ಬೆಳ್ತಂಗಡಿ: ಇಲ್ಲಿಯ ಸುಲ್ಕೇರಿ ಗ್ರಾಮದ ಸುಲ್ಕೇರಿ- ಅಟ್ರಿಂಜೆ ಸೇತುವೆಯ ಸೆಂಟ್ರಿಂಗ್ ಕಾಮಗಾರಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಸುನಿಲ್(19ವರ್ಷ) ಎಂಬಾತ ಅನಾರೋಗ್ಯದಿಂದ ಮೃತಪಟ್ಟ ಘಟನೆ ಜ.2ರಂದು ವರದಿಯಾಗಿದೆ.
ಅಟ್ರಿಂಜೆ ಸೇತುವೆ ಬಳಿ ತನ್ನ ಜೊತೆಗಾರರೊಂದಿಗೆ ಬಿಡಾರದಲ್ಲಿ ವಾಸ್ತವ್ಯವಿದ್ದ ಸುನೀಲ್ ಜ.1ರಿಂದ ಹೊಟ್ಟೆನೋವು ಹಾಗೂ ಗಂಟಲು ನೋವು ಎಂದು ಹೇಳಿ ಕೆಲಸಕ್ಕೆ ರಜೆ ಮಾಡಿ ಬಿಡಾರದಲ್ಲಿ ವಿಶ್ರಾಂತಿಯಲ್ಲಿದ್ದರು. ಜ. 2 ರಂದು ಮಧ್ಯಾಹ್ನ ಅನಾರೋಗ್ಯ ಉಲ್ಬಣಗೊಂಡಿದ್ದು, ಅವರ ಜೊತೆಗಿದ್ದ ಪುತ್ತೂರಿನ ರವಿಕುಮಾರ್ ಅವರು ಹರಿಸಿಂಗ್ ಹಾಗೂ ತೇಜ್ ಸಿಂಗ್ ಎಂಬವರೊಂದಿಗೆ ಮದ್ಯಾಹ್ನ ಸುಮಾರು 3 ಗಂಟೆಗೆ ಅಂಬ್ಯುಲೆನ್ಸ್ ವಾಹನದಲ್ಲಿ ಸುನಿಲ್‌ರನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











