ಇಳಂತಿಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆದಿರುವ ಮತ್ತು ಕೇಂದ್ರ ಸರಕಾರವು ಹೊಸದಾಗಿ ಜಾರಿ ಮಾಡಿರುವ ವಿಕಸಿತ ಭಾರತ ಗ್ಯಾರಂಟೆ ರೋಜಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಇಳಂತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಸಭೆಯು ನಡೆಯಿತು.
ಗ್ರಾಮಸಭೆಯ ಅಧ್ಯಕ್ಷತೆಯನ್ನು ಸವಿತಾ ವಹಿಸಿದರು. ವಿಬಿ ಜಿ ರಾಮ್ ಜಿ ಯೋಜನೆಯ ಕುರಿತಂತೆ ಸಭೆಯಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಸವಿಸ್ತಾರವಾದ ಮಾಹಿತಿಯನ್ನು ತಾಂತ್ರಿಕ ಅಭಿಯಂತರ ಶರಣ್ ನೀಡಿದರು. ವಿಬಿಜೆ ರಾಮ್ ಜಿ ಯೋಜನೆಯ ಹೆಸರಿನ ಬದಲಾವಣೆಯ ಕುರಿತಂತೆ ಸದಸ್ಯರಾದ ಇಸುಬು ಯು ಕೆ ಸಭೆಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಿದರು.
ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವು 60:40 ಅನುಪಾತದಡಿ ಹಂಚಿಕೆಯಾಗುವುದರಿಂದ ಯೋಜನೆಯ ಅನುಷ್ಠಾನವು ಗ್ರಾಮ ಪಂಚಾಯತ್ ಹಂತದಲ್ಲಿ ಕಷ್ಟಕರವಾಗುವ ಬಗ್ಗೆ ಮತ್ತು ಕೃತಕ ಬುದ್ಧಿಮತ್ತೆ(Al) ತಂತ್ರಜ್ಞಾನದ ಮುಖಾಂತರ ಹಾಜರಾತಿಯು ಕೂಲಿಕಾರರು ನೀಡಬೇಕಾಗಿದ್ದು ಈ ವ್ಯವಸ್ಥೆಯಡಿಯಲ್ಲಿ ಕಾಮಗಾರಿ ಅನುಷ್ಠಾನ ಮಾಡುವುದು ಕಷ್ಟಕರ ಎಂದು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ಬಗ್ಗೆ ಗ್ರಾಮಸ್ಥರು ಬೆಂಬಲ ಸೂಚಿಸಿದ್ದು ಸದ್ರಿ ಅಕ್ಷೇಪಣೆಯನ್ನು ನಡವಳಿಯಲ್ಲಿ ದಾಖಲಿಸಲಾಯಿತು. ಯೋಜನೆಯ ಅನುಷ್ಠಾನವನ್ನು ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ಅನುಮೋದನೆಯನ್ನು ಪಡೆಯಲಾಯಿತು.











