ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ಹಾಗೂ ಇಲಾಖಾ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಜ.2 ರಂದು ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಿತು.
ಜನರ ಬಳಿಗೆ ತಾಲೂಕು ಆಡಳಿತ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಜನಸ್ಪಂದನ ಸಭೆ ನಡೆದಿದ್ದು ಡಿ.31 ರಂದು ಯಶಸ್ವಿಯಾಗಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಪೂರ್ಣಗೊಂಡಿದೆ. ಜನರ ಸಮಸ್ಯೆಗಳಿಗೆ ಕಿವಿಯಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.

ತಾಲೂಕಿನ ಯಾವುದೇ ಇಲಾಖಾ ಕಚೇರಿಯಲ್ಲಿ ಅಧಿಕಾರಿಗಳು ಚಲಾವಣದ ಪುಸ್ತಕ ಇಲ್ಲ ಜನರು ಇಲಾಖೆಗೆ ಹೋದರೆ ಅಧಿಕಾರಿಗಳು ಇರುವುದಿಲ್ಲ ಎಂದು ನಾಗರೀಕರು ಹೇಳಿದಾಗ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ, ತಕ್ಷಣವೇ ಈ ಪದ್ಧತಿಯನ್ನು ಪಾಲಿಸಿ ಅಧಿಕಾರಿಗಳು ಚಲಾವಣವನ್ನು ದಾಖಲಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಜರಾತಿ ತಂಬ್ ನೀಡಿ ಹೊರಟು ಹೋಗುತ್ತಾರೆ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ಹೊರಟು ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿದಾಗ ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಡಿಹೆಚ್ ಓ ಗಮನಕ್ಕೆ ತರಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಮುಖ್ಯಾಧಿಕಾರಿ ರಾಜೇಶ್ ಕೆ., ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಗಳಿ ನಾರಾಯಣ ರಾವ್, ಇಲಾಖಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.











