ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಶಾಂತಿವನ ಕೇಂದ್ರದಲ್ಲಿ 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಭವ್ಯವಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ನಸೀಂ ಬಿ.ಐ., ಪಿ.ಎಸ್. ಗ್ರೇಡ್–2, ಕರ್ನಾಟಕ ಸರ್ಕಾರದ ಕಾರ್ಯದರ್ಶಿಯ ವಸತಿ, ವಿಧಾನಸೌಧ, ಬೆಂಗಳೂರು, “ಶಾಂತಿವನ ನನಗೆ ತವರುಮನೆ. ನಾನು ಪ್ರತಿ ಆರು ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಆರೋಗ್ಯವನ್ನು ಪುನರುಜ್ಜೀವನಗೊಳಿಸಿಕೊಂಡಿರುತ್ತೇನೆ. ಇಲ್ಲಿ ಹೆಚ್ಚಿನ ಜಾಹೀರಾತು ಇಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಇಲ್ಲ — ಜನಮುಖೇನ ಬಂದ ಹೆಸರು ಮಾತ್ರ. ಇವರೆಗೂ ನಾನು 6ಕ್ಕಿಂತಲೂ ಹೆಚ್ಚು ಬಾರಿ ಬಂದಿದ್ದೇನೆ. ಇದು ಲಾಭಕ್ಕಾಗಿ ನಡೆಯುವ ಸಂಸ್ಥೆಯಲ್ಲ, ಶುದ್ಧ ಸೇವೆಯ ಮಂದಿರ. 20 ವರ್ಷಗಳಿಂದ ನಾನು ಇದನ್ನು ಹತ್ತಿರದಿಂದ ಕಂಡಿದ್ದೇನೆ” ಎಂದರು. .

ಶಾಂತಿವನ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಪ್ರಕೃತಿ ಚಿಕಿತ್ಸೆಯ ತತ್ವಗಳನ್ನು ಸರಳವಾಗಿ ವಿವರಿಸಿ, ನಮ್ಮ ದಿನನಿತ್ಯದ ಜೀವನದಲ್ಲಿ ನೈಸರ್ಗಿಕ ಜೀವನಶೈಲಿಯ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದರು.
ಡಾ. ಗೀತಾ ಬಿ. ಶೆಟ್ಟಿರವರು ಪ್ರಕೃತಿ ಚಿಕಿತ್ಸಾ ದಿನದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ‘ಸಾಧಕ’ ಎಂಬ ಪದವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಪರಿಕಲ್ಪನೆಯನ್ನು ರೂಪಿಸಿದ ರುದ್ರಪ್ಪ ಅವರ ಸ್ಮರಣೆ ಮಾಡಿಕೊಂಡು, ಸಮಗ್ರ ಜೀವನಶೈಲಿ ಮತ್ತು ಆತ್ಮಸಾಧನೆಯ ಅಗತ್ಯತೆಯನ್ನು ರೇಖಾಂಕಿಸಿದರು.
ಸ್ಥಾನಿಕ ವೈದ್ಯಕೀಯ ಅಧಿಕಾರಿ ಡಾ. ಬಿಂದು ಅವರು ಕೃತಜ್ಞತಾ ಸೂಚನೆ ಸಲ್ಲಿಸಿ ನಂತರ ಸಾಧಕರ ಪರವಾಗಿ ಮಾತನಾಡಿದ ಕೆ.ಕೆ. ಕೆಂಚಣಗೌಡ ಅವರು ತಮ್ಮ ದೀರ್ಘಕಾಲದ ಶಾಂತಿವನ ಅನುಭವವನ್ನು ಹಂಚಿಕೊಂಡು, “ನಾನು ಇಲ್ಲಿ 36 ಬಾರಿ ಬಂದಿದ್ದೇನೆ. ನಾನು ಅಸ್ವಸ್ಥನಾಗಿದ್ದಾಗಲೂ, ಆರೋಗ್ಯವಾಗಿದ್ದಾಗಲೂ, ಸರ್ಜರಿ ಆದಾಗಲೂ, ಮೂಳೆ ಮುರಿದಾಗಲೂ — ಯಾವಾಗಲೂ ಶಾಂತಿವನವೇ ನನ್ನ ನೆಲೆ. ಇಲ್ಲಿ ದೊರೆಯುವ ಸರಳ ಸಲಹೆಗಳು ಮತ್ತು ಸಿಬ್ಬಂದಿಯ ನಗುಮುಖದ ಭರವಸೆ — ರೋಗದ ಅರ್ಧ ಭಾಗವನ್ನು ಅಲ್ಲಿಯೇ ಗುಣಪಡಿಸುತ್ತದೆ” ಎಂದರು.
ವೇದಿಕೆಯಲ್ಲಿ ಡಾ. ಶಿವಪ್ರಸಾದ್ ಶೆಟ್ಟಿ (ಸಿಎಂಒ), ಡಾ. ಗೀತಾ ಬಿ. ಶೆಟ್ಟಿ, ಜಗನ್ನಾಥ್ (ಎಒ), ಸ್ವಸ್ಥಿಕ್ ಭಟ್ (ಮ್ಯಾನೇಜರ್) ಉಪಸ್ಥಿತರಿದ್ದರು.











