25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಝೇಂಕಾರ ಸೀಜನ್-6 ಉದ್ಘಾಟನೆ

ಉಜಿರೆ: ಪ್ರಚಲಿತ ಜನಜನಿತ ಸಿದ್ಧಸೂತ್ರಗಳಾಚೆಗೆ ಯೋಚಿಸಿ ಹೊಸ ಟ್ರೆಂಡ್ ಹುಟ್ಟುಹಾಕುವ ಪ್ರಯೋಗಶೀಲತೆಯ ಕಡೆಗೇ ಹೆಚ್ಚು ಆದ್ಯತೆ ನೀಡಿದಾಗ ವಿಭಿನ್ನವಾದ ವ್ಯಕ್ತಿಗತ ಪ್ರತಿಭಾನ್ವಿತ ಕಲಾತ್ಮಕತೆ ಸಾಧ್ಯವಾಗುತ್ತದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸ್ಪೀಡ್ ಪೇಂಟಿಂಗ್ ಕಲಾವಿದ ವಿಲಾಸ್ ನಾಯಕ್ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರವು ಝೇಂಕಾರ ಸೀಜನ್ 6 ಶೀರ್ಷಿಕೆಯಡಿ ಆಯೋಜಿಸಿದ ಎರಡು ದಿನಗಳ ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪೀಡ್ ಪೇಂಟಿಂಗ್ ಕಲೆಯನ್ನು ಮೊದಲ ಬಾರಿಗೆ ಪೂರ್ಣಾವಧಿ ವೃತ್ತಿಯಾಗಿಸಿಕೊಳ್ಳುವಾಗ ಹಲವು ಸವಾಲುಗಳಿದ್ದವು. ಸ್ವಂತಿಕೆಯೊಂದಿಗೆ ಯೋಜಿಸಿ ನಿರಂತರವಾಗಿ ತೊಡಗಿಸಿಕೊಳ್ಳುವ ಬದ್ಧತೆಯಿಂದಾಗಿ ಸ್ಪೀಡ್ ಪೇಂಟಿಂಗ್ ಕಲಾವಲಯದ ಮೊದಲ ಪೂರ್ಣಾವಧಿ ವೃತ್ತಿ ಕಲಾವಿದನಾಗಿ ಯಶಸ್ಸು ಗಳಿಸಿಕೊಳ್ಳಲು ತಮಗೆ ಸಾಧ್ಯವಾಯಿತು. ಕಣ್ಣಮುಂದಿನ ಟ್ರೆಂಡ್‌ನ್ನು ಗಮನಿಸಿ ಅದರ ಸ್ಥಾನದಲ್ಲಿ ಹೊಸ ಟ್ರೆಂಡ್‌ಅನ್ನು ಸೃಷ್ಟಿಸುವ ಭರವಸೆ ಜೊತೆಯಾಯಿತು ಎಂದು ಹೇಳಿದರು.

ಈ ಹಿಂದೆ ಕಲಾ ವಲಯದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡ ಪ್ರತಿಭೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದಾಗ ಮಾತ್ರ ಹಲವರಿಗೆ ಗೊತ್ತಾಗುತ್ತಿತ್ತು. ಆದರೆ, ಈಗ ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ಪ್ರತಿಭಾನ್ವಿತ ಯುವಕರು ತಮ್ಮ ಕಲಾಭಿವ್ಯಕ್ತಿಯನ್ನು ತಾವೇ ಅನಾವರಣಗೊಳಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ. ಈ ಅವಕಾಶವನ್ನು ಸ್ವಂತಿಕೆಯ ಬಲದೊಂದಿಗೆ ಸಮರ್ಥವಾಗಿ ಬಳಸಿಕೊಳ್ಳಬೇಕು. ಹಾಗಾದಾಗ ಮಾತ್ರ ಉಳಿದೆಲ್ಲಾ ಸಿದ್ಧಮಾದರಿಗಳಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳಬಹುದು ಎಂದರು.

ಸೋಷಿಯಲ್ ಮೀಡಿಯಾದಲ್ಲಿ ಒಂದು ರೀಲ್ ಅಥವಾ ಯಾವುದೇ ಬಗೆಯ ಅಭಿವ್ಯಕ್ತಿ ಜನಜನಿತವಾದರೆ ಅದೇ ಮಾದರಿಯನ್ನು ಅನುಸರಿಸುವಂತಹ ದೃಶ್ಯಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಈ ಬಗೆಯ ಪುನರಾವರ್ತಿತ ಮಾದರಿಗಳನ್ನಷ್ಟೇ ನೆಚ್ಚಿಕೊಳ್ಳದೇ ಸ್ವಂತ ಪ್ರತಿಭೆಯ ಕಲಾತ್ಮಕತೆಯನ್ನು ವಿಸ್ತರಿಸಿಕೊಳ್ಳುವ ಹಂಬಲದೊಂದಿಗೆ ಆಲೋಚಿಸಬೇಕು. ಆ ಮೂಲಕ ಹೊಸ ಟ್ರೆಂಡ್‌ನ್ನು ಸೃಷ್ಟಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷಿಪ್ರವಾಗಿ ಕರಾವಳಿಯ ಕಲಾತ್ಮಕತೆಯ ವಿನೂತನ ಅಸ್ಮಿತೆಯನ್ನು ಕಾಣಿಸುವ ಚಿತ್ರವಿನ್ಯಾಸವನ್ನು ಬಿಡಿಸಿ ವಿಲಾಸ್ ನಾಯಕ್ ಗಮನ ಸೆಳೆದರು.

ಝೇಂಕಾರದ ಟ್ರೋಫಿಗಳನ್ನು ಅನಾವರಣಗೊಳಿಸಿ ಎಸ್.ಡಿ.ಎಂ ಎಜ್ಯುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಮಾತನಾಡಿದರು. ಸ್ಪರ್ಧಾತ್ಮಕ ಉತ್ಸವಗಳು ಕಲಾತ್ಮಕ ಅಭಿವ್ಯಕ್ತಿಗೆ ಅವಕಾಶ ಒದಗಿಸುವ ವೇದಿಕೆಗಳಷ್ಟೇ ಅಲ್ಲ. ವಿವಿಧ ಕ್ಷೇತ್ರಗಳು ನಿರೀಕ್ಷಿಸುವ ನಾಯಕತ್ವದ ಗುಣಗಳನ್ನು ರೂಪಿಸಿಕೊಳ್ಳಲೂ ಪೂರಕವಾಗುತ್ತವೆ. ಸಂವಹನ ಕೌಶಲ್ಯದ ಹಲವು ಬಗೆಗಳನ್ನು ತಿಳಿದುಕೊಳ್ಳುವುದಕ್ಕೆ ನೆರವಾಗುತ್ತವೆ. ಅಲ್ಲದೇ, ಸಮಾಜದೊಂದಿಗೆ ಬೆರೆತು ಹೆಗ್ಗುರುತು ಮೂಡಿಸುವ ದಾರಿ ತೋರುತ್ತವೆ ಎಂದರು.

ಕಲಾತ್ಮಕ ವಲಯದಲ್ಲಿ ಹೆಗ್ಗುರುತು ಮೂಡಿಸುವುದಕ್ಕೆ ಸಂಬಂಧಿಸಿದಂತೆ ಸಕಾಲಿಕವಾಗಿ ನಿರ್ಧಾರ ಕೈಗೊಳ್ಳುವ ಮನಃಸ್ಥಿತಿ ರೂಪಿಸಿಕೊಳ್ಳಬೇಕು. ಅದಕ್ಕನುಗುಣವಾದ ದೃಢಸಂಕಲ್ಪವಿರಬೇಕು. ನಿರ್ದಿಷ್ಟ ಸಾಧನೆಗಾಗಿ ಸಮಯ ಮತ್ತು ಪ್ರತಿಭಾ ಶಕ್ತಿಯನ್ನು ಮೀಸಲಿರಿಸುವ ಬದ್ಧತೆ ಇರಬೇಕು. ಶಿಸ್ತುಬದ್ಧ ತೊಡಗಿಸಿಕೊಳ್ಳುವಿಕೆಯ ಮೂಲಕ ನಿರೀಕ್ಷಿತ ಯಶಸ್ಸು ಸಾಧ್ಯವಾಗುತ್ತದೆ ಎಂದು ಡಾ.ಸತೀಶ್ಚಂದ್ರ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ ಮಾತನಾಡಿದರು. ಕೃತಕ ಬುದ್ಧಿಮತ್ತೆಯ ತಾಂತ್ರಿಕ ಆವಿಷ್ಕಾರ ಸೃಷ್ಟಿಸಿರುವ ಆತಂಕಗಳನ್ನು ಕಾಡಿಸಿಕೊಳ್ಳುವ ಬದಲು ಯುವವಲಯವು ಭವಿಷ್ಯದಲ್ಲಿ ತಂತ್ರಜ್ಞಾನ ಸೃಷ್ಟಿಸಲಿರುವ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಕೌಶಲ್ಯವನ್ನು ಮರುರೂಪಿಸಿಕೊಳ್ಳುವುದರ ಕಡೆಗೆ ಹೆಚ್ಚು ಗಮನಹರಿಸುವ ಅನಿವಾರ್ಯತೆ ಇದೆ ಎಂದರು.

ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಪ್ರಾಧ್ಯಾಪಕಿ ಡಾ.ನೆಫೀಸತ್ ಪಿ ಕಾರ್ಯಕ್ರಮ ನಿರೂಪಿಸಿದರು. ಝೇಂಕಾರ ಸೀಜûನ್ ೬ರ ಸಂಯೋಜಕ ಪ್ರದೀಪ್ ಕೆ ವಂದಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ಝೇಂಕಾರ ಉತ್ಸವದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ಕಾಲೇಜುಗಳ 40ಕ್ಕೂ ಹೆಚ್ಚು ಪ್ರತಿಭಾನ್ವಿತರ ತಂಡಗಳು ಭಾಗವಹಿಸಿವೆ. ಶೈಕ್ಷಣಿಕ ಇವೆಂಟ್, ಟೀಮ್ ಇವೆಂಟ್, ಹೊರಾಂಗಣ ಇವೆಂಟ್ ಮತ್ತು ಸ್ಪಾಟ್ ಇವೆಂಟ್ ಎಂಬ ನಾಲ್ಕು ವಿಭಾಗಗಳ ೧೪ ಸ್ಪರ್ಧೆಗಳಲ್ಲಿ ಈ ತಂಡಗಳ ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ.

Related posts

ಹೊಸಪಟ್ಣ ಹಾಲು ಉ.ಸ. ಸಂಘ: ಮಹಾಸಭೆ

Suddi Udaya

ಅರುವ ನಮ ಮಾತೆರ್ಲ ಒಂಜೇ ಕಲಾ ತಂಡದ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16902 ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

Suddi Udaya

ಡಿ. 8: ನಮ್ಮೂರ ಜಾತ್ರೆ ಕುಂಭಶ್ರೀ ವೈಭವ ಹಾಗೂ ಮಾತ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಡಿಕೆ ವರ್ತಕರ ಜಿಲ್ಲಾ ಸಂಘಟನೆಗೆ ಪೂರ್ವಭಾವಿ ಸಭೆ

Suddi Udaya
error: Content is protected !!