ಉಜಿರೆ: ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಾ.8ರಂದು ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥ ಹಾಗೂ ಪುಷ್ಪರಥವನ್ನು ನಿನ್ನೆ (ಮಾ.5)ಸಂಜೆ ದೇಗುಲಕ್ಕೆ ತರಲಾಯಿತು.

ಪ್ರಸ್ತುತ ಅಮೆರಿಕದ ಶ್ರೀ ವೆಂಕಟಕೃಷ್ಣ ಮಂದಿರದ ಅರ್ಚಕ, ಉಜಿರೆ ನಿವಾಸಿ ವೇದಮೂರ್ತಿ ಕಿರಣ್ ರಾವ್ ಮತ್ತು ಮನೆಯವರು ಸಮರ್ಪಣೆ ಮಾಡಲಿರುವ ಬ್ರಹ್ಮರಥವನ್ನು ಕೋಟೇಶ್ವರದ ಕುಂಭಾಶಿಯಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಟ್ರಕ್ ಮೂಲಕ ದೇಗುಲದ ವಠಾರಕ್ಕೆ ತರಲಾಯಿತು.

ಉಜಿರೆ ಬೆನಕ ಕನ್‌ಸ್ಟ್ರಕ್ಷನ್ ಮಾಲೀಕ ಗಣೇಶ್ ಗೌಡ ಮತ್ತು ಮನೆಯವರು ಸಮರ್ಪಿಸಲಿರುವ ಪುಷ್ಪರಥವನ್ನು ಕಾರ್ಕಳದಿಂದ ತರಲಾಯಿತು. ಬ್ರಹ್ಮರಥ ಮಡಂತ್ಯಾರು ಮೂಲಕ ಹಾಗೂ ಪುಷ್ಪರಥ ಅಳದಂಗಡಿ ಮೂಲಕ ಆಗಮಿಸಿ, ಗುರುವಾಯನಕೆರೆಯ ನವಶಕ್ತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಎರಡೂ ರಥಗಳನ್ನು ಅಲ್ಲಿಂದ ಒಟ್ಟಾಗಿ ತರಲಾಯಿತು.

ಉಜಿರೆಯ ಜನಾರ್ದನ ಶಾಲೆಯಿಂದ ರಥಗಳನ್ನು, ಕೀಲುಕುದುರೆ, ಸುಡುಮದ್ದು, ಕುಣಿತ ಭಜನೆ, ಮೆರವಣಿಗೆ ಮೂಲಕ ಶ್ರೀ ಜನಾರ್ದನನ ನಾಮಸ್ಮರಣೆಯೊಂದಿಗೆ ಸ್ವಾಗತಿಸಿ ದೇವಸ್ಥಾನದ ವಠಾರಕ್ಕೆ ತರಲಾಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಶಾಸಕ ಹರೀಶ್ ಪೂಂಜ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ ನವಶಕ್ತಿ, ಕಿರಣ್ ರಾವ್ ಮತ್ತು ಕುಟುಂಬಸ್ಥರು, ಗಣೇಶ್ ಗೌಡ ಮತ್ತು ಕುಟುಂಬಸ್ಥರು, ನಾರಾಯಣ ಗೌಡ ಕೊಳಂಬೆ, ಉಮೇಶ್ ಶೆಟ್ಟಿ, ರವಿ ಚಕ್ಕಿತ್ತಾಯ, ರಘುರಾಮ ಶೆಟ್ಟಿ, ವಸಂತ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ರಾಜೇಶ್ ಪೈ, ರವಿ ಕುಮಾರ್ ಬರಮೇಲು, ಹುಕುಂ ರಾಮ್ ಪಟೇಲ್, ಬೆಂಗಳೂರು ಸಮಿತಿ ಅಧ್ಯಕ್ಷ ಮಂಜುನಾಥ್ ಕನ್ಯಾಡಿ, ಸೇರಿದಂತೆ ನಾನಾ ಸಮಿತಿಗಳ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.












