗೆ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಒಂದು ವರ್ಷ ವಿಳಂಬದಿಂದಾಗಿ ಜನಪ್ರತಿನಿಧಿಗಳ ಅಧಿಕಾರಾವಧಿ ಕೂಡಾ ಇದರಿಂದಾಗಿ ಮೊಟಕುಗೊಂಡಂತಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಒಟ್ಟು 11 ಮಂದಿ ಸದಸ್ಯರಿದ್ದು, ಬಿಜೆಪಿ 7 ಹಾಗೂ ಕಾಂಗ್ರೆಸ್ ೪ ಸದಸ್ಯ ಬಲವನ್ನು ಹೊಂದಿದೆ. ಕಳೆದ ಅವಧಿಯ ಚುನಾವಣೆಯಲ್ಲಿ ಬೆಳ್ತಂಗಡಿಯ ಪಟ್ಟಣ ಪಂಚಾಯತ್‌ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿದರು. ಒಟ್ಟು ಐದು ವರ್ಷದ ಅಡಳಿತದಲ್ಲಿ ಪ್ರಥಮ ಅವಧಿಯ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷರಾಗಿ ರಜನಿ ಕುಡ್ವ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಗೌಡ ಟಿ. ಕಾರ್ಯನಿರ್ವಹಿಸಿದ್ದರು.
ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಪ್ರಕ್ರಿಯೆ ವಿಳಂಬಗೊಂಡು ಆಡಳಿತಾಧಿಕಾರಿಗಳು ಸರಿ ಸುಮಾರು 16 ತಿಂಗಳ ಕಾಲ ಕಾರ್ಯನಿರ್ವಹಿಸಿದರು. ೨೦೨೪ರಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡು ಕಳೆದ ಅಕ್ಟೋಬರ್‌ನಲ್ಲಿ ಜಯಾನಂದ ಗೌಡ ಟಿ. ಅಧ್ಯಕ್ಷರಾಗಿ ಹಾಗೂ ಕು| ಗೌರಿ ಉಪಾಧ್ಯರಾಗಿ ಆಯ್ಕೆಯಾಗಿದ್ದರು.
ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಅವಧಿ 30 ತಿಂಗಳು ಆಗಿದ್ದರೂ, ಇದೀಗ ಇವರುಗಳ ಅಧಿಕಾರವಧಿ ಮೊಟಕುಗೊಂಡು ಒಂದು ವರ್ಷ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿದೆ. ಜೊತೆ ಪಂಚಾಯತದ ಎಲ್ಲಾ ಸದಸ್ಯರ ಅವಧಿಯೂ ನ.7ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ವರದಿಯಾಗಿದೆ. ಸರಕಾರ ಮೀಸಲಾತಿ ಪ್ರಕಟಗೊಳಿಸಲು ವಿಳಂಬ ಮಾಡಿರುವುದರಿಂದ ಚುನಾಯಿತ ಪ್ರತಿನಿಧಿಗಳು ತಮ್ಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಆನೇಕ ಪುರಸಭೆ, ಪಟ್ಟಣ ಪಂಚಾಯತುಗಳ ಅಧ್ಯಕ್ಷರು, ಉಪಾಧ್ಯಕ್ಷರು ನ್ಯಾಯಾಲಯದ ಕಟಾಕಟೆಗೆ ಏರಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಹಾಲಿ ಚುನಾಯಿತ ಸದಸ್ಯರ ಅಧಿಕಾವಧಿ ಮುಗಿಯುವವರೆಗೆ ಆಡಳಿತ ಅಧಿಕಾರಿ ನೇಮಿಸದಂತೆ ರಾಜ್ಯ ಹೈಕೋರ್ಟ್ ಆದೇಶಿಸಿದೆ. ಇದರಿಂದಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತದ ಚುನಾಯಿತು ಸದಸ್ಯರ ಅಧಿಕಾರವಧಿ ಮುಂದುರಿಯುತ್ತದೋ, ಅಥವಾ ನ.೭ಕ್ಕೆ ಕೊನೆಗೊಳ್ಳುತ್ತದೋ ಎಂದು ಕಾದು ನೋಡಬೇಕಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಯಾವುದೇ ಮೇಲ್ಮನವಿಯನ್ನು ಸಲ್ಲಿಕೆ ಮಾಡಿಲ್ಲ ಎಂದು ಅಧ್ಯಕ್ಷ ಜಯಾನಂದ ಗೌಡ ತಿಳಿಸಿದ್ದಾರೆ.
ಆಡಳಿತಾಧಿಕಾರಿಗಳ ಅವಧಿ ಪರಿಗಣಿಸಲು ಒತ್ತಾಯ
ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನಲೆಯಲ್ಲಿ ೧೬ ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದ ಅವಧಿಯನ್ನು ತಮ್ಮ ಐದು ವರ್ಷದ ಅಧಿಕಾರವಧಿಗೆ ಪರಿಗಣಿಸಬಾರದು ಮತ್ತು ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡುವ ಕ್ರಮಕ್ಕೆ ಮುಂದಾಗದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ೪೦ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಪ್ರತ್ಯೇಕವಾಗಿ ಸಲ್ಲಿಕೆಯಾಗಿರುವ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.











