September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ


ಉಜಿರೆ: ರಾಜ್ಯ ಸರ್ಕಾರವು ಎಲ್ಲಾ ಔದ್ಯೋಗಿಕ ವಲಯಗಳಿಗೆ ಅನ್ವಯವಾಗಲ್ಲ ಜ್ಞಾನ-ಕೌಶಲ್ಯಾಧಾರಿತ ತಾಂತ್ರಿಕ ಶಿಕ್ಷಣದ ಬಲವರ್ಧನೆಗೆ ಆದ್ಯತೆ ನೀಡುತ್ತಿದ್ದು, ಆಯಾ ಕ್ಷೇತ್ರಗಳ ನಿರೀಕ್ಷೆಗಳಿಗೆ ತಕ್ಕಂತೆ ಯುವಸಂಪನ್ಮೂಲವನ್ನು ಸಶಕ್ತೀಕರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ತಿಳಿಸಿದರು.

ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಫೆ.6ರಂದು ಆಯೋಜಿತವಾದ ಪದವಿ ಪ್ರದಾನ ಸಮಾರಂಭದಲ್ಲಿ ರ‍್ಯಾಂಕ್ ಮನ್ನಣೆ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪದವೀಧರರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಕೌಶಲ್ಯ ಆಧಾರಿತ ತಾಂತ್ರಿಕ ಶಿಕ್ಷಣದ ಹೆಜ್ಜೆಗಳು ನಿಗದಿತ ಪಠ್ಯಕ್ರಮದ ಚೌಕಟ್ಟುಗಳಿಗೆ ಅನುಗುಣವಾಗಿಯೇ ಇರಲಿವೆ. ಹಳೆಯ ಮತ್ತು ಹೊಸ ಔದ್ಯೋಗಿಕ ಕ್ಷೇತ್ರಗಳ ನಿರೀಕ್ಷೆ ಮತ್ತು ಆದ್ಯತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕ್ಷೇತ್ರವಾರು ಕೌಶಲ್ಯ ಕಲಿಕೆಯ ಕ್ರಮಗಳನ್ನು ಮರುರೂಪಿಸುವುದಕ್ಕೆ ಗಮನಹರಿಸಲಾಗುತ್ತಿದೆ ಎಂದರು. ನೀತಿ ಆಯೋಗವು ಗುರುತಿಸಿರುವಂತೆ ರಾಷ್ಟ್ರದಲ್ಲಿ ಬೇಡಿಕೆಗೆ ತಕ್ಕಂತೆ ಉನ್ನತ ಶಿಕ್ಷಣ ಒದಗಿಸುವ ಶೈಕ್ಷಣಿಕ ಸಂಸ್ಥೆಗಳ ಕೊರತೆ ಇದೆ. ನಿಯಮಾವಳಿಗಳ ಪ್ರಕಾರ ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ30 ಶೈಕ್ಷಣಿಕ ಸಂಸ್ಥೆಗಳಿರಬೇಕು. ಈ ಮಾನದಂಡವನ್ನು ಅನ್ವಯಿಸಿ ಅಂಕಿ-ಅಂಶಗಳನ್ನು ಪರಿಶೀಲಿಸಿದರೆ ಕರ್ನಾಟಕದಲ್ಲಿ ಅಗತ್ಯಕ್ಕನುಗುಣವಾಗಿ 66ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಒದಗಿಸುವ ಸಂಸ್ಥೆಗಳಿವೆ. ಸರ್ಕಾರಿ ವಲಯದ ಜೊತೆಗೆ ಖಾಸಗಿ ರಂಗಕ್ಕೆ ಉತ್ತೇಜನ ನೀಡಿದ್ದರಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಬಗೆಯ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಪಡೆಯುವುದಕ್ಕೆ ಪ್ರೇರಣೆ ನೀಡುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನೊಂದಿಗಿನ ಒಡಂಬಡಿಕೆಯ ಮೂಲಕ ಅನುಷ್ಠಾನಗೊಳಿಸಿರುವ ‘ದೀಪಿಕಾ’ ಯೋಜನೆ ಸ್ತ್ರೀ ಶಿಕ್ಷಣದ ಸಾಧ್ಯತೆಗಳನ್ನು ವಿಸ್ತರಿಸುವ ಮಹತ್ವದ ಮೈಲಿಗಲ್ಲಾಗಿದೆ. ಈ ಯೋಜನೆಯಡಿ ಕಳೆದ ಶೈಕ್ಷಣಿಕ ವರ್ಷದಿಂದ ಮೂರುವರ್ಷಗಳವರೆಗೆ ಹತ್ತನೇ ತರಗತಿವರೆಗೆ ಮತ್ತು ಪಿಯುಸಿ ಮೊದಲ, ದ್ವೀತಿಯ ವರ್ಷಗಳ ವ್ಯಾಸಂಗವನ್ನು ಸರ್ಕಾರಿ ಸಂಸ್ಥೆಗಳಲ್ಲಿ ಪೂರೈಸಿದ ವಿದ್ಯಾರ್ಥಿನಿಯರಿಗೆ ಪ್ರತಿವರ್ಷವೂ 30 ಸಾವಿರ ಶಿಷ್ಯವೇತನ ನೀಡಲಾಗುವುದು. ಈಗಾಗಲೇ 1.6 ಲಕ್ಷ ವಿದ್ಯಾರ್ಥಿನಿಯರು ಈ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ ಎಂದು ವಿವರಿಸಿದರು. ಸರ್ಕಾರದ ಸಾಮಾಜಿಕ ಅಭಿವೃದ್ಧಿಯ ಸದಾಶಯಕ್ಕೆ ಸ್ಪಂದಿಸುವ ಖಾಸಗಿ ವಲಯದಿಂದ ಮಹತ್ವದ ಸ್ಥಿತ್ಯಂತರ ಸಾಧ್ಯ ಎನ್ನುವುದನ್ನು ಈ ಯೋಜನೆ ದೃಢಪಡಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಜೀಂ ಪ್ರೇಮ್‌ಜಿ ಬದ್ಧತೆ ಆದರ್ಶಪ್ರಾಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದ ಮಣ್ಣಿಗೆ ಶ್ರೇಷ್ಠತೆಯ ಗುಣದ ಸೊಗಡಿದೆ. ಇದರ ಪ್ರಭೆಯನ್ನು ವಿಸ್ತರಿಸುವಂತೆಯೇ ಉಜಿರೆಯ ನೆಲದಲ್ಲಿ ಅರಳಿಕೊಂಡ ಎಸ್.ಡಿ.ಎಂ ಸಂಸ್ಥೆ ಇಂದು ಕರ್ನಾಟಕದಾದ್ಯಂತ ಹೆಗ್ಗುರುತನ್ನು ಮೂಡಿಸಿದೆ. ಉಜಿರೆಯ ಎಸ್.ಡಿ.ಎಂ ಕಾಲೇಜು ನ್ಯಾಕ್‌ನ ಎ ಪ್ಲಸ್ ಪ್ಲಸ್ ಗ್ರೇಡ್‌ನ ಮನ್ನಣೆ ಪಡೆದಿದೆ. ನ್ಯಾಕ್‌ನಿಂದ ಈ ಮನ್ನಣೆ ಪಡೆಯುವುದು ಅಷ್ಟು ಸುಲಭವಲ್ಲ. ಪ್ರಭಾವಕ್ಕಿಂತ ನ್ಯಾಕ್ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅದರ ಪರಿಶೀಲನೆಯ ಮಾನದಂಡಗಳು ಕಠಿಣದಾಯಕವಾಗಿರುತ್ತವೆ. ಈ ದೃಷ್ಟಿಯಿಂದ ನ್ಯಾಕ್‌ನ ವಿಶೇಷ ಮನ್ನಣೆಗೆ ಪಾತ್ರವಾದ ಎಸ್.ಡಿ.ಎಂ ಸಾಧನೆಯು ಪ್ರಶಂಸನೀಯವಾದದ್ದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕೃಷಿ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುವುದು ಎಂದು ಘೋಷಿಸಿದರು.
ಗುರಿ ಇದ್ದಾಗ ಮಾತ್ರ ದಿಟ್ಟ ಹೆಜ್ಜೆಗಳೊಂದಿಗೆ ಮಹತ್ವದ ಸಾಧನೆ ಸಾಧ್ಯವಾಗುತ್ತದೆ. ಪದವೀಧರರಾದ ಮೇಲೆ ಹಠ ಹಿಡಿದು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮಹತ್ವಾಕಾಂಕ್ಷೆ ಇರಬೇಕು. ಆಗ ವಿಭಿನ್ನವಾಗಿ ಸಾಧನೆಗೈಯ್ಯುವ ಆಲೋಚನೆಗಳು ಹೊಳೆಯುತ್ತವೆ. ಆ ಆಲೋಚನೆಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯೂ ಜೊತೆಯಾಗುತ್ತದೆ. ನೂತನ ಪದವೀಧರರು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದರು.


ಅಂಡಮಾನ್ ನಿಕೋಬಾರ್ ಸೇರಿದಂತೆ ದೇಶದ ಹೊರಗಿನ ಮತ್ತು ದೇಶದ ಇತರೆ ರಾಜ್ಯಗಳವರು, ಕರ್ನಾಟಕದ ವಿವಿಧ ಭಾಗಗಳವರು ಉಜಿರೆಗೆ ಬಂದು ಎಸ್.ಡಿ.ಎಂ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಉನ್ನತ ಶಿಕ್ಷಣಾಕಾಂಕ್ಷಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೊಸ ಕೋರ್ಸ್ಗಳನ್ನು ಪರಿಚಯಿಸುವುದಕ್ಕೆ ಇಲ್ಲಿ ಮೊದಲಿನಿಂದಲೂ ಆದ್ಯತೆ ನೀಡಲಾಗುತ್ತಿದೆ. ಈ ಪರಂಪರೆಯ ಮುಂದುವರೆದ ಭಾಗವಾಗಿ ಕೃಷಿ ವಿಶ್ವವಿದ್ಯಾಲಯ ಆರಂಭಿಸುವ ಕನಸು ಚಿಗುರೊಡೆದಿದೆ ಎಂದು ತಿಳಿಸಿದರು.
ಮಂಗಳೂರು ಕಾಲೇಜಿಯೇಟ್ ಎಜ್ಯುಕೇಷನ್ ಜಂಟಿ ನಿರ್ದೇಶಕಿ ಡಾ.ಕೆ.ಆರ್.ಕವಿತಾ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ, ಉಪ ಪ್ರಾಂಶುಪಾಲರಾದ ಕೆ.ಪಿ.ನಂದಕುಮಾರಿ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವರಾದ ಬಿ.ಗಣೇಶನಾಯಕ್ ಪದವಿ ಫಲಿತಾಂಶವನ್ನು ಘೋಷಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಮಕ್ಷಮ ಪದವಿ ಪ್ರದಾನ ಪ್ರಕ್ರಿಯೆಗಾಗಿ ಅನುಮತಿ ಕೋರಿದರು. ಅಧ್ಯಕ್ಷರು ಅನುಮತಿಸಿದ ನಂತರ ಪದವಿ ಪ್ರದಾನ ಮಾಡಲಾಯಿತು. ಆಡಳಿತಾಂಗ ಕುಲಸಚಿವರಾದ ಪ್ರೊ.ಶ್ರೀಧರ ಎನ್ ಭಟ್ ಅವರು ವಂದಿಸಿದರು. ಪದವಿ ಪ್ರದಾನ ಸಮಾರಂಭದ ಸಮಾರೋಪದ ಘೋಷಣೆಯ ನಂತರ ರಾಷ್ಟçಗೀತೆ ಹಾಡಲಾಯಿತು.

Related posts

ಬೆನ್ನುಹುರಿಯ ದ್ರವ ತುಂಬಿದ ಚೀಲಗಳ ಎಂಡೋಸ್ಕೋಪಿಕ್ ಸರ್ಜರಿ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮತ್ತೊಂದು ಅಪರೂಪದ ಶಸ್ತ್ರಚಿಕಿತ್ಸೆ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರಿಂದ ಎರಡು ಕುಟುಂಬಕ್ಕೆ ಸಹಾಯಹಸ್ತ

Suddi Udaya

ನ.29 ರಂದು ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ: ಸುಮಾರು 7ಕ್ಕೂ ಹೆಚ್ಚು ಸಂಸ್ಥೆಗಳ ಸಹಕಾರ ನಾನಾ ಕ್ರಮ ಹಾಗೂ ಬೇಡಿಕೆಗಳು ಹಾಗೂ ಅಂಶಗಳನ್ನು ಬೆಳೆಗಾರರ ಪರವಾಗಿ ಸರಕಾರಗಳ ಮುಂದಿಟ್ಟು ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶ

Suddi Udaya

ಟೀಮ್ ನವ ಭಾರತ್ ಬೆಳ್ತಂಗಡಿ ಆಶ್ರಯದಲ್ಲಿ ದಿವಂಗತ ತುಷಾರ್ ಕೆ ಇವರ ಸ್ಮರಣಾರ್ಥ ತಾಲೂಕು ಮಟ್ಟದ ಹೊನಲ ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಭಾರಿ ಗಾತ್ರದ ಗುಡ್ಡ ಕುಸಿತ ವಾಹನ ಸಂಚಾರ ಸoಪೂರ್ಣ ಬಂದ್.

Suddi Udaya

ಶಿಬಾಜೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಯುವತಿ ಮೃತಪಟ್ಟ ಘಟನೆ : ತಕ್ಷಣ ಸ್ಪಂದಿಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!