25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಿ 19-20: ಉಜಿರೆ ಶ್ರೀ ಧ.ಮಂ.ಅ.ಹಿ. ಪ್ರಾ. ಶಾಲೆಗೆ ಶಾಲಾ ಶತಮಾನೋತ್ಸವ ಸಂಭ್ರಮ

ಉಜಿರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಜಿರೆ ಎಂದಾಗ ಎಲ್ಲರಿಗೂ ಸ್ಮೃತಿಪಟಲದಲ್ಲಿ ಮೂಡುವುದು ಶ್ರೀ ಜನಾರ್ದನ ಸ್ವಾಮಿಯ ನಾಮಧೇಯ. ಉಜಿರೆಯಲ್ಲಿ ಪ್ರಸಿದ್ಧಿಯಾಗಿರುವ ಶ್ರೀ ಜನಾರ್ದನ ಸ್ವಾಮಿಯ ದೇಗುಲಕ್ಕೂ, ಇಂದು ನಮ್ಮ ಉಜಿರೆಯ ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಗೂ ಅವಿನಾಭಾವ ಸಂಬಂಧಗಳ ಹಿಂದೆ ಒಂದು ಹಿನ್ನಲೆಯೂ ಇದೆ, ಸಂಬಂಧವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 8-7-1925ರಂದು ಮಲೆನಾಡು ಪ್ರದೇಶವಾದ ಉಜಿರೆಯಲ್ಲಿ ಪ್ರತಿಷ್ಠಿತ ಪಡುವೆಟ್ಟು ಮನೆತನದ ಕೀರ್ತಿಶೇಷ ಶ್ರೀ ಕೃಷ್ಣ ಪಡ್ವೆಟ್ನಾಯರು ಊರಿನ ಜನರ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ತಮ್ಮ ಸ್ವಂತ ಸ್ಥಳ ಹಾಗೂ ಸ್ವಂತ ಕಟ್ಟಡದಲ್ಲಿ ಶಾಲೆಯನ್ನು ಸ್ಥಾಪಿಸಿ ಉಜಿರೆಯ ಆರಾಧ್ಯ ದೇವರಾದ ಶ್ರೀ ಜನಾರ್ದನ ಸ್ವಾಮಿ ಹೆಸರಿನಲ್ಲಿ “ಶ್ರೀ ಜನಾರ್ದನ ಸ್ವಾಮಿ ಎಲಿಮೆಂಟರಿ ಶಾಲೆ” ಎಂದು ನಾಮಕರಣ ಮಾಡಿದರು ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ರವರು ಹೇಳಿದರು.

ಅವರು ಡಿ 16ರಂದು ಉಜಿರೆ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉಡುಪಿಯ ಕಾಪುವಿನ ಜೆ.ಅನಂತಯ್ಯನವರು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮೆನೇಜರ್ ಹುದ್ದೆಯನ್ನು ಅಲಂಕರಿಸಿ ಶಾಲೆಯನ್ನು ನಡೆಸುತ್ತಾ ಬಂದರು. ಆಗ ಈ ಶಾಲೆಯ ಹೆಸರು ಶ್ರೀ ಜನಾರ್ದನ ಕಿರಿಯ ಪ್ರಾಥಮಿಕ ಶಾಲೆ ಎಂದಾಗಿತ್ತು. 1955ರಂದು ಕೀರ್ತಿಶೇಷ ಪೂಜ್ಯ ಶ್ರೀ ಡಿ ರತ್ನವರ್ಮ ಹೆಗ್ಗಡೆಯವರು ಪಟ್ಟಾಭಿಷೇಕ ಆದ ವರ್ಷವೇ, ಈ ಶಾಲೆಯ ಆಡಳಿತವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಸ್ತಾಂತರಿಸಲ್ಪಟ್ಟಿತು ಎಂದರು.

1956 ರಲ್ಲಿ ಹೊಸ ಕಟ್ಟಡಗಳ ನಿರ್ಮಾಣವಾಯಿತು. ಬಳಿಕ 1986ರಲ್ಲಿ ರತ್ನಮಾನಸದ ಪಕ್ಕದಲ್ಲಿ ಷಡ್ಬುಜಾಕೃತಿಯ ನವೀನ ಮಾದರಿಯ ಶಾಲಾ ಕಟ್ಟಡದ ಹೆಚ್ಚುವರಿ ವಿಭಾಗವನ್ನು ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಒದಗಿಸಿ 12/01/1986 ರಂದು ಆಗಿನ ಶಿಕ್ಷಣ ಸಚಿವರಾದ ಕೆ.ರಘುಪತಿಯವರಿಂದ ಉದ್ಘಾಟಿಸಲ್ಪಟ್ಟಿತು.1985 ರಿಂದ ಈ ಶಾಲೆಯು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ(ರಿ) ಉಜಿರೆಯ ಆಡಳಿತಕ್ಕೊಳಪಟ್ಟಿದೆ ಎಂದರು.

1992 ರಿಂದ ಶಾಲಾ ಗೇಟಿನ ರಚನೆ, ಮಕ್ಕಳಿಗೆ ಶೌಚಾಲಯ ಹಾಗೂ ಕ್ರೀಡಾಂಗಣದ ನಿರ್ಮಾಣ ಮೊದಲಾದ ಕಾಮಗಾರಿಗಳು ನಡೆದು, 2002ನೇ ಇಸವಿಯಲ್ಲಿ ವಿಸ್ತ್ರತ ಕಟ್ಟಡದ ಉದ್ಘಾಟನೆಯು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರಿಂದ ನೆರವೇರಿಸಲ್ಪಟ್ಟಿತು ಎಂದರು.

2007 ರಲ್ಲಿ ಶಾಲೆಯ ಅಮೃತ ಮಹೋತ್ಸವ ಸಮಾರಂಭ ಹಾಗೂ ನೂತನ ರಂಗ ಮಂದಿರದ ಉದ್ಘಾಟನಾ ಕಾರ್ಯಕ್ರಮ ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಪೂಜ್ಯ ವಿಜಯರಾಘವ ಪಡ್ವೆಟ್ನಾಯರ ಉಪಸ್ಥಿತಿಯಲ್ಲಿ ನೆರವೇರಿತು.ಪ್ರಸ್ತುತ ಈ ವಿದ್ಯಾಮಂದಿರವು ಸುದೀರ್ಘ ಅವಧಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವಿತ್ತು ಸಮಾಜದ ಶ್ರೇಯಸ್ಸಿಗೆ ಮೇರುಕೊಡುಗೆಯನ್ನಿತ್ತು ಶತಮಾನೋತ್ಸವ ಸಂಭ್ರಮದಲ್ಲಿದೆ ಎಂದರು.

1925 ರಿಂದ 2025ರವರೆಗೆ ಶತ ವರುಷದಲ್ಲಿ ಉಜಿರೆ ಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಡೆದು ಬಂದ ದಾರಿ ಅವಿಸ್ಮರಣೀಯವಾಗಿದೆ. ಇಲ್ಲಿ ವಿದ್ಯೆ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಇಂದು ಸಮಾಜದ ವಿವಿಧ ರಂಗಗಳಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಹಾಗೂ ಬೇರೆ ಬೇರೆ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಿಸಲಾದ ಸುಸಜ್ಜಿತವಾದ ಗ್ರಂಥಾಲಯ ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದರು.

ಡಿ.19ರಂದು ಪೂರ್ವಾಹ್ನ ಸಮಯ 11.00 ರಿಂದ ಶರತ್‌ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ, ಡಿ. ಹರ್ಷೇಂದ್ರಕುಮಾರ್ ಕಾರ್ಯದರ್ಶಿಗಳು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ(ರಿ) ಉಜಿರೆ, ಇವರು ಕಾರ್ಯಕ್ರಮ ಉದ್ಘಾಟಿಸಲಿರುವರು. ವಿಶೇಷ ಅಭ್ಯಾಗತರಾಗಿ ಶ್ರೀಮತಿ ಉಷಾಕಿರಣ್ ಕಾರಂತ್ ಅಧ್ಯಕ್ಷರು, ಗ್ರಾ.ಪ ಉಜಿರೆ. ಶ್ರೀಮತಿ ತಾರಕೇಸರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೆಳ್ತಂಗಡಿ. ಡಾ. ಔದ್ರಮ ಕೆ.ಎ.ಎಸ್ ಕುಲಸಚಿವರು ಬಾಗಲಕೋಟೆ ವಿಶ್ವವಿದ್ಯಾನಿಲಯ, ಶೇಕ್ ಲತೀಫ್, ಕೆ.ಎ.ಎಸ್. ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರು ಭಾಗವಹಿಸಲಿರುವರು ಎಂದರು.

ಡಿ.20 ಶನಿವಾರದಂದು ಸಂಜೆ ಸಮಯ 4.30ರಿಂದ ಧರ್ಮಾಧಿಕಾರಿ ಡಾ। ಡಿ.ವೀರೇಂದ್ರ ಹೆಗ್ಗಡೆಯವರ ಶುಭಾರ್ಶೀವಾದದೊಂದಿಗೆ ಯು.ಟಿ.ಖಾದರ್ ಫರೀದ್, ದಿನೇಶ್ ಗುಂಡೂರಾವ್, ಮಧುಬಂಗಾರಪ್ಪ, ಹರೀಶ್ ಪೂಂಜ ಹಾಗೂ ಸಂಸದರು, ವಿಧಾನ ಪರಿಷತ್ ಸದಸ್ಯರು, ಉಜಿರೆ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನಿವೃತ್ತ ಮತ್ತು ಪ್ರವೃತ್ತ ಶಿಕ್ಷಕರನ್ನು ಆಡಳಿತ ಮಂಡಳಿಯು ಗೌರವಿಸುವ ಕಾರ್ಯಕ್ರಮ ಜರಗಲಿದೆ ಎಂದರು.

ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎಸ್.ಡಿ.ಎಂ ಕಲಾವೈಭವ, ಮಂದಾರ ಕಲಾವಿದರು ಉಜಿರೆ ಇವರಿಂದ ತುಳುನಾಟಕ ಸಂಸ್ಥೆಯ ಹಿರಿಯ ವಿದ್ಯಾರ್ಥಿ ರಜತ್ ಮ್ಯಯರವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಶರತ್ ಕೃಷ್ಣ ಪಡ್ವೆಟ್ನಾಯರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಸತೀಶ್ಚಂದ್ರ ಎಸ್ , ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ನಾಯ್ಕ ಪಿ, ಕ್ಷೇಮಪಾಲನಾ ಅಧಿಕಾರಿ ಧನ್ಯಕುಮಾರ್, ಶಾಲಾ ಶತಮಾನೋತ್ಸವ ಸಮಿತಿ ಕಾರ್ಯದರ್ಶಿಗಳಾದ ಅಬೂಬಕ್ಕರ್, ಕಾರ್ಯಕ್ರಮ ಸಂಯೋಜಕರು ಬಿ.ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ ಮೋಹನ್ ಶೆಟ್ಟಿಗಾರ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಅಬೂಬಕ್ಕರ್ ಉಪಸ್ಥಿತರಿದ್ದರು.

Related posts

ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ: ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Suddi Udaya

ಜು.3 ರಂದು ಬೆಳ್ತಂಗಡಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ: ಅಧ್ಯಕ್ಷ ಪೂರನ್ ವರ್ಮ ಮತ್ತು ತಂಡದ ಸಾಧನೆಗೆ ರೋಟರಿ ಕ್ಲಬ್ ಬೆಳ್ತಂಗಡಿಗೆ “ಡೈಮಂಡ್ ಕ್ಲಬ್ ಪ್ರಶಸ್ತಿ”ಯ ಗೌರವ: 2025-26 ನೇ ಸಾಲಿನ ಅಧ್ಯಕ್ಷರಾಗಿ ಪ್ರಕಾಶ್ ಪ್ರಭು, ಕಾರ್ಯದರ್ಶಿಯಾಗಿ ಡಾ.ಎಂ.ಎಂ ದಯಾಕರ್ ಆಯ್ಕೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ವೃತ್ತಿ ಕೌಶಲ್ಯ ತರಬೇತಿ ‘ಕಾರ್ಯಕ್ರಮ

Suddi Udaya

ಹತ್ಯಡ್ಕ: ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರಿಂದ ಅನುದಾನ ರೂ.5 ಲಕ್ಷ ಮಂಜೂರು

Suddi Udaya
error: Content is protected !!