27.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಅನುಗ್ರಹ ಶಾಲಾ ಪ್ರಾರಂಭೋತ್ಸವ

ಉಜಿರೆ: 2026–27ನೇ ಶೈಕ್ಷಣಿಕ ಸಾಲಿನ ಅನುಗ್ರಹ ಶಾಲೆಯ ಪ್ರಾರಂಭೋತ್ಸವವು ಶಾಲಾ ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ನೂತನ ಶೈಕ್ಷಣಿಕ ವರ್ಷದ ಅಂಗವಾಗಿ ಶಾಲೆಯ ವಿವಿಧ ತರಗತಿಗಳಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳು ಹಾಗೂ ನೂತನ ಶಿಕ್ಷಕ-ಶಿಕ್ಷಕಿಯರನ್ನು ಶಾಲಾ ಬ್ಯಾಂಡ್‌ನ ನೇತೃತ್ವದಲ್ಲಿ ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು. ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಸಂಚಾಲಕರಾದ ವಂ. ಫಾ. ಅಬೆಲ್ ಲೋಬೊ, ಪ್ರಾಂಶುಪಾಲರಾದ ವಂ. ಫಾ. ವಿಜಯ್ ಲೋಬೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿಸೋಜ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸ್ಟೀವನ್ ಮೊಂತೇರೊ ಅವರು ವಿದ್ಯಾರ್ಥಿಗಳೊಂದಿಗೆ ದೀಪ ಪ್ರಜ್ವಲನೆಗೈದು 2026–27ನೇ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಿದರು.

ಪ್ರಾಂಶುಪಾಲರಾದ ವಂ. ಫಾ. ವಿಜಯ್ ಲೋಬೊ ಅವರು ಪ್ರಾಸ್ತಾವಿಕ ಭಾಷಣ ಮಾಡಿ, “ಉತ್ತಮ ಕಲಿಕೆ – ಉಜ್ವಲ ಭವಿಷ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲೆಯ ಶೈಕ್ಷಣಿಕ ದೃಷ್ಟಿಕೋನ, ಹೊಸ ಯೋಜನೆಗಳು ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ರೂಪಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಬಳಿಕ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ-ಶಿಕ್ಷಕಿಯರನ್ನು ಹೂಗುಚ್ಛ ನೀಡಿ ಗೌರವಿಸಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ 2025–26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಶಾಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಎತ್ತಿ ಹಿಡಿದ ವಿದ್ಯಾರ್ಥಿನಿ ಅನನ್ಯ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅಲ್ಲದೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡ 37 ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.

ಸಮಾರಂಭದಲ್ಲಿ ಕೆಲ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಯಣದ ಅನುಭವಗಳು, ಶಾಲೆಯ ಮಾರ್ಗದರ್ಶನ ಹಾಗೂ ಭವಿಷ್ಯದ ಕನಸುಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅವರ ಮಾತುಗಳು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದ್ದವು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿಸೋಜಾ ಇವರು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡುವಂತೆ ಸಲಹೆ ನೀಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರ ಅಗತ್ಯವೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಂ. ಫಾ. ಅಬೆಲ್ ಲೋಬೊ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಶ್ರೀಮತಿ ವಿನಯಲತಾ ನಿರೂಪಿಸಿದರು. ಶ್ರೀಮತಿ ಫಿಲೋಮಿನಾ ಸ್ವಾಗತಿಸಿದರು ಹಾಗೂ ಶ್ರೀಮತಿ ಅರ್ಪಿತಾ ವಂದಿಸಿದರು.

Related posts

ನಿಡ್ಲೆ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಆ.30: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿತರ ಜಯಭೇರಿ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ

Suddi Udaya

ಉಜಿರೆ: ರಸ್ತೆಯ ಬದಿ ನಿಲ್ಲಿಸಿದ್ದ ಸ್ಕೂಟರ್ ಕಳವು

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘ ಶಿರ್ಲಾಲು ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!