32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಾ.3 ರಿಂದ ಮಾ.11ರವರೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ಮಾ.4ರಂದು ಡಾ. ಹೆಗ್ಗಡೆಯವರಿಂದ ನೂತನ ವಿಜಯಗೋಪುರ ಲೋಕಾರ್ಪಣೆ,

ಉಜಿರೆ: ಇತಿಹಾಸ ಪ್ರಸಿದ್ಧ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು 2026ನೇ ಮಾರ್ಚ್ 3 ರಿಂದ ಮಾರ್ಚ್ 11 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಮಾರ್ಚ್ 4 ರಂದು ಉಜಿರೆಯ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರಾಗಿದ್ದ ಕೀರ್ತಿಶೇಷ ಯು. ವಿಜಯರಾಘವ ಪಡೈಟ್ನಾಯರ ಕನಸು ಮತ್ತು ಸಂಕಲ್ಪದಂತೆ ಭಕ್ತರ ಸಹಕಾರದಿಂದ ನಿರ್ಮಿಸಲಾದ ನೂತನವಾದ ರಾಜಗೋಪುರ “ವಿಜಯಗೋಪುರ” ಇದರ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಹೇಳಿದರು.

ಅವರು ಫೆ.23 ರಂದು ಉಜಿರೆಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಾ. 2 ರಂದು ಬ್ರಹ್ಮಕಲಶೋತ್ಸವದ ಕಾರ್ಯಾಲಯ ಮತ್ತು ಸುವಾಸ ತಂತ್ರಿನಿವಾಸವನ್ನು ಪರಮಪೂಜ್ಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು ಹಂಗಾರಕಟ್ಟೆ ಇವರು ಉದ್ಘಾಟಿಸಲಿದ್ದಾರೆ. ಮಾ. 4 ರಂದು ನಡೆಯುವ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀಗಳ ಸಮ್ಮುಖದಲ್ಲಿ ಧರ್ಮಸ್ಥಳದ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ವಿಜಯಗೋಪುರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.


ಮಾ.8ರಂದು ಬ್ರಹ್ಮರಥ, ಪುಷ್ಪರಥ ಸಮರ್ಪಣೆ:
ಅದೇ ರೀತಿ ಉಜಿರೆಯ ಕಿರಣ್ ರಾವ್ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಬ್ರಹ್ಮರಥದ ಸಮರ್ಪಣೆ ಮತ್ತು ಬೆನಕ ಕನ್‌ಸ್ಟ್ರಕ್ಷನ್ಸ್‌ನ ಗಣೇಶ್ ಗೌಡ ಮತ್ತು ಕುಟುಂಬದವರು ದೇವರಿಗೆ ಸಮರ್ಪಿಸುವ ನೂತನ ಪುಷ್ಪರಥದ ಸಮರ್ಪಣೆಯು ಮಾ. ೮ರಂದು ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಗಳ ಅಮೃತಹಸ್ತದಿಂದ ನಡೆಯಲಿದೆ. ಮಾ.೧೧ ರಂದು ಶ್ರೀಕುಕ್ಕೆಸುಬ್ರಹ್ಮಣ್ಯ ಮಠದ ಶ್ರೀಗಳು, ಉಡುಪಿಯ ಶ್ರೀ ಸೋದೆಶ್ರೀಗಳು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿಸಿದರು.
ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ತಂತ್ರಿವರೇಣ್ಯರಾದ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಇವರ ನೇತೃತ್ವದಲ್ಲಿ ನಡೆಯಲಿದ್ದು, 9 ದಿನಗಳ ಕಾಲ ನಡೆಯುವ ಸಭಾಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ಡಾ|| ಸ್ವಸ್ತಿ ಶ್ರೀ ಭಟ್ಟಾರಕಚಾರು ಕೀರ್ತಿ ಶ್ರೀಗಳು, ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸಸ್ವಾಮೀಜಿಯವರು, ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿಯವರು, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು, ಮಂಗಳೂರಿನ ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು, ಕನ್ಯಾಡಿಯ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನವನ್ನು ನೀಡಲಿದ್ದಾರೆ. ಡಾ||ಮೋಹನ ಆಳ್ವ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ನಾಡಿನ ಗಣ್ಯರು ಮಹನೀಯರು ಮತ್ತು ವಿವಿಧ ಸೇವಾಕರ್ತರು ವಿಶೇಷ ಅಭ್ಯಾಗತರಾಗಿ ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ:
ಪ್ರತಿನಿತ್ಯ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಕೃಷ್ಣಾನುಗ್ರಹ ವೇದಿಕೆ ಮತ್ತು ಪ್ರಧಾನ ವೇದಿಕೆ “ಸುದರ್ಶನ”ದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಸುನಾದ ಭಜನಾ ಕುಟೀರದಲ್ಲಿ ನಿರಂತರ ಭಜನಾ ಸೇವೆ ನಡೆಯಲಿದೆ. ವಿವಿಧ ಸಂಘ ಸಂಸ್ಥೆಯವರು ಮತ್ತು ಭಕ್ತರು ಹೊರೆಕಾಣಿಕೆಯನ್ನು ಈಸಂದರ್ಭದಲ್ಲಿ ಸಮರ್ಪಿಸಲಿದ್ದಾರೆ. ರಾಜಗೋಪುರ ನಿರ್ಮಾಣ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶನದಲ್ಲಿ ಊರವರ ಮತ್ತು ಭಕ್ತರ ಸಂಪೂರ್ಣ ಸಹಕಾರದಿಂದ ಈ ಬ್ರಹ್ಮಕಲಶೋತ್ಸವವು ವಿಶೇಷ ರೀತಿಯಲ್ಲಿ ನಡೆಯಲಿದೆ. ಭಗವಂತನ ಸೇವೆ ಮಾಡುವುದಕ್ಕೆ ಭಕ್ತರಿಗೆ ಅವಕಾಶವಿದ್ದು, ಕಲಶಸೇವೆ, ಅನ್ನದಾನ ಸೇವೆ ಮತ್ತು ತ್ರಿಕರಣಪೂರ್ವಕವಾದ ಯಾವುದೇ ವಿಧವಾದ ಸೇವೆಯನ್ನು ಮಾಡಬಹುದು ಎಂದು ತಿಳಿಸಿದರು.
ಒಟ್ಟು 10 ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸುಮಾರು ಎರಡರಿಂದ ಎರಡೂವರೆ ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಭಕ್ತರ ಆಗಮನಕ್ಕೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿದೆ. ದೇವಸ್ಥಾನದ ಬದಿಯಲ್ಲಿ ಸುಮಾರು ಎಂಟು ಎಕ್ರೆ ಜಾಗದಲ್ಲಿ ಪಾರ್ಕಿಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಜ್ಜರಕಾಡು, ಜನಾರ್ದನ ದೇವಸ್ಥಾನ ಕ್ರೀಡಾಂಗಣ ಸೇರಿದಂತೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಉಜಿರೆ ಜಾತ್ರೆಯ ಬಳಿಕ ಶ್ರಮದಾನದ ಕಾರ್ಯ ನಡೆಯುತ್ತಿದ್ದು ಪ್ರತಿ ದಿನ ನೂರಕ್ಕೂ ಮಿಕ್ಕಿ ಜನರು ಶ್ರಮದಾನ ಮಾಡುತ್ತಾ ಬಂದಿದ್ದಾರೆ. ಉಜಿರೆಯ ವರ್ತಕರು ಭಾರವಾದ ಕಲ್ಲನ್ನು ಹೊತ್ತು ತರುವ ಶ್ರಮದಾನದಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ತೋರ್ಪಡಿಸಿದ್ದಾರೆ. ಪ್ರತಿ ದಿನ ಶ್ರಮದಾನದ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬೆಂಗಳೂರು ಸಮಿತಿಯವರು ಬ್ರಹ್ಮಕಲಶೋತ್ಸವಕ್ಕೆ ಪೂರಕವಾಗಿ ಸುಮಾರು 50 ಲಕ್ಷದ ವಸ್ತುಗಳನ್ನು ನೀಡಲು ಸಿದ್ದತೆ ಅಧ್ಯಕ್ಷ ಮಂಜುನಾಥ ಕನ್ಯಾಡಿ ಇವರ ನೇತೃತ್ವದಲ್ಲಿ ನಡೆಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಲಯ ಮಟ್ಟದಿಂದ ಹೊರಕಾಣಿಕೆ, ಗ್ರಾಮದವರ ಹೊರಕಾಣಿಕೆ ಬರಲಿದೆ. ಎಲ್ಲಾ ಕಾರ್ಯಕ್ರಮಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಹರ್ಷೇಂದ್ರ ಕುಮಾರ್ ಅವರ ಸಹಕಾರದಲ್ಲಿ ನಡೆಯಲಿದೆ. ಉಜಿರೆಯ ಲಕ್ಷ್ಮೀ ಗ್ರೂಪ್‌ನ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಎಲ್ಲಾ ನೈಪುಣ್ಯದ ಕೆಲಸಗಳು ನಡೆಯುತ್ತಿದೆ ಎಂದು ತಿಳಿಸಿದರು.


ಪ್ರತಿಮನೆ, ಮನೆಗೆ ಆಮಂತ್ರಣ:
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಮಾಹತಿ ನೀಡಿ, ದೇವಸ್ಥಾನದಲ್ಲಿ ನಮ್ಮ ಕಲ್ಪನೆಗೂ ಮೀರಿ ಕೆಲಸಗಳು ನಡೆಯುತ್ತಿದ್ದು, ಉಜಿರೆಯ ಪ್ರತಿ ಮನೆ, ಮನೆಗೆ ಆಮಂತ್ರಣ ತಲುಪಿಸಿದೆ. ಆಡಳಿತ ಮೊಕ್ತೇಸರರು ತಮ್ಮ ತಂಡದೊಂದಿಗೆ ನಾಲ್ಕವರೆ ಸಾವಿರ ಮನೆಗಳಿಗೆ ಭೇಟಿ ನೀಡಿ ಆಮಂತ್ರಣ ನೀಡಿದ್ದಾರೆ. ಪ್ರತಿ ಮನೆಯಲ್ಲಿಯೂ ಜನರು ಪ್ರೀತಿ, ವಿಶ್ವಾಸವನ್ನು ತೋರಿಸಿದ್ದಾರೆ ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಗೋಪುರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಮೋಹನ್ ಕುಮಾರ್, ಉಪಾಧ್ಯಕ್ಷ ಮೋಹನ್ ಶೆಟ್ಟಿಗಾರ್, ಪ್ರಕಾಶ್ ಕುದ್ದಣ್ಣಾಯ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ, ಪ್ರಮುಖರಾದ ಭಾಸ್ಕರ ಹೆಗ್ಡೆ, ವೆಂಕಟ್ರಮಣ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಉಮಿದ್ ಪೋರ್ಟಲ್ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಮದ್ರಸ ಪಬ್ಲಿಕ್ ಪರೀಕ್ಷೆ : 5 ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಸನ ಮಡಂತ್ಯಾರು ರಿಗೆ 600 ರಲ್ಲಿ 600 ಅಂಕ

Suddi Udaya

ಬೆಳ್ತಂಗಡಿ: ಚಂಪಿ ಆಟೋ ರಿಕ್ಷಾ ಚಾಲಕ ಶೇಖರ ನಿಧನ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ – ಹದಾ ಆಚರಣೆ

Suddi Udaya

ಮಾಲಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಉಜಿರೆ: ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಯುವ ದಿನಾಚರಣೆ

Suddi Udaya
error: Content is protected !!