ಬೆಳ್ತಂಗಡಿ : ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ವಿಜ್ಞಾನ ಸಂಘ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಇವುಗಳ ಸಹಭಾಗಿತ್ವದಲ್ಲಿ ಒಂದು ದಿನದ ಗಣಿತಶಾಸ್ತ್ರ ಕಾರ್ಯಾಗಾರ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಬೆಳ್ತಂಗಡಿ, ಇದರ ಅಧ್ಯಕ್ಷೆ ಶ್ರೀಮತಿ ಪ್ರೀತಿತಾ ಧರ್ಮ ವಿಜೇತ್ ವಹಿಸಿದ್ದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಇದರ ಅಧ್ಯಕ್ಷರು, ಉಜಿರೆ ಎಸ್.ಡಿ.ಎಮ್ ಕಾಲೇಜಿನ ನಿವೃತ್ತ ಗಣಿತಶಾಸ್ತ್ರ ಪ್ರಾಧ್ಯಾಪಕರಾದ ಪ್ರೊಫೆಸರ್ ಪ್ರಕಾಶ್ ಪ್ರಭು ಆಗಮಿಸಿ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರವನ್ನು ಹೇಗೆ ಅಧ್ಯಯನ ಮಾಡಬೇಕು, ಹೇಗೆ ಲೆಕ್ಕಗಳನ್ನು ಬಿಡಿಸಬೇಕು, ಕಠಿಣತೆಯಿಂದ ಸರಳತೆಗೆ ಗಣಿತವನ್ನು ತರುವ ಕೆಲವೊಂದು ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.
ವಿದ್ಯಾರ್ಥಿಗಳಿಂದ ರಚಿತವಾದ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸುಕೇಶ್ ಕುಮಾರ್, ಉಪ ಪ್ರಾಂಶುಪಾಲರಾದ ಶ್ರೀ ಬಿ.ಎ.ಶಮಿಉಲ್ಲಾ, ಪದವಿ ವಿಭಾಗದ ಪ್ರಾಚಾರ್ಯರಾದ ಡಾ. ಸವಿತಾ ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಸಂಯೋಜಕರಾದ ಶ್ರೀಮತಿ ಮಾಯಾ ಭಟ್ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕರಾದ ಕುಮಾರಿ ಭಾಗ್ಯಶ್ರೀ ಅತಿಥಿಗಳನ್ನು ಪರಿಚಯಿಸಿದರು, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಸೌಜನ್ಯ ಧನ್ಯವಾದವಿತ್ತರು. ಬೌತಶಾಸ್ತ್ರದ ಉಪನ್ಯಾಸಕಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು.











