23.5 C
ಪುತ್ತೂರು, ಬೆಳ್ತಂಗಡಿ
June 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಹೋಟೆಲ್ ಉದ್ಯಮಕ್ಕೆ ಪೆಟ್ಟು ಹಾಸ್ಟೇಲ್, ಕ್ಯಾಂಟಿನ್‌ಗೆ ಸಂಕಷ್ಟ

ಬೆಳ್ತಂಗಡಿ: ಇರಾನ್-ಅಮೆರಿಕಾ-ಇಸ್ರೇಲ್ ದೇಶಗಳ ನಡುವಿನ ಸಂಘರ್ಷ ಶಮನಗೊಳ್ಳದೆ ಮುಂದುವರಿದಿದೆ. ಆ ಕಾರಣ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದ್ದು, ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ, ಇತ್ಯಾದಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ. ಇದರ ಪರಿಣಾಮವಾಗಿ ಬೆಳ್ತಂಗಡಿ ತಾಲೂಕಿನ ನಾನಾ ಭಾಗದಲ್ಲಿ ಗ್ಯಾಸ್ ಸಿಲಿಂಡರ್ ವ್ಯತ್ಯಯ ಉಲ್ಬಣಗೊಂಡಿದೆ.

ಮಂಗಳೂರಿನ ಎಚ್‌ಪಿಸಿಎಲ್‌ನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬಿಲ್ಲಿಂಗ್ ವ್ಯವಸ್ಥೆ ಸ್ಥಗಿತಗೊಂಡು, ದ.ಕ. ಹಾಗೂ ಉಡುಪಿ ಜಿಲ್ಲೆಗಳ ಗ್ಯಾಸ್ ವಿತರಕರಿಗೆ ವಾಣಿಜ್ಯ ಸಿಲಿಂಡರ್ ಲಭಿಸುತ್ತಿಲ್ಲ. ಇದನ್ನು ಮೊದಲೇ ಮನಗಂಡ ಕೆಲವು ಹೋಟೆಲ್ ಮಾಲೀಕರು, 2 ದಿನಗಳ ಹಿಂದೆಯೇ ಅಗತ್ಯಕ್ಕಿಂತ ಹೆಚ್ಚು ಕಮರ್ಷಿಯಲ್ ಸಿಲಿಂಡರ್ ಪಡೆದಿದ್ದರೂ ಅರ್ಧ ದಿನ ಉದ್ಯಮ ನಡೆಸುವ ಸಾಧ್ಯತೆ ಇದೆ. ಈ ಮಧ್ಯೆ, ಅಗತ್ಯ ಸೇವೆಗಳಾದ ಆಸ್ಪತ್ರೆ, ಶಾಲೆ ಹಾಗೂ ತುರ್ತು ಸೇವೆಗಳಿಗೆ ಗ್ಯಾಸ್ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಎಲ್ಲಾ ಡೀಲರ್‌ಗಳ ಬಳಿ ಮಂಗಳೂರಿನ ಎಚ್‌ಪಿಸಿಎಲ್ ತುರ್ತು ಸೇವೆಗಳಿಗೆ ಬೇಕಿರುವ ಸಿಲಿಂಡರ್ ಮಾಹಿತಿಯ ವರದಿ ಪಡೆದಿದೆ. ಎಲ್ಲ ಡೀಲರ್‌ಗಳ ವರದಿ ಆಧಾರದ ಮೇಲೆ ರೇಶನಿಂಗ್ ಪದ್ಧತಿಯಲ್ಲಿ ತುರ್ತು ಗ್ರಾಹಕರಿಗೆ ವಾಣಿಜ್ಯ ಸಿಲಿಂಡರ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದೆ ಹಬ್ಬಗಳು, ಜಾತ್ರೆಗಳು, ಶುಭ ಸಮಾರಂಭಗಳ ಸೀಸನ್ ಆರಂಭವಾಗುತ್ತಿದ್ದು, ಅಡುಗೆಗೆ ಕಮರ್ಶಿಯಲ್ ಗ್ಯಾಸ್ ಅವಲಂಬನೆ ಹೆಚ್ಚಿದೆ. ಹಾಗಾಗಿ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಪ್ರಶ್ನೆ ಎದುರಾಗಿದೆ. ಯುದ್ಧ ಮುಂದುವರಿದರೆ ಕಷ್ಟ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಹೋಟಲ್‌ಗಳಿಗೆ ಕಂಟಕ:
ಬೆಳ್ತಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದೆ. ಹೋಟೆಲ್ ಉದ್ಯಮಕ್ಕೂ ಪೆಟ್ಟು ನೀಡುವ ಸಾಧ್ಯತೆ ಇದೆ. ಅಡುಗೆಗೆ ದೊಡ್ಡ ಪ್ರಮಾಣದಲ್ಲಿ ಎಲ್‌ಪಿಜಿ ಅಗತ್ಯವಿರುವುದರಿಂದ ಅಲ್ಲೂ ಪೂರೈಕೆ ವ್ಯತ್ಯಯವಾಗಿರುವುದು ಪರಿಣಮಿಸಿದೆ. ಹೋಟೆಲ್‌ಗಳಿಗೆ ಸಿಲಿಂಡರ್ ಸರಬರಾಜು ಆಗದ ಕಾರಣ ಪ್ರಸ್ತುತ ಸ್ಟಾಕ್‌ವಿರುವ ಗ್ಯಾಸ್ ಸಿಲಿಂಡರ್‌ನ್ನು ಅವಲಂಬಿಸಲಾಗಿದೆ. ಅವುಗಳ ಕೂಡ 2-3ದಿನಗಳಲ್ಲಿ ಮುಗಿಯಲಿದ್ದು ಗ್ಯಾಸ್ ಸಿಲಿಂಡರ್ ಪೂರೈಕೆಯಾಗದಿದಲ್ಲಿ ಹೋಟೆಲ್‌ಗಳನ್ನು ಬಂದ್ ಮಾಡುವ ಚಿಂತನೆ ಇದೆ. ಖಾಸಗಿ ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಗೊಂಡಿದ್ದು ಅದನ್ನು ಬಳಸಿಕೊಂಡು ಉದ್ಯಮ ನಡೆಸುವುದು ಕಷ್ಟ ಎಂದು ಸುದ್ದಿ ಉದಯಕ್ಕೆ ಹೋಟೆಲ್ ಉದ್ಯಮಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಗ್ಯಾಸ್ ಸಿಲಿಂಡರ್ ಹಾಹಾಕಾರದಿಂದ ಒಂದು ವೇಳೆ ಹೋಟೆಲ್ ಸ್ಥಗಿತಗೊಂಡರೆ ದಿನ ನಿತ್ಯವೂ ಹೋಟೆಲ್ ಅವಲಂಬನೆ ಮಾಡಿರುವ ಉದ್ಯೋಗಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಹೋಟೆಲ್, ಮಾಲೀಕರು, ಕಾರ್ಮಿಕರು, ತರಕಾರಿ, ದಿನಸಿ ಸಾಮಾಗ್ರಿಗಳನ್ನು ಪೂರೈಸುವರು ಸಂಕಷ್ಟ ಎದುರಿಸಬೇಕಾದ ಅನಿವಾರ್ಯತೆ ಉಂಟಾಗಬಹುದು. ಸಂಜೆ ರಸ್ತೆ ಬದಿಯ ಆಹಾರ ವ್ಯಾಪಾರಿಗಳಿಗೂ ಗ್ಯಾಸ್ ಬಿಸಿ ತಟ್ಟಿದೆ.

ವಸತಿ ನಿಯಲಕ್ಕೂ ತಟ್ಟಿದ ಬಿಸಿ:
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳು ತಕ್ಷಣಕ್ಕೆ ಸಿಗುತ್ತಿಲ್ಲ. ಇದರ ಪರಿಣಾಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಕುತ್ತು ತಂದಿದೆ. ತಾಲೂಕಿನ ನಾನಾ ಭಾಗದಲ್ಲಿರುವ ವಸತಿ ನಿಲಯಗಳಿಗೂ ಗ್ಯಾಸ್ ಸಿಲಿಂಡರ್ ಅಭಾವ ತಲೆದೂರಿದೆ. ವಸತಿ ನಿಲಯದಲ್ಲಿ ನೂರು ಮಕ್ಕಳಿಗೆ ನಾಲ್ಕು ಬಾರಿ ಅಡುಗೆ ಮಾಡಲಾಗುತ್ತದೆ. ಇದರ ಅನುಸಾರ ಎರಡು ದಿನಕ್ಕೆ 1 ಗ್ಯಾಸ್ ಸಿಲಿಂಡರ್ ಖರ್ಚು ಆಗುತ್ತದೆ ಆಗಾಗಿ 10 ದಿವಸದೊಳಗೆ ಈಗಿರುವ ಸ್ಟಾಕ್ ಗ್ಯಾಸ್ ಸಿಲಿಂಡರ್‌ಗಳು ಮುಕ್ತಾಯಗೊಂಡು ಪೂರೈಕೆಯಾಗದಿದ್ದಲ್ಲಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ. ಒಂದೆಡೆ ಶಾಲಾ ಪರೀಕ್ಷೆಗಳು ನಡೆಯುತ್ತಿವೆ, ಶಾಲಾ ಬಿಸಿಯೂಟಕ್ಕೂ ಗ್ಯಾಸ್ ಅಭಾವ ಬಂದೊದಗಿದೆ. ಇನ್ನೂ ನಾಡಿನ ಕೆಲ ದೇವಾಲಯಗಳಲ್ಲಿ ನಿತ್ಯ ಅನ್ನದಾನ ಸೇವೆಗೆ ಗ್ಯಾಸ್ ವ್ಯತ್ಯಯದ ಬಿಸಿ ತಟ್ಟಿದೆ. ಇನ್ನೊಂದೆಡೆ ದೇವಾಲಯದ ಜಾತ್ರೆ, ಬ್ರಹ್ಮಕಲಶೋತ್ಸವ ಸಹಿತ ನಾನಾ ಸಮಾರಂಭಕ್ಕೂ ಗ್ಯಾಸ್ ಸಿಲಿಂಡರ್ ಸಮಸ್ಯೆ ಪರಿಣಮಿಸುವ ಸಾಧ್ಯತೆ ಇದೆ. ಪಟ್ಟಣ ಭಾಗದಲ್ಲಿ ಹಲವಾರು ಪೇಯಿಂಗ್ ಗೆಸ್ಟ್ ಸಹಿತ ಮೊದಲಾದ ಕಡೆಗಳಲ್ಲಿಯೂ ಗ್ಯಾಸ್ ವ್ಯತ್ಯಯ ಕಂಡು ಬರುತ್ತಿದೆ.

ಬುಕ್ಕಿಂಗ್ ಅವಧಿ ಏರಿಕೆ:
ಕೊಚ್ಚಿನ್‌ನಿಂದ ಪೈಪ್‌ಲೈನ್‌ನಲ್ಲಿ ಮಂಗಳೂರು ಹಾಗೂ ಉಡುಪಿಗೆ ಪೂರೈಕೆಯಾಗುವ ಸಿಎನ್‌ಜಿ ಅನಿಲಕ್ಕೆ ಸದ್ಯ ಸರಕಾರ ನಿಯಂತ್ರಣ ಹೇರಿಲ್ಲ. ಆಸ್ಪತ್ರೆಗಳಿಗೂ ಗ್ಯಾಸ್ ವ್ಯತ್ಯಯ ತಲೆತೋರಿದೆ. ಕ್ಯಾಂಟೀನ್ ಸಹಿತ ನಾನಾ ಉಪಯೋಗಕ್ಕೆ ಬರುವ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯದಿಂದ ಆಸ್ಪತ್ರೆಗಳಿಗೂ ಸಿಲಿಂಡರ್ ಅಭಾವ ಪರಿಣಮಿಸಿದೆ. ಇನ್ನೂ ಈ ಹಿಂದೆ ಸಿಲಿಂಡರ್ ಪಡೆದ ದಿನಾಂಕದಿAದ 21 ದಿನ ಅಂತರದಲ್ಲಿ ಹೊಸ ಬುಕ್ಕಿಂಗ್ ಮಾಡುವ ಅವಕಾಶ ಗ್ರಾಹಕರಿಗೆ ಇತ್ತು. ಇದೀಗ 25 ದಿನಕ್ಕೆ ಹೆಚ್ಚಿಸಲಾಗಿದೆ. ವಾಣಿಜ್ಯ ಬಳಕೆದಾರರಿಗೆ 25 ದಿನಗಳ ಗಡುವಿತ್ತು. ಅದನ್ನೀಗ ೩೦ ದಿನಕ್ಕೆ ಏರಿಸಲಾಗಿದೆ.


ಸಿಲಿಂಡರ್ ಅಲಭ್ಯತೆ ನಡುವೆ, ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನೂ ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಮನೆ ಬಳಕೆ ಸಿಲಿಂಡರ್ ಒಂದರ ದರ ಈ ಹಿಂದೆ ೮೫೫.೫೦ ರೂ. ಇದ್ದು ಮೂರು ದಿನಗಳ ಹಿಂದೆ 60 ರೂ. ಏರಿಕೆಯಾಗಿ, ಪ್ರಸ್ತುತ 915.50 ರೂ.ಆಗಿದೆ. ಕಮರ್ಷಿಯಲ್ ದರ ಈ ಹಿಂದೆ 1,760ರೂ. ಇದ್ದು, ಇದೀಗ 115 ರೂ. ಏರಿಕೆಯಾಗಿ, ಪ್ರಸ್ತುತ 1874 ರೂ. ಆಗಿದೆ. ಒಂದೇ ಸಿಲಿಂಡರ್ ಇರುವ ಮನೆ ಬಳಕೆಯ ಗ್ರಾಹಕರಿಗೆ ಬುಕ್ಕಿಂಗ್ ಅವಧಿಯನ್ನು 21 ದಿನಗಳ ಬದಲಾಗಿ 25 ದಿನಕ್ಕೆ ಹಾಗೂ ಡಬಲ್ ಇದ್ದವರಿಗೆ ೩೦ ದಿನಗಳ ಬದಲಾಗಿ 35 ದಿನಕ್ಕೆ ಏರಿಸಲಾಗಿದೆ. ಅನೇಕ ಗ್ರಾಹಕರಿಗೆ ಗ್ಯಾಸ್ ಬುಕ್ಕಿಂಗ್ ಆಗುತ್ತಿದ್ದರೂ ಒಟಿಪಿ ಬರುತ್ತಿಲ್ಲ. ಇದು ಸಿಲಿಂಡರ್ ಲಭಿಸಲು ತೊಡಕಾಗುತ್ತಿದೆ.

ಉದ್ಯಮಕ್ಕೂ ಸಂಕಷ್ಟ:
ಯುದ್ಧದ ಬಿಸಿ ನಿಧಾನಕ್ಕೆ ಭಾರತಕ್ಕೂ ತಟ್ಟಿದ್ದು, ಮಧ್ಯಪ್ರಾಚ್ಯದ ಸಂಘರ್ಷವು ಕರ್ನಾಟಕದ ಅಡಕೆ ತಟ್ಟೆ ತಯಾರಿಕಾ ಉದ್ಯಮದ ಮೇಲೂ ಪರಿಣಾಮ ಬೀರಿದೆ. ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಅಡಕೆ ಹಾಳೆ ತಟ್ಟೆ ಉತ್ಪಾದನೆ ಕಂಪನಿಯಿಂದ ಹೊರ ರಾಷ್ಟçಗಳಿಗೆ ಹಡಗು ಮೂಲಕ ರಫ್ತು ಆಗಬೇಕಿದ್ದ ಸರಕುಗಳು ಹಡಗುಗಳು ಚಲಿಸದೆ ರಫ್ತುಗೊಳ್ಳುತ್ತಿಲ್ಲ. ಕೆಲವು ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳನ್ನು ಅವಲಂಬಿಸಿ ಕಾರ್ಯಾಚರಿಸುತ್ತಿದ್ದು ಗ್ಯಾಸ್ ವ್ಯತ್ಯಯದಿಂದ ಉತ್ಪನಗಳು ಸ್ತಬ್ಧಗೊಂಡಿದೆ. ಸರಕು ಹಡಗುಗಳು, ವಿಮಾನ ಕಾರ್ಯಾಚರಿಸದಿರುವ ಪರಿಣಾಮ ಹೆಚ್ಚಿನ ಉದ್ಯಮಕ್ಕೆ ಸಂಕಷ್ಟ ಎದುರಾಗುವ ಸ್ಥಿತಿ ನಿರ್ಮಾಣಗೊಳ್ಳಲಿದೆ. ಇದರೊಂದಿಗೆ ಹೊರ ದೇಶಗಳಿಗೆ ರಫ್ತುಗೊಳ್ಳುತ್ತಿದ್ದ ಮೆಣಸು, ಮೊಟ್ಟೆ ಸಹಿತ ನಾನಾ ಉತ್ಪಾದನೆಗಳಿಗೆ ಕೊಡಲಿ ಏಟು ಬಿದ್ದಿದೆ.

ಅಗತ್ಯ ವಸ್ತು ಕಾಯ್ದೆ ಜಾರಿ:
ಪೆಟ್ರೋಲಿಯಂ, ಪೆಟ್ರೋಲಿಯಂ ಉತ್ಪನ್ನ ಮತ್ತು ನೈಸರ್ಗಿಕ ಅನಿಲದ ಪೂರೈಕೆ, ಲಭ್ಯತೆ ಹಾಗೂ ಸಮಾನ ಹಂಚಿಕೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ 1955ರ ಅಗತ್ಯ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿದೆ. ಸರಕಾರದ ಆದೇಶದ ಅನ್ವಯ ಗೃಹ ಬಳಕೆ ಎಲ್‌ಪಿಜಿ ಮಾತ್ರ ಪೂರೈ ಸಬೇಕು, ಮುಂದಿನ ಆದೇಶದವರೆಗೆ ವಾಣಿಜ್ಯ ಸಿಲಿಂಡರ್ ನೀಡುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ತೈಲ ಕಂಪೆನಿಗಳು ಮುಂದಾಗಿವೆ. ಕೆಲವು ಹೋಟೆಲ್‌ಗಳಲ್ಲಿ ಒಂದೆರಡು ದಿನಕ್ಕಾಗುವಷ್ಟೇ ಎಲ್‌ಪಿಜಿ ಗ್ಯಾಸ್ ಇದ್ದು, ಬಳಿಕ ಕಾರ್ಯನಿರ್ವಹಣೆ ಕಷ್ಟ, ಹಾಗಾಗಿ ಮಂಗಳೂರಿನಲ್ಲಿ ಅಡುಗೆ ಅನಿಲವನ್ನೇ ನಂಬಿರುವ ಬಹುತೇಕ ಹೋಟೆಲ್‌ಗಳು ಒಂದೆರಡು ದಿನಗಳ ಬಳಿಕ ಬಂದ್ ಮಾಡಲೇಬೇಕಾದ ಸ್ಥಿತಿಯಲ್ಲಿವೆ ಎನ್ನುತ್ತವೆ ಮೂಲಗಳು.

ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ:
ವಾಣಿಜ್ಯ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಡೀಲರ್‌ಗಳಿಗೂ ಬೇಕಾದ ಪ್ರಮಾಣದಲ್ಲಿ ಸಿಲಿಂಡರ್ ಸರಬರಾಜುಗೊಳ್ಳುತ್ತಿಲ್ಲ. ಗ್ಯಾಸ್ ಅಭಾವದಿಂದ ಆಸ್ಪತ್ರೆ-ಹಾಸ್ಟೆಲ್, ಹೋಟೆಲ್‌ಗಳಿಗೆ ಸಮಸ್ಯೆಯಾಗಿದೆ. ನಾವು ತುರ್ತು ಸೇವೆಗಳಿಗೆ-ಬೇಕಿರುವ ಸಿಲಿಂಡರ್ ಮಾಹಿತಿಯ ವರದಿಯನ್ನು ಕಲಿಸಿದ್ದೇವೆ. – ಅಭಿನಂದನ್ ಹರೀಶ್ ಕುಮಾರ್
ಹೆಚ್.ಪಿ ಗ್ಯಾಸ್ ಸಾಲಿಯಾನ್ ಎಂಟರ್ಪ್ರೈಸಸ್ ಉಜಿರೆ

ಕಾರ್ಯನಿರ್ವಹಣೆ ಕಷ್ಟ
ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಇಲ್ಲ. ಒಂದೆರಡು ದಿನಕ್ಕಾಗುವಷ್ಟೇ ಗ್ಯಾಸ್ ಸಂಗ್ರಹವಿದೆ. ಆದರೆ ಮುಂದೆ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದಿದ್ದರೆ ಕಾರ್ಯನಿರ್ವಹಣೆ ಕಷ್ಟ. ದುಬಾರಿ ಬೆಲೆ ನೀಡಿ ಗ್ಯಾಸ್ ಖರೀದಿಸಿ, ಲಾಭವಿಲ್ಲದೇ ನಷ್ಟ ಮಾಡಿಕೊಂಡು ಹೋಟೆಲ್ ಉದ್ಯಮ ನಡೆಸುವುದರ ಬದಲು ಬಂದ್ ಮಾಡುವುದೇ ಒಳ್ಳೆಯದು. ಅರವಿಂದ್ ಕಾರಂತ್, ಹೋಟೆಲ್ ಉದ್ಯಮಿ ಉಜಿರೆ.

Related posts

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದ.ಕ ಜಿಲ್ಲಾ ಘಟಕ ಪುನರ್ ಸಂಘಟನೆ: ಸಮಾಲೋಚನಾ ಸಭೆ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವರ ಪ್ರತಿಷ್ಠಾಷ್ಟಬಂಧ ಬಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್ ಅಕ್ಕಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಹಿಳಾ ಮತ್ತು ಜೂನಿಯರ್ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಮಂಗಳೂರಿನ ಅರ್ಕುಳ ಬಳಿ ರಸ್ತೆ ಅಪಘಾತ: ಮುಂಡೂರಿನ ಯುವಕ ಸ್ಥಳದಲ್ಲೇ ಮೃತ್ಯು

Suddi Udaya

ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಆಸರೆ 3ನೇ ಮನೆ ಹಸ್ತಾಂತರ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ, ಅಮೆರಿಕ – ನಾರ್ಥ್ ಕೆರೊಲಿನಾ ವಿವಿ ವೈದ್ಯಕೀಯ ವಿದ್ಯಾರ್ಥಿಗಳ ಭೇಟಿ

Suddi Udaya
error: Content is protected !!