ಉಜಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಯಾವತ್ತೂ ಶಿಸ್ತು ಮತ್ತು ಸಂಯಮ ಅಧಿಕವಾಗಿದ್ದು ಈ ಗುಣಗಳೇ ಇತರ ವಿದ್ಯಾರ್ಥಿಗಳಿಗಿಂತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ವಿಭಿನ್ನವಾಗಿಸುತ್ತದೆ ಎಂದು ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಹೇಳಿದರು.
ಅವರು ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ನೀಡುವ ದೀಕ್ಷಾ ಸಮಾರಂಭ ಹಾಗೂ ನಂತರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಮಾತನಾಡುತ್ತಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಯಾವಾಗಲೂ ಶಿಸ್ತು ಬದ್ಧರಾಗಿದ್ದು ಅವರು ಇತರೆ ವಿದ್ಯಾರ್ಥಿಗಳಿಗೆ ಪ್ರೇರಕರಾಗಿರಬೇಕು, ಇಂದು ನೀವು ನಮ್ಮ ಧ್ವಜದಡಿಯಲ್ಲಿ ಪ್ರತೀಜ್ಞೆಗೈದಂತೆ ಯಾವತ್ತೂ ಆ ಪ್ರತಿಜ್ಞೆಗೆ ಬಧ್ಧವಾಗಿರುವಂತೆ ಬದುಕಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನ ದಿನಾಚರಣೆಯ ನಿಮಿತ್ತ ಧ್ವಜ ಚೀಟಿಯನ್ನು ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಬಿಡುಗೊಡೆಗೊಳಿಸಿ ಮಾತಾನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಯಾವತ್ತೂ ಏಕತೆ ಮುಖ್ಯ, ಈ ದಿನ ನಿಮ್ಮ ಪಾಲಿಗೆ ಸುದಿನ, ಇಂದು ನೀವು ಅಧಿಕೃತವಾಗಿ ಅಂತರಾಷ್ಟ್ರೀಯ ಚಳುವಳಿಯಾದ ಸ್ಕೌಟ್ ಸಂಸ್ಥೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಿರಿ ಇನ್ನೂ ಮುಂದೆ ನಿಮ್ಮ ಜವಾಬ್ಧಾರಿ ಇನ್ನೂ ಹೆಚ್ಚಾಗುತ್ತದೆ ಅದನ್ನು ಸಮರ್ಥವಾಗಿ ನಿರ್ವಹಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಿ ಎಂದು ನುಡಿದು ದಳಕ್ಕೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ.ಹೆಚ್ ಮಾತನಾಡಿ ಯಾವಾಗ ನೀವು ಸ್ಕೌಟ್ ಗೈಡ್ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿರೋ ಅವಾಗ ನಿಮ್ಮ ವ್ಯಕ್ತಿತ್ವ ಪರಿಪೂರ್ಣವಾಗಿ ಪರಿಪಕ್ವಗೊಳ್ಳುತ್ತದೆ ಆದ್ದರಿಂದ ನಿಮ್ಮ ಸಕ್ರಿಯ ತೊಡಗಿಸಿಕೊಳ್ಳುವಿಕೆ ಬಹಳ ಮಹತ್ವ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಯುನಿಟ್ ಲೀಡರ್‌ಗಳಾದ ಲಕ್ಷ್ಮಿಶ್ ಭಟ್ ಮತ್ತು ಅಂಕಿತಾ ಎಂ.ಕೆ ಇವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ೨೪ ವಿದ್ಯಾರ್ಥಿಗಳು ರೋವರ್ಸ್ & ರೇಂಜರ್ಸ್ ಪ್ರತಿಜ್ಞೆ ಗೈದು ದೀಕ್ಷೆಯನ್ನು ತೆಗೆದುಕೊಂಡರು.











