ಬೆಳ್ತಂಗಡಿ: ”ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಟೀಕೆಗಳಿಗೆ ಮುಕ್ತ ಅವಕಾಶವಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದೋ ವಿರುದ್ಧ ಕೆಸರೆರಚಾಟ ನಡೆಸುವುದು ಅಥವಾ ಸಾರ್ವಜನಿಕವಾಗಿ ತೇಜೋವಧೆ ಮಾಡುವುದು ಸಲ್ಲ. ಇಂತಹ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು,” ಎಂದು ಹೈಕೋರ್ಟ್ ಗಿರೀಶ್ ಮಟ್ಟೆಣ್ಣನವರ್‌ಗೆ ಸೂಚಿಸಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ದಾಖಲಾಗಿರುವ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟೆಣ್ಣನವರ್ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.
ಆಗ ನ್ಯಾಯಪೀಠ, ಮಟ್ಟೆಣ್ಣನವರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಇಂತಹ ಬೇಜವಾಬ್ದಾರಿಯುತ ಪ್ರವೃತ್ತಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತಾಕೀತು ಮಾಡಿತು. ಅಲ್ಲದೆ, ಆ ಕುರಿತು ಮುಂದಿನ ವಿಚಾರಣೆಯೊಳಗೆ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ರಂಗನಾಥ್ ರೆಡ್ಡಿ, ”ಪ್ರಕರಣದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟಾದ ಅಥವಾ ಗಲಭೆ ನಡೆದ ಯಾವುದೇ ನಿರ್ದಿಷ್ಟ ಘಟನೆಯ ಉಲ್ಲೇಖವಿಲ್ಲ. ಕೇವಲ ಸಾರ್ವಜನಿಕ ಅಶಾಂತಿ ಸೃಷ್ಟಿಯಾಗಬಹುದೆಂಬ ಊಹೆಯ ಮೇಲೆ ಮೂರನೇ ವ್ಯಕ್ತಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಹಳೆಯ ಪೋಸ್ಟ್‌ಗಳನ್ನೆಲ್ಲ ಹುಡುಕಿ ತಂದು ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಬಾಧಿತ ವ್ಯಕ್ತಿ ದೂರು ದಾಖಲಿಸಿಲ್ಲ,” ಎಂದರು.
ಎಸ್‌ಪಿಪಿ ಬಿ.ಎನ್.ಜಗದೀಶ್, ”ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿವಾದಾತ್ಮಕ ಚಿತ್ರಗಳನ್ನು ನ್ಯಾಯಾಲಯದ ಗಮನಕ್ಕೆ ತಂದರಲ್ಲದೆ, ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕೇವಲ ಸಂತ್ರಸ್ತರೇ ಆಗಬೇಕಿಲ್ಲ, ಯಾರು ಬೇಕಾದರೂ ದೂರು ನೀಡಬಹುದು,” ಎಂದು ಪ್ರತಿಪಾದಿಸಿದರು.
ಪೋಸ್ಟ್‌ಗಳನ್ನು ಗಮನಿಸಿದ ನ್ಯಾಯಪೀಠ, ”ನಿಮಗೆ ಇದೆಲ್ಲಏಕೆ ಬೇಕು? ಇದರ ಅಗತ್ಯವೇನಿದೆ? ನೀವು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ವಿಮರ್ಶೆ ಮಾಡಿ. ಯಾವುದೇ ತೊಂದರೆಯಿಲ್ಲ. ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಸಾರವಾಗಿರಬಹುದು. ಆದರೆ, ಇಂತಹ ನಡೆ ಸರಿಯಲ್ಲ,” ಎಂದು ಖಾರವಾಗಿ ಹೇಳಿತು.
”ಆರೋಗ್ಯಕರ ವಿಮರ್ಶೆ ಸ್ವಾಗತಾರ್ಹ, ಯಾರೂ ನಿಮ್ಮ ಹಾದಿಗೆ ಅಡ್ಡ ಬರುವುದಿಲ್ಲ. ಆದರೆ, ನಿಂದನೆ ಮಾಡುವುದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನೀವು ಏನು ಮಾಡುತ್ತಿದ್ದೀರಿ? ಇದರಿಂದ ನಿಮಗೇನು ಸಿಗುತ್ತದೆ? ಯಾರ ಮೇಲಾದರೂ ಈ ರೀತಿ ಕೆಸರೆರಚಾಟ ಮಾಡುವುದು ಅಥವಾ ಸಾರ್ವಜನಿಕವಾಗಿ ಅವಹೇಳನ ಮಾಡುವ ಅಗತ್ಯವಿಲ್ಲ,” ಎಂದು ಪ್ರಶ್ನಿಸಿತು.
ಎಸ್‌ಪಿಪಿ ಜಗದೀಶ್, ”ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಪೋಸ್ಟ್‌ಗಳು ಸಾಮಾನ್ಯ ಜನರನ್ನು ತಲುಪುತ್ತವೆ. ಇದು ಸಮಾಜದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತವೆ,” ಎಂದರು. ಅದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿಗಳು, ”ಇತ್ತೀಚಿನ ದಿನಗಳಲ್ಲಿಎಲ್ಲರ ಬಳಿಯೂ ಸಾಮಾಜಿಕ ಜಾಲತಾಣದ ಖಾತೆಗಳಿದ್ದು, ಅವು ಟೈಂ ಪಾಸ್ ವೇದಿಕೆಯಾಗಿವೆ. ಆದರೆ, ಅವುಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗಳ ಪ್ರಮಾಣ ಎಷ್ಟು?,” ಎಂದು ಕಳವಳ ವ್ಯಕ್ತಪಡಿಸಿದರು.













