25.7 C
ಪುತ್ತೂರು, ಬೆಳ್ತಂಗಡಿ
May 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಗ್ರಾ.ಪಂ. ಗೆ ತೆಲಂಗಾಣ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಭೇಟಿ: ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ

ಉಜಿರೆ: ರಾಜ್ಯದಲ್ಲೇ ಮಾದರಿಯಾಗಿ ಗುರುತಿಸಿಕೊಂಡಿರುವ ಉಜಿರೆ ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಮಲತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕ (ಎಂಆರ್‌ಎಫ್)ಗಳ ಕಾರ್ಯವೈಖರಿಯನ್ನು ಅಧ್ಯಯನ ನಡೆಸಲು ತೆಲಂಗಾಣ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಮೇ 26ರಂದು ಉಜಿರೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿತು.

ಕರ್ನಾಟಕ ಸರ್ಕಾರದ ಸೂಚನೆಯಂತೆ ಉಜಿರೆ ಗ್ರಾಮ ಪಂಚಾಯತ್‌ನಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡಿರುವ ತ್ಯಾಜ್ಯ ನಿರ್ವಹಣಾ ಮಾದರಿಯನ್ನು ಅಧ್ಯಯನ ಮಾಡಲು ಈ ವಿಶೇಷ ತಂಡವನ್ನು ಕಳುಹಿಸಲಾಗಿದ್ದು, ಗ್ರಾಮ ಪಂಚಾಯತ್ ಕೈಗೊಂಡಿರುವ ಸಮಗ್ರ ಹಾಗೂ ಶಿಸ್ತಿನ ಕಾರ್ಯವೈಖರಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಇತರೆ ರಾಜ್ಯಗಳ ಅಧಿಕಾರಿಗಳು ಸಹ ಉಜಿರೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಇಲ್ಲಿನ ಮಾದರಿ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಿರುವುದು ವಿಶೇಷವಾಗಿದೆ.

ತಂಡವು ಮೊದಲಿಗೆ ಗ್ರಾಮ ಪಂಚಾಯತ್ ಅಧೀನದಲ್ಲಿರುವ ಅತ್ತಾಜೆ ಅಮೃತ ಸರೋವರಕ್ಕೆ ಭೇಟಿ ನೀಡಿ, ಕೆರೆ ಅಭಿವೃದ್ಧಿಗೆ ಲಭಿಸಿದ ಅನುದಾನ, ನೀರಿನ ಬಳಕೆ ಹಾಗೂ ಕೆರೆ ಅಭಿವೃದ್ಧಿಯ ಬಳಿಕ ಸುತ್ತಮುತ್ತಲಿನ ಕೃಷಿಕರಿಗೆ ಆಗಿರುವ ಪ್ರಯೋಜನಗಳ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಅತ್ತಾಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಎಫ್ ಘಟಕಕ್ಕೆ ಭೇಟಿ ನೀಡಿ ಘನ ತ್ಯಾಜ್ಯ ವಿಂಗಡಣೆ, ಮರುಬಳಕೆ ಹಾಗೂ ನಿರ್ವಹಣೆಯ ಕ್ರಮಗಳನ್ನು ಪರಿಶೀಲಿಸಿದರು. ನಂತರ ಮಲತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಅಳವಡಿಸಿಕೊಂಡಿರುವ ತಂತ್ರಜ್ಞಾನ, ಮಲತ್ಯಾಜ್ಯ ಸಂಸ್ಕರಣೆಯ ವಿಧಾನ, ಆದಾಯದ ಮೂಲಗಳು ಹಾಗೂ ಎದುರಾಗುತ್ತಿರುವ ಸವಾಲುಗಳ ಕುರಿತು ವಿವರವಾದ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಉಜಿರೆ ಗ್ರಾಮ ಪಂಚಾಯತ್‌ನ ಅರಿವು ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಗ್ರಂಥಾಲಯದ ಉನ್ನತೀಕರಣ, ಶುಚಿತ್ವದ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರೂಪುಗೊಂಡಿರುವ ವ್ಯವಸ್ಥೆಯನ್ನು ಶ್ಲಾಘಿಸಿದರು.

ಪಂಚಾಯತ್ ಕಚೇರಿ, ಅಮೃತ ಸಭಾಂಗಣ, ಕೂಸಿನ ಮನೆ ಹಾಗೂ ಅಕ್ಕ ಕೆಫೆಗೂ ಭೇಟಿ ನೀಡಿದ ಅಧಿಕಾರಿಗಳು, ಸರ್ಕಾರದ ಆದೇಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ರೀತಿ, ಗ್ರಾಮ ಪಂಚಾಯತ್‌ನ ಆಡಳಿತಾತ್ಮಕ ಕಾರ್ಯವೈಖರಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮನ್ವಯ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಮೆಚ್ಚಿದರು. ಉಜಿರೆ ಗ್ರಾಮ ಪಂಚಾಯತ್ ಅಳವಡಿಸಿಕೊಂಡಿರುವ ಈ ಮಾದರಿಯನ್ನು ತಮ್ಮ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿಯೂ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಉಜಿರೆ ಪೇಟೆಯ ಸಮೀಪ ಗ್ರಾಮ ಪಂಚಾಯತ್ ನಿರ್ವಹಣೆಯಲ್ಲಿರುವ ಸಾರ್ವಜನಿಕ ಶೌಚಾಲಯ ಹಾಗೂ ಅದರ ಪಕ್ಕದಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಸಂಕೀರ್ಣಕ್ಕೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಾರ್ವಜನಿಕ ಶೌಚಾಲಯದ ಮೂಲಕ ಉಜಿರೆ ಪೇಟೆಗೆ ಆಗಮಿಸುವ ಪ್ರವಾಸಿಗರು ಹಾಗೂ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ, ಸ್ವಚ್ಛ ಹಾಗೂ ವ್ಯವಸ್ಥಿತ ಶೌಚಾಲಯ ಸೌಲಭ್ಯವನ್ನು ಒದಗಿಸಿರುವ ಉಜಿರೆ ಗ್ರಾಮ ಪಂಚಾಯತ್ ನ ಪ್ರಯತ್ನವನ್ನು ಅಧಿಕಾರಿಗಳು ಶ್ಲಾಘಿಸಿದರು.

ಇದೇ ವೇಳೆ ಸಾರ್ವಜನಿಕ ಶೌಚಾಲಯ ಹಾಗೂ ವಾಣಿಜ್ಯ ಸಂಕೀರ್ಣದಿಂದ ಗ್ರಾಮ ಪಂಚಾಯತ್‌ಗೆ ಪ್ರತಿ ತಿಂಗಳು ಸುಮಾರು ರೂ. 42,000 ಕ್ಕೂ ಅಧಿಕ ಆದಾಯ ಲಭಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡ ಅಧಿಕಾರಿಗಳು, ಸಾರ್ವಜನಿಕ ಸೇವೆಯೊಂದಿಗೆ ಆದಾಯ ಉತ್ಪಾದನೆಯನ್ನು ಸಮನ್ವಯಗೊಳಿಸಿರುವ ಈ ಮಾದರಿ ವ್ಯವಸ್ಥೆ ಶ್ಲಾಘನೀಯವಾಗಿದ್ದು, ತಮ್ಮ ರಾಜ್ಯದಲ್ಲಿಯೂ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದರು.

ತೆಲಂಗಾಣ ರಾಜ್ಯ ಸರ್ಕಾರದ ಲಿಯಾಸನ್ ಅಧಿಕಾರಿ ಹಾಗೂ ಉಪ ಆಯುಕ್ತರಾದ ಪಿ.ಜೆ. ವೆಸ್ಲಿ, ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ರೇವಂತ್, ತರುಣ್ ಚಕ್ರವರ್ತಿ, ವಿನೋದ್ ಹಾಗೂ ಅನುಷಾ ಭೇಟಿ ನೀಡಿದ ಅಧಿಕಾರಿಗಳಾಗಿದ್ದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ಭವಾನಿಶಂಕರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರವಣ್, ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯ ಜಿಲ್ಲಾ ಸಂಯೋಜಕರಾದ ನವೀನ್ ಹಾಗೂ ಪವನ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಶ್ರೀ ರಾಮ ಕ್ಷೇತ್ರದಲ್ಲಿ ಬಳಂಜ ಸಂಘದಿಂದ ಶ್ರೀ ರಾಮತಾರಕ ಮಂತ್ರ

Suddi Udaya

ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರಿಗೆ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಲಾಯಿಲ: ಗುರಿಂಗಾನ ಸೇತುವೆ ಹಾನಿಗೊಳಗಾಗಿದ್ದು ಸ್ಥಳಕ್ಕೆ ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ಗುಂಪುಗಳ ನಡುವೆ ಅಹಿತಕರ ಘಟನೆ: ಧರ್ಮಸ್ಥಳ ಠಾಣೆಯಲ್ಲಿ 4 ಪ್ರಕರಣ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ 3 ಪ್ರಕರಣ ದಾಖಲು

Suddi Udaya

ಕುವೆಟ್ಟು ಕೋಡಿಮನೆ ನಿವಾಸಿ ಕಲ್ಯಾಣಿ ನಿಧನ

Suddi Udaya

ಪದ್ಮುಂಜದಲ್ಲಿ ಅಕ್ರಮ ಗೋ ಸಾಗಾಟ: ವಾಹನ ಸಹಿತ ಆರೋಪಿ ಬಂಧನ

Suddi Udaya
error: Content is protected !!