
ಅಳದಂಗಡಿ: ತುಳುನಾಡಿನ ಅತ್ಯಂತ ಕಾರಣೀಕ ಕ್ಷೇತ್ರದಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಸನ್ನಿಧಿಗೆ ದೋರಿಂಜೆ ಅಮಣಿ ಮಂಜು ದೇವಾಡಿಗ ಮತ್ತು ಮಕ್ಕಳಿಂದ ಘಂಟಾ ಗೋಪುರ ಸಮರ್ಪಣೆಯು ಜ.14 ಮಕರ ಸಂಕ್ರಾಂತಿಯ ಪುಣ್ಯ ದಿನದಂದು ನಡೆಯಲಿದೆ.
ಸತ್ಯದೇವತಾ ಕ್ಷೇತ್ರದ ಬಗ್ಗೆ ಭಯಭಕ್ತಿ ಹೊಂದಿರುವ ಅಮಣಿ ಮಂಜು ನಿವಾಸದ ಕುಟುಂಬಿಕರು ಕಳೆದ ೧೩ ವರ್ಷಗಳಿಂದ ನಿರಂತರವಾಗಿ ವರ್ಷದಲ್ಲಿ ಎರಡು ಸಲ ನೇಮೋತ್ಸವ ನಡೆಸುತ್ತ ಬರುತ್ತಿದ್ದಾರೆ. ಮಂಜು ದೇವಾಡಿಗರವರು ಕೂಡ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುತ್ತಿದ್ದರು.
ಘಂಟಾ ಗೋಪುರದ ಸಮರ್ಪಣಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯ್ಲಿ ಆಗಮಿಸಿ ಉದ್ಘಾಟಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇರವೇರಿಸಲಿದ್ದಾರೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮುಂಬಯಿ ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ ಪುಷ್ಪಗಿರಿ, ರಾಜ್ಯ ಧಾರ್ಮಿಕ ಸದಸ್ಯ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ಕೆ.ಎಸ್, ಮಲ್ಲಿಕಾ ಮತ್ತು ನಾರಾಯಣ ದೇವಾಡಿಗ ದುಬೈ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶೈಲಜ ಮತ್ತು ಸುರೇಶ್ ದೇವಾಡಿಗ ದುಬೈ ಭಾಗವಹಿಸಲಿದ್ದಾರೆ.
ಬೆಳಿಗ್ಗೆ ಗಂಟೆ 9.30ರಿಂದ ಅಮಣಿ ಮಂಜು ನಿವಾಸದಿಂದ ಮೆರವಣಿಗೆ ಮೂಲಕ ಘಂಟೆಯನ್ನು ತರಲಾಗುತ್ತಿದ್ದು ಇದರ ಉದ್ಘಾಟನೆಯನ್ನು ಶ್ರೀಮತಿ ಅಮಣಿ ಮಂಜು ದೇವಾಡಿಗರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಈಗಾಗಲೇ ಕ್ಷೇತ್ರದ ಆಡಳಿತದಾರ ಶಿವಪ್ರಸಾದ್ ಅಜಿಲರು ಪೂರ್ವಸಿದ್ದತೆ, ಸಮಾರಂಭದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಸೇವಾಕರ್ತರಾದ ಶ್ರೀಮತಿ ಮತ್ತು ಶೀತಲ್ ಜೈದೀಪ್ ದೇವಾಡಿಗ, ಶ್ರೀಮತಿ ಕಲ್ಪನಾ ಮತ್ತು ಪುಷ್ಪರಾಜ ದೇವಾಡಿಗ ಅವರು ವಿವಿಧ ಸಿದ್ದತೆಗಳನ್ನು ಮಾಡುತ್ತಿದ್ದಾರೆ.
ಘಂಟಾ ಗೋಪುರ- ಘಂಟೆ ಅರ್ಪಣೆ
ಅಮಣಿ ಮಂಜು ದೇವಾಡಿಗ ಕುಟುಂಬವು ದೈವ ದೇವರ ಮೇಲಿನ ಭಕ್ತಿಯಿಂದ ಊರಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ವಿಶೇಷವಾಗಿ ಸೇವೆ ನೀಡುತ್ತಾ ಬರುತ್ತಿದೆ. ದೈವ- ದೇವರ ಮೇಲಿನ ಭಕ್ತಿಯಿಂದ ಸತ್ಯದೇವತಾ ದೈವಸ್ಥಾನಕ್ಕೆ ಸುಮಾರು 80 ಕೆಜಿ ತೂಕದ ಘಂಟೆ ಹಾಗೂ ಘಂಟಾ ಗೋಪುರ ಅರ್ಪಣೆಯಾಗಲಿದೆ. ಇದು ಭಕ್ತಿ, ನಂಬಿಕೆ ಮತ್ತು ಸಂಪ್ರದಾಯದ ಭಾಗವಾಗಿದೆ.











