ಬೆಳ್ತಂಗಡಿ: ಪಿ.ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ವೃದ್ಧಿಸುವ ಉದ್ದೇಶದಿಂದ ಜ.29 ರಂದು ವಿದ್ಯಾರ್ಥಿಗಳ ಮೆಟ್ರಿಕ್ ಮೇಳವನ್ನು ಆಯೋಜಿಸಲಾಯಿತು.
ಈ ಮೇಳಕ್ಕೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಅವರು ದೀಪ ಪ್ರಜ್ವಲಿಸುವುದರ ಮೂಲಕ ಅಧಿಕೃತ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಟಿ.ಬಿ, ಶಿಕ್ಷಣ ಸಂಯೋಜಕ ಸಿದ್ದಲಿಂಗಸ್ವಾಮಿ, ಬೆಳ್ತಂಗಡಿ ಕ್ಲಸ್ಟರ್‌ನ ಸಿ.ಆರ್.ಪಿ ಯವರಾದ ವಾರಿಜಾ, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಆರತಿ, ಶಾಲಾ ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪಿ. ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ಸ್ವಯಂ ತಯಾರಿಸಿದ ಅಗತ್ಯ ವಸ್ತುಗಳು, ತರಕಾರಿಗಳು ಹಾಗೂ ವಿವಿಧ ತಿಂಡಿ-ತಿನಿಸುಗಳನ್ನು ಪ್ರದರ್ಶಿಸಿ ಮಾರಾಟ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಆಗಮಿಸಿ ಗ್ರಾಹಕರಾಗಿ ವಿದ್ಯಾರ್ಥಿಗಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡಿದರು.
ಈ ಮೇಳದ ಮೂಲಕ ವಿದ್ಯಾರ್ಥಿಗಳು ಹಣಕಾಸು ವ್ಯವಹಾರ, ಲೆಕ್ಕಾಚಾರ, ಸಂವಹನ ಕೌಶಲ್ಯ ಮತ್ತು ಸ್ವಾವಲಂಬನೆಯ ಮಹತ್ವವನ್ನು ಪ್ರಾಯೋಗಿಕವಾಗಿ ಅನುಭವಿಸಿದರು. ವಿದ್ಯಾರ್ಥಿಗಳ ಆತ್ಮವಿಶ್ವಾಸ, ಉದ್ಯಮಶೀಲತೆ ಹಾಗೂ ಜೀವನೋಪಯೋಗಿ ಕೌಶಲ್ಯಗಳನ್ನು ಬೆಳೆಸುವಲ್ಲಿ ಮೆಟ್ರಿಕ್ ಮೇಳವು ಅತ್ಯಂತ ಯಶಸ್ವಿಯಾಯಿತು.











