37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿಸಂಘ-ಸಂಸ್ಥೆಗಳು

ನನ್ನ ಸಮಾಜ ಸೇವೆಯೇ ನನಗೆ ಮುಳುವಾಯಿತು: ಬಳಂಜ ಶಾಲೆಯ ಘಟನೆ ಕುರಿತು ಪ್ರವೀಣ್ ಪೂಜಾರಿ ಲಾಂತ್ಯಾರು ಪ್ರತಿಕ್ರಿಯೆ

ಬಳಂಜ: ಶಾಲೆಯೇ ದೇಗುಲವೆಂದು ನಂಬಿ ವಿಶ್ವಾಸದಿಂದ ಉಚಿತ ಸೇವೆಯ ರೂಪದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕಾಗಿ ಶಾಲೆಯಿಂದ ಎರಡು ಕಿ.ಮೀ ದೂರದ ನಾಲ್ಕೂರು ಗ್ರಾಮದ ರಾಮನಗರ ಅನಿಲ್ ಭಟ್ ರವರ ಬಳಂಜ ಪಾರ್ಮ್ ಗೆ ನನ್ನ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದು ನಿಜ.ಅದು ನನ್ನ ತಪ್ಪು ತಿಳುವಳಿಕೆಯಿಂದ ನನಗೆ ಗೊತ್ತಿಲ್ಲದೆ ನಡೆದ ಘಟನೆ. ಆದರೂ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಬರುವವರೆಗೆ ನಾನು ಮತ್ತು ಶಾಲಾ ಶಿಕ್ಷಕ ವೃಂದದವರ ಜೊತೆಗೆ ಮಕ್ಕಳ ಬಗ್ಗೆ ಅತ್ಯಂತ ಜಾಗ್ರತೆ ಮತ್ತು ಕಾಳಜಿಯನ್ನು ವಹಿಸಿಕೊಂಡಿರುತ್ತೇವೆ ಎಂದು ಬಳಂಜ ಶಾಲಾ ಘಟನೆ ಕುರಿತು ಟಿಪ್ಪರ್ ಹಾಗೂ ಪಿಕಪ್ ಮಾಲಕ ಪ್ರವೀಣ್ ಪೂಜಾರಿ ಲಾಂತ್ಯಾರು ಸುದ್ದಿ ಉದಯ ಪತ್ರಿಕೆಗೆ ತಿಳಿಸಿದ್ದಾರೆ‌.

ನಾನು ಬಳಂಜ ಮತ್ತು ಅಟ್ಲಾಜೆ ಶಾಲೆಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದು ವರ್ಷಕ್ಕೆ ಸಾವಿರಾರು ಮೊತ್ತ ದೇಣಿಗೆ ಮತ್ತು ವಸ್ತು ರೂಪದಲ್ಲಿ ಸಹಕರಿಸಿರುತ್ತೇನೆ.ಈ ವಿಷಯದಲ್ಲೂ ಹಾಗೆಯೇ ನಾನು ಯಾವುದೇ ರೀತಿಯ ಬಾಡಿಗೆ ಪಡೆಯುವ ಉದ್ದೇಶವಿಟ್ಟುಕೊಂಡು ನನ್ನ ಪಿಕಪ್ ಮತ್ತು ಟಿಪ್ಪರ್ ನ್ನು ಶಾಲಾ ಮಕ್ಕಳ ಅಧ್ಯಯನ ಪ್ರವಾಸಕ್ಕೆ ನೀಡಿದ್ದಲ್ಲ. ಬಳಂಜ ಪಾರ್ಮ್ ಕೇವಲ ಶಾಲೆಯಿಂದ 2 ಕಿ.ಮೀ ದೂರದಲ್ಲಿರುವಯದರಿಂದ ಶಾಲಾ ಮಕ್ಕಳಿಗೆ ಪ್ರಯೋಜನವಾಗಲೆಂಬ ಒಂದೇ ಉದ್ದೇಶದಿಂದ ಉಚಿತವಾಗಿ ನೀಡಿರುತ್ತೇನೆ.ಅದು ಕೂಡ ಯೂಟ್ಯೂಬ್ ಚಾನೆಲ್ ಗಳು ಹೇಳಿದಂತೆ ಗುರುವಾಯನಕೆರೆ,ಬೆಳ್ತಂಗಡಿ ಕಡೆ ಪೇಟೆ ಸುತ್ತಾಡಿಸಿಲ್ಲ.ಶಾಲೆಯಿಂದ ಹತ್ತಿರವೇ ಗ್ರಾಮೀಣ ಭಾಗಕ್ಕೆ ಕರೆದುಕೊಂಡು ಹೋಗಿದ್ದನ್ನು ಸರಕಾರಿ ಶಾಲೆಯ ಏಳಿಗೆಯನ್ನು ಬಯಸದ ವಿಘ್ನ ಸಂತೋಷಿಗಳು ಉದ್ದೇಶಪೂರ್ವಕವಾಗಿ ಶಿಕ್ಷಣ ಇಲಾಖೆಗೆ ದೂರು ನೀಡಿ ನನ್ನ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಟಿಪ್ಪರ್ ಮತ್ತು ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿರುವುದು ವಿಪರ್ಯಾಸವಾಗಿದೆ. ಇದಲ್ಲದೆ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಕಿರಣ್ ಅವರನ್ನು ಅಮಾನತು ಮಾಡಿರುತ್ತಾರೆ. ಉಪಕಾರಕ್ಕೆ ದಂಡವಾದರೆ ಶಾಲೆಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಊರಿನ ಜನರು ಸೇರಿಕೊಳ್ಳುವುದಾದರು ಹೇಗೆಂದು ಪ್ರಶ್ನೆ ಮೂಡುತ್ತದೆ.

ನನ್ನ ಮನೆಯ ಮಕ್ಕಳಾಗಲಿ ಅಥವಾ ನನ್ನ ಕುಟುಂಬದ ಮಕ್ಕಳಾಗಲಿ ಬಳಂಜ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿಲ್ಲ.ಆದರೂ ನಾನು ಶಾಲೆಯ ಅಭಿವೃದ್ಧಿಗಾಗಿ ಹಣವನ್ನು ಖರ್ಚು ಮಾಡಿದ್ದು ಇನ್ನೂ ಮುಂದಕ್ಕೆ ಬಳಂಜ ಶಾಲೆಯ ಕುರಿತು ಸ್ವಲ್ಪ ಆಲೋಚನೆ ಮಾಡಬೇಕಾಗುತ್ತದೆ.ನನ್ನಲ್ಲಿ ಹಣ ಇದ್ದು ಕೊಟ್ಟದ್ದಲ್ಲ.ಇದು ನಾನು ಕಲಿತ ಶಾಲೆ ಅನ್ನುವ ಕಾರಣಕ್ಕಾಗಿ ಕೊಟ್ಟಿದ್ದೇನೆ. ಆದರೆ ಒಮ್ಮೊಮ್ಮೆ ಮಾಡಿದ ಸೇವೆಯೇ ನನಗೆ ಮುಳುವಾಗಿದ್ದು ಮನಸ್ಸಿಗೆ ತುಂಬಾ ನೋವಾಗಿದೆ.ಇದುವರೆಗೆ ಬಳಂಜ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಪಾಠ ಮಾಡಲು 4 ಶಿಕ್ಷಕರಿದ್ದು ಇದರಲ್ಲಿ ಮುಖ್ಯೋಪಾಧ್ಯಾಯರಾದ ರಂಗಸ್ವಾಮಿಯವರು ಚಿಕಿತ್ಸೆಯ ಉದ್ದೇಶಕ್ಕಾಗಿ ರಜೆಯಲ್ಲಿದ್ದಾರೆ,ಇದೀಗ ಒರ್ವ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ. ಹಾಗಾದರೆ ಎರಡು ಶಿಕ್ಷಕರಿಂದ ಎಷ್ಟು ಪಾಠ ಮಾಡಲು ಸಾಧ್ಯ. ಇದು ಶಿಕ್ಷಣ ಇಲಾಖೆಗೆ ಕಾಣುದಿಲ್ಲವೇ? ಯಾರೋ ಹೇಳಿದರೆಂದು ಏಕಾಏಕಿ ಮಾಧ್ಯಮಗಳಲ್ಲೂ ಬರುವಂತೆ ಮಾಡಿದ ಕಾಣದ ಕೈಗಳು ಯಾರು ಎಂದು ಜನತೆಗೆ ಅರ್ಥ ಆಗಬೇಕು.ಮುಂದಿನ ದಿನಗಳಲ್ಲಿ ಪ್ರಜ್ಞಾವಂತ ನಾಗರಿಕರು ಒಟ್ಟು ಸೇರಿ ಈ ಕುರಿತು ಒಟ್ಟಾಗಿ ಇಂತಹ ದುರುದ್ದೇಶದಿಂದ ಕೂಡಿದ ಶಾಲೆಯ ವಿರೋಧಿ ಮನಸ್ಥಿತಿಯನ್ನು ಖಂಡಿಸಬೇಕಾಗಿದೆ. ಊರವರ ಸಹಕಾರ ಇಲ್ಲದೆ ಶಾಲೆ ನಡೆಯುವುದಾದರೆ ನಡೆಸಲಿ. ಆದರೆ ಶಾಲೆಯಲ್ಲಿ ದಾಖಲಾತಿ ಕೊರತೆಯಾದರೆ,ಗುಣಮಟ್ಟದ ಶಿಕ್ಷಣ ಇಲ್ಲದಿದ್ದರೆ, ಮೂಲಭೂತ ಸೌಕರ್ಯ ಮಕ್ಕಳಿಗೆ ಸಿಗದಿದ್ದರೆ,ಊರವರು ಸುಮ್ಮನಿರಲು ಸಾಧ್ಯವಿಲ್ಲ.ಯಾಕೆಂದರೆ ಇದೇ ಪರಿಸ್ಥಿತಿ ಎದುರಾದರೆ ಮುಂದಿನ ದಿನಗಳಲ್ಲಿ ನನ್ನಂತಹ ನಿಸ್ವಾರ್ಥ ಮನಸ್ಸಿನಿಂದ ಶಾಲೆಯ ಏಳಿಗೆಗೆ ಸಹಕಾರ ನೀಡುವ ಅನೇಕ ಜನರು ಹಿಂದೆ ಸರಿಯಬಹುದು.

ನಾನು ಅಂತೂ ಇನ್ನು ಮುಂದಕ್ಕೆ ಶಾಲೆಯ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದು ತೀರ್ಮಾನಿಸಿದ್ದೇನೆ.ಯಾಕೆಂದರೆ ಯಾವುದೇ ಲಾಭ ಇಲ್ಲದಿದ್ದರೂ ಸಹಾಯ ಮಾಡಲಿಕ್ಕೆ ಹೋಗಿ ಕೈ ಸುಟ್ಟುಕೊಂಡು ಪೊಲೀಸ್ ಠಾಣೆ,ಕೋರ್ಟ್,ಕಚೇರಿ ಅಂತ ಹೇಳಿ ಸಾವಿರಾರು ರೂಪಾಯಿ ನಷ್ಟ ಮಾಡಿಕೊಳ್ಳುವ ಅಗತ್ಯ ನನಗಿಲ್ಲ.ಅಂತಹ ಅನಿವಾರ್ಯತೆಯಲ್ಲಿ ಈಗ ಸಿಲುಕಿಕೊಂಡು ನನ್ನ ಎರಡು ವಾಹನಗಳು ಪೊಲೀಸ್ ಠಾಣೆಯಲ್ಲಿ ನಿಂತಿದೆ.ಇದಕ್ಕೆ ನಾನು ಮಾಡಿದ ದೊಡ್ಡ ತಪ್ಪು ಅಂದರೆ ಟಿಪ್ಪರ್ ಮತ್ತು ಪಿಕಪ್ ವಾಹನವನ್ನು ಉಚಿತವಾಗಿ ಮಕ್ಕಳ ಅಧ್ಯಯನ ಪ್ರವಾಸಕ್ಕೆ ನೀಡಿದ್ದು ಈ ಬಗ್ಗೆ ಗಮನಿಸಿದ್ದಕ್ಕಾಗಿ ಶಿಕ್ಷಣ ಇಲಾಖೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರವೀಣ್ ಪೂಜಾರಿ ಲಾಂತ್ಯಾರು ಬಳಂಜ ಸುದ್ದಿ ಉದಯ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

Related posts

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ “ರಾಷ್ಟ್ರೀಯ ಅಧ್ಯಕ್ಷರ ಭೇಟಿ

Suddi Udaya

ನಿಡ್ಲೆ: ಕಳೆಂಜ ಶೌರ್ಯ ಘಟಕದಿಂದ ಮನೆಯ ಮೇಲೆ ಬಿದ್ದ ಮರ ತೆರವು

Suddi Udaya

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಬೆಳ್ತಂಗಡಿಯಲ್ಲಿ ಬಿಸಿಲ ಬೇಗೆಗೆ ತಂಪು ಮಜ್ಜಿಗೆ ಹಂಚಿ ಬಾಯಾರಿಕೆ ತಣಿಸಿದ ‘ರೆಡ್ ಕ್ರಾಸ್’ ತಂಡ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ

Suddi Udaya

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ಸದಾಶಿವ ಊರ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಆಯ್ಕೆ

Suddi Udaya
error: Content is protected !!