ಅಳದಂಗಡಿ: ತುಳುನಾಡಿನ ಅತ್ಯಂತ ಕಾರಣೀಕ ಕ್ಷೇತ್ರದಲ್ಲಿ ಒಂದಾಗಿರುವ ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಸನ್ನಿಧಿಗೆ ದೋರಿಂಜೆ ಅಮಣಿ ಮಂಜು ದೇವಾಡಿಗ ಮತ್ತು ಮಕ್ಕಳು ಸೇವಾ ರೂಪದಲ್ಲಿ ನೀಡಿದ `ಆಕರ್ಷಕ ಘಂಟಾ ಗೋಪುರ’ಕ್ಕೆ ವಿಜೃಂಭಣೆಯ ಮೆರವಣಿಗೆ ಮೂಲಕ ಘಂಟೆಯನ್ನು ಕ್ಷೇತ್ರಕ್ಕೆ ತಂದು, ಅಳದಂಗಡಿ ಅರಸರು, ಮಾಜಿ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು, ಗಣ್ಯ ಅತಿಥಿಗಳು, ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಉಪಸ್ಥಿತಿಯಲ್ಲಿ ಜ.೧೪ ಮಕರ ಸಂಕ್ರಾಂತಿಯ ಪುಣ್ಯ ದಿನದಂದು ಶ್ರೀ ಸತ್ಯದೇವತೆ ಕಲ್ಲುರ್ಟಿಗೆ ಸಮರ್ಪಿಸಲಾಯಿತು.

80 ಕೆ.ಜಿ ತೂಕದ ಘಂಟೆಯ ಮೆರವಣಿಗೆ:
ಅಮಣಿ ಮಂಜು ದೇವಾಡಿಗ ಕುಟುಂಬವು ದೈವ-ದೇವರ ಮೇಲಿನ ಭಕ್ತಿಯಿಂದ ಊರಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ವಿಶೇಷವಾಗಿ ಸೇವೆ ನೀಡುತ್ತಾ ಬರುತ್ತಿದೆ. ದೈವ-ದೇವರ ಮೇಲಿನ ಭಕ್ತಿಯಿಂದ ಸತ್ಯದೇವತಾ ದೈವಸ್ಥಾನಕ್ಕೆ ಸುಮಾರು ೮೦ ಕೆಜಿ ತೂಕದ ಘಂಟೆ ಹಾಗೂ ಘಂಟಾ ಗೋಪುರ ಸಮರ್ಪಣೆ ಮಾಡಿದ್ದಾರೆ. ಬೆಳಿಗ್ಗೆ ೧೦ಕ್ಕೆ ಅಮಣಿ ಮಂಜು ನಿವಾಸದಿಂದ ಗೋಪುರದ ಗಂಟೆಯನ್ನು ವಿಜೃಂಭಣೆಯ ಮೆರವಣಿಗೆ ಮೂಲಕ ಅಳದಂಗಡಿ ಕ್ಷೇತ್ರಕ್ಕೆ ತಂದು ನಂತರ ಕಲ್ಲುರ್ಟಿ ದೈವಕ್ಕೆ ಅರ್ಪಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಘಂಟೆ ಬಾರಿಸುವ ಮೂಲಕ ಸಮರ್ಪಣಾ ಕಾರ್ಯಕ್ರಮವನ್ನು ನೆರವೇರಿಸಿದರು.

ಅಳದಂಗಡಿ ಸತ್ಯದೇವತಾ ಕ್ಷೇತ್ರದ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿರುವ ಅಮಣಿ ಮಂಜು ದೇವಾಡಿಗ ಕುಟುಂಬಸ್ಥರು ಕಲ್ಲುರ್ಟಿ ದೈವಕ್ಕೆ ಘಂಟಾ ಗೋಪುರವನ್ನು ಅರ್ಪಿಸುವ ಸಂಕಲ್ಪವನ್ನು ಮಾಡಿದ್ದರು. ಅದರಂತೆ ಸತ್ಯದೇವತಾ ಕಲ್ಲುರ್ಟಿ ಕ್ಷೇತ್ರದ ಎದುರು ಆಕರ್ಷಕ ವಿನ್ಯಾಸದ ಗೋಪುರವನ್ನು ನಿರ್ಮಿಸಿ ಜ.14 ರಂದು ಬೆಳಿಗ್ಗೆ ಅಮಣಿ ಮಂಜು ನಿವಾಸದಿಂದ ಗೋಪುರದ ಗಂಟೆಯನ್ನು ವಿಜೃಂಭಣೆಯ ಮೆರವಣಿಗೆ ಮೂಲಕ ಅಳದಂಗಡಿ ಕ್ಷೇತ್ರಕ್ಕೆ ತಂದು ನಂತರ ಕಲ್ಲುರ್ಟಿ ದೈವಕ್ಕೆೆ ಅರ್ಪಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಘಂಟೆ ಬಾರಿಸುವ ಮೂಲಕ ಸಮರ್ಪಣಾ ಕಾರ್ಯಕ್ರಮವನ್ನು ನೆರವೇರಿಸಿದರು.

ನಂತರ ನಡೆದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಮಾತನಾಡಿ, ನಾವು ದೈವ ದೇವರನ್ನು ನಂಬಿ, ಪೂಜೆ, ಪುನಸ್ಕಾರ ಮಾಡಿದರೆ ಸಾಲದು ಸತ್ಯ, ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ದೇವರ ಅನುಗ್ರಹದ ಜೊತೆಗೆ ಜೀವನದಲ್ಲಿ ಉನ್ನತ ಸಾಧನೆಯನ್ನು ಮಾಡಬಹುದು ಎಂದು ಹೇಳಿದರು. ನಾನು ದೇವಾಡಿಗ ಸಮಾಜದವನು. ನಮ್ಮದು ಸಣ್ಣ ಸಮಾಜ ಆದರೆ ನಾನು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ನಮಗೆ ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ಜಾತಿ ಮುಖ್ಯವಲ್ಲ, ನಾವು ಸತ್ಯದ ನಾಡಿನಲ್ಲಿದ್ದೇವೆ. ಸತ್ಯದ ಹೆಜ್ಜೆಯಿಂದ ಮುನ್ನಡೆಯಬೇಕು ಜೀವನದಲ್ಲಿ ಛಲ ಇದ್ದರೆ ಯಾವುದೇ ಸಾಧನೆಯನ್ನು ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.

ಮನುಷ್ಯತ್ವದಿಂದ ಸತ್ಯ, ನ್ಯಾಯಕ್ಕಾಗಿ ಹೋರಾಟದ ಮೂಲಕ ದೈವತ್ವಕ್ಕೇರಿದವರೇ, ದೈವಗಳು ಆ ದೈವಗಳಲ್ಲಿ ವಿಶೇಷವಾದ ಶಕ್ತಿ ಇದೆ. ನಾವು ಸತ್ಯಧರ್ಮದಿಂದ ನಡೆದಾಗ ಆ ಶಕ್ತಿ ನಮ್ಮಲ್ಲಿ ಬರುತ್ತದೆ. ಸಂಸ್ಕೃತಿಯಿಂದ ಸಮಾಧಾನ, ಶಾಂತಿ ದೊರೆಯುತ್ತದೆ. ಯಾರು ಎಲ್ಲಾ ಜೀವಿಗಳ ಸೇವೆ ಮಾಡುತ್ತಾರೋ ಅವರೇ ನಿಜವಾದ ದೈವಾರಾಧಕರು, ದೈವರಾಧನೆಯಿಂದ ಅನುಗ್ರಹ ಪ್ರಾಪ್ತಿಯಾಗಿ ಜೀವನ ಸಾಕ್ಷಾತ್ಕಾರವನ್ನು ಪಡೆಯುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅವರು ಮಾತನಾಡಿ, ಮಂಜು ದೇವಾಡಿಗರು ಅರನೆಯಲ್ಲಿ ನಡೆಯುವ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದವರು. ಅವರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ. ಮಕ್ಕಳು ಕೂಡಾ ನಮ್ಮ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದೇವಾಡಿಗ ಸಮಾಜಕ್ಕೂ ಅರಮನೆಗೂ ಅವಿನಾಭಾವ ಸಂಬAಧ ಹಿಂದಿನಿಂದಲೂ ಇದೆ ಅರಮನೆಯ ಕಟ್ಟುಕಟ್ಟಲೆಗಳು ಒಳ್ಳೆಯ ರೀತಿಯಲ್ಲಿ ನಡೆಯಲು ದೇವಾಡಿಗ ಸಮಾಜದ ಕೊಡುಗೆಯೂ ಇದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಂಬಯಿ ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರು ಮಾತನಾಡಿ, ಅಮನಿ ದೇವಾಡಿಗರ ಮಕ್ಕಳು ಧಾರ್ಮಿಕ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಸೇವಾ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು. ಮೆರವಣಿಗೆಗೆ ಚಾಲನೆ ನೀಡಿದ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ ಪುಷ್ಪಗಿರಿ ಮಾತನಾಡಿ, ಮಂಜು ದೇವಾಡಿಗರು ಅತ್ಯಂತ ಹೃದಯ ಶ್ರೀಮಂತರು ಅವರ ನೆನಪಿಗಾಗಿ ಅವರ ಮಕ್ಕಳು ಇಂದು ಘಂಟಾ ಗೋಪುರವನ್ನು ನೀಡುವ ಮೂಲಕ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಿದ್ದಾರೆ. ಇದು ಸಮಾಜಕ್ಕೆ ಆದರ್ಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾತನಾಡಿ, ಅಳದಂಗಡಿ ಕ್ಷೇತ್ರದಲ್ಲಿ ಅತ್ಯಂತ ಒಳ್ಳೆಯ ರೀತಿಯಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದು ಈ ಮಣ್ಣಿನ ಶಕ್ತಿಯಾಗಿದೆ. ಇಂದು ಮಂಜು ದೇವಾಡಿಗ ಕುಟುಂಬಸ್ಥರು ಘಂಟಾ ಗೋಪುರ ಒಪ್ಪಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯ ಧಾರ್ಮಿಕ ಸದಸ್ಯ ಮಲ್ಲಿಕಾ ಪಕ್ಕಳ, ಜಯದೀಪ್ ದೇವಾಡಿಗ ಮುಂಬೈ, ನಾರಾಯಣ ದೇವಾಡಿಗ ದುಬೈ ಅವರು ಮಾತನಾಡಿ, ತಮ್ಮ ಕುಟುಂಬದಿAದ ಘಂಟಾ ಗೋಪುರ ನೀಡುವ ಸಂದರ್ಭದಲ್ಲಿ ಸಹಕಾರ ನೀಡಿದ ಗ್ರಾಮದ ಜನತೆಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಶ್ರೀಮತಿ ಅಮಣಿ ಮಂಜು ದೇವಾಡಿಗ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕರ, ಶ್ರೀಮತಿ ಮಲ್ಲಿಕಾ ಮತ್ತು ಶ್ರೀಮತಿ ಶೈಲಜ, ಸುರೇಶ್ ದೇವಾಡಿಗ ದುಬೈ, ಸೇವಾಕರ್ತರಾದ ಶ್ರೀಮತಿ ಶೀತಲ್ ಮತ್ತು ಜೈದೀಪ್ ದೇವಾಡಿಗ, ಶ್ರೀಮತಿ ಕಲ್ಪನಾ ಮತ್ತು ಪುಷ್ಪರಾಜ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶ್ರೀಮತಿ ಅಮಣಿ ಮಂಜು ದೇವಾಡಿಗ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಗೋಪುರವನ್ನು ಆಕರ್ಷಕವಾಗಿ ನಿರ್ಮಿಸಿದ ಶಿಲ್ಪಿಗಳಾದ ವೇಲು ಸ್ವಾಮಿ ಹಾಗೂ ಗಣೇಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರಾದ ಉದ್ಯಮಿ ಮೋಹನ್ ಕುಮಾರ್ ಉಜಿರೆ, ದೇವದಾಸ್ ಶೆಟ್ಟಿ, ನಿತ್ಯಾನಂದ ನಾವರ, ಡಾ. ಪ್ರತೀತ್ ಅಜಿಲ, ಡಾ. ಪ್ರೋಸ್ಟಿಲ್ ಅಜಿಲ, ಡಾ. ಶಶಿಧರ ಡೊಂಗ್ರೆ, ಸುಭಾಶ್‌ಚಂದ್ರ ರೈ, ರಾಕೇಶ್ ಹೆಗ್ಡೆ ಬಳಂಜ, ಸದಾನಂದ ಪೂಜಾರಿ ಉಂಗಿಲಬೈಲ್, ಸುಧೀರ್ ಆರ್. ಸುವರ್ಣ, ಜನಾರ್ದನ ಪೂಜಾರಿ ಕೊಡಂಗೆ, ವಿಜಯ ಕುಮಾರ್ ಜೈನ್, ಅರ್ಚಕ ಪ್ರಕಾಶ್ ಭಟ್, ಉಮೇಶ್ ಸುವರ್ಣ, ಸೋಮನಾಥ ಬಂಗೇರ ವರ್ಪಾಳೆ, ಶ್ರೀನಿವಾಸ ದೊರಿಂಜೆ, ನಿರಂಜನ ಜೋಷಿ, ರವಿರಾಜ ಹೆಗ್ಡೆ ನಾವರ, ಜಗದೀಶ್ ಹೆಗ್ಡೆ, ಮೋಹನ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು. ಯನ್ವಿ ಇವರ ಪ್ರಾರ್ಥನೆ ಬಳಿಕ ಕ್ಷೇತ್ರದ ಆಡಳಿತದಾರ ಶಿವಪ್ರಸಾದ್ ಅಜಿಲ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿ, ಪಿ.ಹೆಚ್ ನಿತ್ಯಾನಂದ ಶೆಟ್ಟಿ ನೊಚ್ಚ ವಂದಿಸಿದರು.











