ವೇಣೂರು: ಇಲ್ಲಿಯ ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ವಾರ್ಷಿಕೋತ್ಸವ ಸಮಾರಂಭ ಎಕ್ಸೆಲಿಯಾ-2025 ಕಾರ್ಯಕ್ರಮವು ನ.22ರಂದು ಎಕ್ಸೆಲ್‌ನ ವಿದ್ಯೋದಯ ಕ್ಯಾಂಪಸ್‌ನಲ್ಲಿ ವೈಭವಯುತವಾಗಿ ನಡೆಯಿತು. ಚಿಣ್ಣರ ಆಟದ ಗಿಗಲ್ ಗ್ಯಾಲಕ್ಸಿಯನ್ನು ವಿವಿಧ ಗಣ್ಯರ ಸಹಿತ ಉದ್ಘಾಟನೆ ಮಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಎಚ್. ಮಾಧವ ಭಟ್ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣ ದೊರೆಯಬೇಕು. ಶಾಲೆಯಲ್ಲಿ ಕೇವಲ ಉತ್ತಮ ಅಂಕ ಪಡೆಯುವುದು ಪರಿಪೂರ್ಣ ಶಿಕ್ಷಣವಲ್ಲ. ಬದಲಾಗಿ ಸಮಾಜಕ್ಕೆ ಪ್ರೇರಣದಾಯಕ ಕೆಲಸ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಅಂತಹ ಮೌಲ್ಯಯತ ಶಿಕ್ಷಣ ಎಕ್ಸೆಲ್ ನೀಡುತ್ತಿದೆ ಎಂದರು.

ಮುಂಬೈ ಸೇಫ್ ವಾಟರ್ ಲೈನ್ಸ್ ಇಂಡಿಯಾ ಪ್ರೈ.ಲಿ.ನ ನಿರ್ದೇಶಕರಾದ ಅರುಣ್ ಹೆಗ್ಡೆ ಅವರು ನೂತನ ಕಂಪ್ಯೂಟರ್ ಲ್ಯಾಬ್‌ನನ್ನು ಉದ್ಘಾಟಿಸಿ, ಅಂದು ವಿದ್ಯೋದಯ ಸಂಸ್ಥೆ ನೀಡಿದ ಶಿಕ್ಷಣವನ್ನು ಮೆಲುಕು ಹಾಕಿದರು. ಕಂಪ್ಯೂಟರ್ ಪ್ರಯೋಗಾಲಯವು ಕಂಪ್ಯೂಟರ್‌ಗಳಿರುವ ಕೋಣೆಯಲ್ಲ, ಇದು ವಿದ್ಯಾರ್ಥಿಗಳಿಗೆ ಅನ್ವೇಷಿಸಲು ಒಂದು ಸ್ಥಳವಾಗಿದೆ. ಕಂಪ್ಯೂಟರ್ ಶಿಕ್ಷಣ ಇಂದಿನ ಅಗತ್ಯತೆಯ ಬಗ್ಗೆ ತಿಳಿಸಿ ಮಕ್ಕಳು ಶಿಕ್ಷಣದ ತಾಂತ್ರಿಕವಾಗಿಯೂ ಬೆಳೆಯುವಲ್ಲಿ ಕಂಪ್ಯೂಟರ್ ಶಿಕ್ಷಣ ಪ್ರಯೋಜನಕಾರಿಯಾಗಲಿ ಎಂದರು.

ವಿದ್ಯೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಶಿವರಾಮ್ ಹೆಗ್ಡೆ ಮಾತನಾಡಿ, ನನ್ನ ಬಳಿಕ ಮುಂದುವರಿಸಿಕೊಂಡು ಹೋಗುವವರು ಇಲ್ಲದ ಕಾರಣ ಶಿಕ್ಷಣ ಸಂಸ್ಥೆಯನ್ನು ಎಕ್ಸೆಲ್ ಸಂಸ್ಥೆಗೆ ನೀಡಲಾಗಿದೆ ಎಲ್ಲರೂ ಸಹಕಾರ ನೀಡಿ ಎಂದರು.ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಅವರು ಮಾತನಾಡಿ, ವಿದ್ಯೋದಯ ಸಂಸ್ಥೆಯ ಶಿಕ್ಷಣ ವ್ಯವಸ್ಥೆಯನ್ನು ಕೊಂಡಾಡಿದರು. ರಾಜ್ಯದಲ್ಲೇ ಗುರುತಿಸಿಕೊಂಡಿರುವ ಎಕ್ಸೆಲ್ ವಿದ್ಯಾಸಂಸ್ಥೆ ಇದೀಗ ವೇಣೂರಿನ ಗ್ರಾಮೀಣ ಭಾಗದಲ್ಲಿ ಆರಂಭ ಆಗಿರುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅವರು, ಕಳೆದ ಜೂನ್‌ನಿಂದ ವಿದ್ಯೋದಯ ಸಂಸ್ಥೆಯನ್ನು ಎಕ್ಸೆಲ್ ಆಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನನ್ನ ತಂದೆಯವರು ಓದಿದ ಶಾಲೆ ಇದು, ಇಲ್ಲಿಗೆ ಭಾವನಾತ್ಮಕ ಸಂಬಂಧ ಇದೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮಧ್ಯಮ ಮತ್ತು ಬಡ ಕುಟಂಬದ ಮಕ್ಕಳೇ ಹೆಚ್ಚಾಗಿ ಶಿಕ್ಷಣ ಪಡೆಯುತ್ತಾರೆ. ಗ್ರಾಮೀಣ ಭಾಗ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣಕ್ಕೆ ಶುಲ್ಕವನ್ನು ಪಡೆಯುತ್ತಿದ್ದೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ವ್ಯಕ್ತಿತ್ವ ರೂಪಿಸುವ ಪೋಷಕರು ನಿಜವಾದ ಶ್ರೀಮಂತರು. ಆ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಕುಟುಂಬಕ್ಕೆ ದಾರಿ ದೀಪವಾದಾಗ ಶಾಲೆಯ ನೆನಪು ಮರುಕಳಿಸುತ್ತದೆ. ಪ್ರಾಮಾಣಿಕ ಉದ್ದೇಶ ಇಟ್ಟುಕೊಂಡು ವೇಣೂರಿನಲ್ಲಿ ಎಕ್ಸೆಲ್ ಟೆಕ್ನೊ ಸ್ಕೂಲ್ ಆರಂಭ ಮಾಡಿದ್ದೇವೆ ಎಂದರು.

ಸಂಪೂರ್ಣ ಉಚಿತ ಶಿಕ್ಷಣದ ಘೋಷಣೆ :- ಎಕ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ ಅವರು ಮಾತನಾಡಿ, 2019ರಲ್ಲಿ ಗುರುವಾಯನಕೆರೆಯಲ್ಲಿ ಪ್ರಾಮಾಣಿಕವಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಕೇವಲ 240 ಮಕ್ಕಳಿದ್ದ ಶಾಲೆ ಇಂದು 5000 ಮಕ್ಕಳಿಗೆ ವಿದ್ಯಾರ್ಜನೆಧಾರೆಯೆರೆಯುತ್ತಿದೆ. ಮಕ್ಕಳ ಪೀಸನ್ನು ಸ್ವಂತಕ್ಕೆ ಎಂದೂ ಉಪಯೋಗ ಮಾಡಿಲ್ಲ. ಕೇವಲ ಶಿಕ್ಷಕರ ವೇತನ, ಕಟ್ಟಡ ಹಾಗೂ ಮೂಲ ಸೌಲಭ್ಯಕ್ಕೆ ಉಪಯೋಗ ಮಾಡಿದ್ದೇವೆ. 6ನೇ ತರಗತಿಯಲ್ಲೇ ನೀಟ್, ಜೀ, ಸಿಇಟಿ ಫೌಂಡೇಶನ್ ತರಗತಿ ಇಲ್ಲಿ ನೀಡುತ್ತಿದ್ದೇವೆ. ವೇಣೂರಿನಲ್ಲಿ ಎಸ್‌ಎಸ್‌ಎಲ್‌ಸಿಲ್ಲಿ 96 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಿಸುತ್ತೇವೆ. 7, 8 ಮತ್ತು 9ನೇ ತರಗತಿಯಲ್ಲಿ 96% ಮೇಲೆ ಗಳಿಸಿದ ಮಕ್ಕಳಿಗೆ ನಮ್ಮಲ್ಲಿ ಎಕ್ಸೆಲ್ ಬೆಳಕು ಅಡಿಯಲ್ಲಿ ಉಚಿತ ಶಿಕ್ಷಣ ನೀಡುವ ಕೆಲಸ ಮಾಡಲಿದ್ದೇವೆ. ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯದಲ್ಲಿ ಟಾಪರ್ ಆಗಿ ಬರುವ ಮೂರು ಮಂದಿಗೆ 1 ಲಕ್ಷದಷ್ಟು ನಗದು ಬಹುಮಾನವನ್ನು ಎಕ್ಸೆಲ್ ಸಂಸ್ಥೆ ನೀಡಲಿದೆ ಎಂದರು. ಹುಲ್ಲಿನ ಮನೆಯಲ್ಲಿ ಹುಟ್ಟಿ ಕಡು ಬಡತನದಲ್ಲಿ ಬೆಳೆದವನು ನಾನು. ನಾನು 8ನೇ ತರಗತಿಯಲ್ಲಿ ಉಜಿರೆಯ ರತ್ನಮಾನಸಕ್ಕೆ ಸೇರ್ಪಡೆಗೊಂಡು ಅಲ್ಲಿಂದ ಶಿಕ್ಷಣ ಪಡೆದವನು. ಕಷ್ಟದ ಕಾಲದಲ್ಲಿ ಅಲ್ಲಿ ಕಲಿತ ಶಿಕ್ಷಣ ಇಂದು ನನಗೆ ನಾಯಕತ್ವ ಗುಣ, ಬದುಕುವ ಕಲೆಯನ್ನು ಕಳಿಸಿಕೊಟ್ಟಿದೆ. ಪೂಜ್ಯ ಹೆಗ್ಗಡೆಯವರ ಅಡಿಯಲ್ಲಿ ಪಡೆದ ಅದೇ ರೀತಿಯ ಶಿಕ್ಷಣ ನಮ್ಮ ಸಂಸ್ಥೆಯಲ್ಲೂ ನೀಡಬೇಕೆಂಬ ಭಾವನೆ ನನ್ನದು ಎಂದು ಅವರು ಅಭಿಪ್ರಾಯಿಸಿದರು.

ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕೆ. ಹೆಗ್ಡೆ, ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಸುರೇಶ್ ಕುಮಾರ್ ಆರಿಗ ಪೆರ್ಮಾಣುಗುತ್ತು, ಬಿ.ಜೆ.ಪಿ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ, ಗೇರುಕಟ್ಟೆ ಸರಕಾರಿ ಹೈಸ್ಕೂಲ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ, ಸಂಸ್ಥೆಯ ಆಡಳಿತಾಧಿಕಾರಿ ಶಾಂತಿರಾಜ್ ಜೈನ್, ಮುಖ್ಯ ಶಿಕ್ಷಕಿ ಸುಜಾತ ಬಿ., ವಿದ್ಯಾರ್ಥಿ ಸಂಘದ ನಾಯಕಿ ದಿಶ್ಯಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ಬೆಳಿಗ್ಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆದಿದ್ದು, ಸಂಸ್ಥೆಯ ಚೇರ್‌ಮೆನ್ ಸುಮಂತ್ ಕುಮಾರ್ ಜೈನ್ ಬಿ. ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇದರ ಅಧ್ಯಕ್ಷರಾದ ಎ. ಜಯರಾಮ್ ಶೆಟ್ಟಿ, ವರ್ತಕರ ಸಂಘ ವೇಣೂರು ಇದರ ಅಧ್ಯಕ್ಷರಾದ ಭಾಸ್ಕರ ಪೈ, ವಿದ್ಯೋದಯ ಇದರ ನಿವೃತ್ತ ಮುಖ್ಯೋಪಾಧ್ಯಾಯಿನಿ ಶೀಲಾ ಎಸ್. ಹೆಗ್ಡೆ, ವೇಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್. ನಮನ ಕ್ಲಿನಿಕ್ ವೇಣೂರು ಇದರ ಡಾ. ಶಾಂತಿ ಪ್ರಸಾದ್, ಎಕ್ಸೆಲ್ ಆಡಳಿತಾಧಿಕಾರಿ ಡಾ. ಶಾಂತಿರಾಜ್ ಜೈನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೆ. ವಿಜಯ ಗೌಡ, ಗ್ರಾಂ.ಪಂ ವೇಣೂರು ಇದರ ಸದಸ್ಯ ಅರುಣ್ ಕ್ರಾಸ್ತ, ವೇಣೂರು ಲಯನ್ ಕ್ಲಬ್ ಅಧ್ಯಕ್ಷ ಸುಧೀರ್ ಭಂಡಾರಿ, ಸಿ.ಎ ಬ್ಯಾಂಕ್ ವೇಣೂರು ಇದರ ನಿವೃತ್ತ ಕಾರ್ಯದರ್ಶಿ ಎಚ್. ಮಹಮ್ಮದ್, ಗುರುವಾಯನಕೆರೆ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಭಾಗವಹಿಸಿದ್ದರು.ಗೇರುಕಟ್ಟೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಶಿಕ್ಷಕ ತೀರ್ಥಪ್ರಸಾದ್, ವಿಜ್ಞಾನ ಶಿಕ್ಷಕಿ ಕಾವ್ಯಶ್ರೀ ಎನ್, ಸಮಾಜ ಶಿಕ್ಷಕ ದಾಮೋದರ್, ಇಂಗ್ಲಿಷ್ ಶಿಕ್ಷಕಿ ಪೂಜಾಶ್ರೀ ಕಾರ್ಯಕ್ರಮ ನಿರೂಪಿಸಿ, ಗಣಿತ ಶಿಕ್ಷಕ ಸಾರ್ಥಕ್, ಅರುಣ್ ಕುಮಾರ್, ಸ್ವಾಗತಿಸಿ, ಶ್ವೇತಾ ಕಿರಣ್, ಅಪರ್ಣಾ ವಂದಿಸಿದರು. ಶ್ವೇತಾ ಜೈನ್, ಪ್ರಸಾದ್ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಸ್ಥೆಗೆ ಕಂಪ್ಯೂಟರ್ ಲ್ಯಾಬ್ ಕೊಡುಗೆಯಾಗಿ ನೀಡಿದ ಮುಂಬೈ ಸಾಫ್ಟ್‌ವೇರ್ ಲೈನ್ಸ್ ಇಂಡಿಯಾ ಪ್ರೈ.ಲಿ.ನ ನಿರ್ದೇಶಕರಾದ ಅರುಣ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಅತೀ ಹೆಚ್ಚು ಅಂಕ ಗಳಿಸಿರುವ ತರಗತಿವಾರು ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ಬೆಸ್ಟ್ ಸ್ಟುಡೆಂಟ್ ಅವಾರ್ಡ್ ನೀಡಲಾಯಿತು. ವಿದ್ಯೋದಯ ನಗದು ಪುರಸ್ಕಾರ ಕಳೆದ ಮೂರು ವರ್ಷಗಳಲ್ಲಿ ವಿದ್ಯೋದಯ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ರೂ. 10 ಸಾವಿರ ಹಾಗೂ ರೂ. 5000 ದಂತೆ ವಿದ್ಯಾನಿಧಿ ನೀಡಲಾಯಿತು.











