
ಕಳಿಯ: ದೇವಸ್ಥಾನಕ್ಕೆ ಇಂದು ಮುಂಜಾನೆ 4ಗಂಟೆಗೆ ಧನುಪೂಜೆಗೆ ಮನೆಯಿಂದ ಹೋಗಿದ್ದ ಬಾಲಕನೋರ್ವ ನಿಗೂಢವಾಗಿ ನಾಪತ್ತೆಯಾಗಿದ್ದು ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




ಘಟನೆ ವಿವರ: ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ನಾಪತ್ತೆಯಾದ ಬಾಲಕನಾಗಿದ್ದಾನೆ. ನಾಳ ದೇವಸ್ಥಾನಕ್ಕೆ ಸುಮಂತ್ ಸೇರಿದಂತೆ ಮೂರು ಮಂದಿ ಬಾಲಕರು ಒಟ್ಟಿಗೆ ಹೋಗುತ್ತಿದ್ದು, ಇಂದು ಮುಂಜಾನೆ ಸುಮಂತ್ ಮನೆಯಿಂದ ಬರುವಾಗ ತಡವಾದ್ದರಿಂದ ಇಬ್ಬರು ಬಾಲಕರು ಆತನಿಗಾಗಿ ಕಾದು ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಸುಮಂತ್ ಮನೆಯಿಂದ ಹೊರಟ್ಟಿದ್ದರು ದೇವಸ್ಥಾನಕ್ಕೆ ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಬಾಲಕರು ಆತನ ಮನೆಗೆ ಪೋನ್ ಮಾಡಿದಾಗ ಸುಮಂತ್‌ನ ಮನೆಯವರು ಆತ ದೇವಸ್ಥಾನಕ್ಕೆ ಮುಂಜಾನೆಯೇ ಹೋಗಿದ್ದಾನೆ ಎಂದು ತಿಳಿಸಿದ್ದರು. ಆದರೆ ಆತ ದೇವಸ್ಥಾನಕ್ಕೆ ಬಂದಿಲ್ಲ ಎಂದು ಬಾಲಕರು ಹೇಳಿದಾಗ ಮನೆಯವರು ಆತಂಕಗೊಂಡು ಸ್ಥಳೀಯವಾಗಿ ಮಾಹಿತಿ ನೀಡಿದರು. ಬಾಲಕ ಬರುವ ದಾರಿಯ ನಡುವೆ ಕೆರೆ ಬಳಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೊಲೀಸ್ ಇಲಾಖೆ , ಅಗ್ನಿ ಶಾಮಕ ದಳ ಸ್ಥಳೀಯರು ಸೇರಿ ತೀರಾ ಹುಡುಕಾಟ ನಡೆಸಿದ್ದು ಇದೀಗ ಬಾಲಕನ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರರು ಪೃಥ್ವಿ ಸಾನಿಕಂ, ಆರ್ ಐ ಪಾವಡಪ್ಪ, ಆಡಳಿತಾಧಿಕಾರಿ, ಬಿಒ ತಾರಕೇಸರಿ, ಶಾಲಾ ಶಿಕ್ಷಕರು, ಆಗಮಿಸಿದ್ದರು.











