July 26, 2026
ತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿ

ಕೆಐಒಸಿಎಲ್ ನೌಕರರ ಬೇಡಿಕೆಗಳನ್ನು ತಕ್ಷಣ ಈಡೇರಿಸಿ; ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು: ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು.

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸಂಯೋಜಿತ ಕುದ್ರೆಮುಖ್ ಮಜ್ದೂರ್ ಸಂಘ ವತಿಯಿಂದ ಕೆಐಒಸಿಎಲ್ (KIOCL) ನೌಕರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು. 25 ರಂದು ಕೆಐಒಸಿಎಲ್ ಮುಖ್ಯ ದ್ವಾರದ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಯಿತು. ನೂರಾರು ಕಾರ್ಮಿಕರು, ವರ್ಗಾವಣೆಗೊಂಡ ನೌಕರರ ಕುಟುಂಬ ಸದಸ್ಯರು ಹಾಗೂ ಬಿಎಂಎಸ್ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ., ಭಾರತೀಯ ಮಜ್ದೂರ್ ಸಂಘವು “ರಾಷ್ಟ್ರ ಹಿತ – ಉದ್ಯಮ ಹಿತ – ಕಾರ್ಮಿಕ ಹಿತ” ಎಂಬ ತ್ರಿಸೂತ್ರದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಕಾರ್ಮಿಕ ಸಂಘಟನೆ ಎಂದು ಹೇಳಿದರು. ಯಾವುದೇ ಸಮಸ್ಯೆಗೆ ಹೋರಾಟವೇ ಮೊದಲ ಹೆಜ್ಜೆಯಲ್ಲ. ಮನವಿ, ಸಂವಾದ, ಜಂಟಿ ಸಭೆಗಳು ಹಾಗೂ ಕಾರ್ಮಿಕ ಇಲಾಖೆಯ ಸಮ್ಮುಖದಲ್ಲಿ ಸಂಧಾನ ಸಭೆ ಸೇರಿದಂತೆ ಎಲ್ಲ ಪ್ರಜಾಪ್ರಭುತ್ವದ ಮಾರ್ಗಗಳನ್ನು ಅನುಸರಿಸಿದ ನಂತರವೂ ಆಡಳಿತ ಮಂಡಳಿಯಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ ಅನಿವಾರ್ಯವಾಗಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೆಐಒಸಿಎಲ್ ಅನ್ನು ಎನ್‌ಎಂಡಿಸಿ (NMDC) ಜೊತೆ ವಿಲೀನಗೊಳಿಸುವುದು, ದೇವದಾರಿ ಕ್ಯಾಪ್ಟಿವ್ ಗಣಿ ಯೋಜನೆಯನ್ನು ತಕ್ಷಣ ಆರಂಭಿಸುವುದು, ವೇತನ ಪರಿಷ್ಕರಣೆ ಜಾರಿಯಾಗುವವರೆಗೆ ಮಧ್ಯಂತರ ಪರಿಹಾರ (Adhoc Payment) ನೀಡುವುದು, ಅನ್ಯಾಯದ ವರ್ಗಾವಣೆಗಳನ್ನು ರದ್ದುಪಡಿಸಿ ವರ್ಗಾವಣೆಗೊಂಡ ನೌಕರರನ್ನು ಮರಳಿ ಕರ್ನಾಟಕಕ್ಕೆ ಕರೆತರುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಬಡ್ತಿಗಳನ್ನು ಪಾರದರ್ಶಕವಾಗಿ ಜಾರಿಗೊಳಿಸುವುದು, ಸಿಬ್ಬಂದಿ ಕಡಿತದ ಕ್ರಮಗಳನ್ನು ಕೈಬಿಡುವುದು ಹಾಗೂ ವರ್ಗಾವಣೆಗೊಂಡ ನೌಕರರಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಎಲ್ಲಾ ಭತ್ಯೆ ಮತ್ತು ಸೌಲಭ್ಯಗಳನ್ನು ಬಿಡುಗಡೆ ಮಾಡುವುದು ಸೇರಿದಂತೆ ಸಂಘದ ಪ್ರಮುಖ ಬೇಡಿಕೆಗಳನ್ನು ಅವರು ವಿವರಿಸಿದರು.

ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಹಾಗೂ ಆಡಳಿತ ಮಂಡಳಿಯ ಮಟ್ಟದಲ್ಲಿ ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದ ಅವರು, ಪತ್ರಿಕಾ ಮಾಧ್ಯಮಗಳು ಈ ಹೋರಾಟದ ಉದ್ದೇಶವನ್ನು ಸಮಾಜದ ಗಮನಕ್ಕೆ ತಲುಪಿಸುವ ಮೂಲಕ ಕಾರ್ಮಿಕರ ಧ್ವನಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

“ಭಾರತೀಯ ಮಜ್ದೂರ್ ಸಂಘದ ತಾಳ್ಮೆಯನ್ನು ಯಾರೂ ದುರ್ಬಲತೆ ಎಂದು ಭಾವಿಸಬಾರದು. ನಮ್ಮ ನ್ಯಾಯಸಮ್ಮತ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ದೊರೆಯದಿದ್ದರೆ ದಕ್ಷಿಣ ಕನ್ನಡ ಜಿಲ್ಲಾ ಬಿಎಂಎಸ್ ಈ ವಿಚಾರವನ್ನು ಸಂಪೂರ್ಣವಾಗಿ ಕೈಗೆತ್ತಿಕೊಳ್ಳಲಿದೆ. ಕೆಐಒಸಿಎಲ್ ನೌಕರರ ಪರವಾಗಿ ಸದಾ ದೃಢವಾಗಿ ನಿಂತು, ಅಗತ್ಯವಿದ್ದರೆ ಜಿಲ್ಲಾ ಕೇಂದ್ರದಲ್ಲಿಯೇ ಮುಂದಿನ ಹಂತದ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಹೋರಾಟಗಳನ್ನು ಹಮ್ಮಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ” ಎಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.

ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ, ಕೆಐಒಸಿಎಲ್ ಆಡಳಿತ ಮಂಡಳಿಯು ನೌಕರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ವಿಳಂಬ ಮಾಡದೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ರಾಜ್ಯ ಭಾರತೀಯ ಮಜ್ದೂರ್ ಸಂಘವು ನೌಕರರ ಪರವಾಗಿ ರಾಜ್ಯ ಮಟ್ಟದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಉದ್ಯಮದ ಅಭಿವೃದ್ಧಿ ಮತ್ತು ಕಾರ್ಮಿಕರ ಹಿತ ಎರಡನ್ನೂ ಸಮಾನವಾಗಿ ಕಾಪಾಡುವುದು ಆಡಳಿತದ ಜವಾಬ್ದಾರಿಯಾಗಿದೆ ಎಂದರು.

ಕುದ್ರೆಮುಖ್ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಮಾತನಾಡಿ, ಸಂಘವು ಆರಂಭದಿಂದಲೂ ಸಮಸ್ಯೆಗಳನ್ನು ಸಂವಾದದ ಮೂಲಕವೇ ಬಗೆಹರಿಸಲು ಪ್ರಯತ್ನಿಸಿದೆ ಎಂದು ಹೇಳಿದರು. ಆಡಳಿತಕ್ಕೆ ಸಲ್ಲಿಸಿದ ಮನವಿಗಳು, ವಿವಿಧ ಹಂತಗಳಲ್ಲಿ ನಡೆದ ಸಂವಾದಗಳು, ಜಂಟಿ ಸಭೆಗಳು ಹಾಗೂ ಸಹಾಯಕ ಕಾರ್ಮಿಕ ಆಯುಕ್ತರ (ಕೇಂದ್ರ) ಸಮ್ಮುಖದಲ್ಲಿ ನಡೆದ ಸಂಧಾನ ಸಭೆಗಳ ಸಂಪೂರ್ಣ ವಿವರವನ್ನು ಅವರು ಸಭೆಯ ಮುಂದೆ ಮಂಡಿಸಿದರು. ಆಡಳಿತದಿಂದ ನಿರಂತರ ವಿಳಂಬದ ಧೋರಣೆ ಅನುಸರಿಸಲ್ಪಟ್ಟ ಕಾರಣವೇ ಧರಣಿ ಅನಿವಾರ್ಯವಾಗಿದೆ ಎಂದು ಹೇಳಿದರು.

ಕುದ್ರೆಮುಖ್ ಮಜ್ದೂರ್ ಸಂಘದ ಅಧ್ಯಕ್ಷ ಸುರೇಶ್ ಕರ್ಕೇರ ಮಾತನಾಡಿ, ಇಂದಿನ ಧರಣಿಯನ್ನು ಶಾಂತಿಯುತವಾಗಿ ಹಾಗೂ ಶಿಸ್ತಿನಿಂದ ಯಶಸ್ವಿಗೊಳಿಸಿದ ಎಲ್ಲಾ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಮಿಕರ ಶಾಂತಿಯುತ ಹೋರಾಟಕ್ಕೆ ಗೌರವ ನೀಡಿ ಆಡಳಿತ ಮಂಡಳಿಯು ನ್ಯಾಯಸಮ್ಮತ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಧರಣಿಗೆ ಬೆಂಬಲ ನೀಡಿದ ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಹಾಗೂ ರಾಜ್ಯ ನಾಯಕತ್ವಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಎಂಎಸ್ ಹಿರಿಯ ಮುಖಂಡ ವಿಶ್ವನಾಥ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಜಿಲ್ಲಾ ಪದಾಧಿಕಾರಿ ವಿ. ಸುಧೀಂದ್ರ, ಕುದ್ರೆಮುಖ್ ಮಜ್ದೂರ್ ಸಂಘದ ಪದಾಧಿಕಾರಿಗಳು, ವರ್ಗಾವಣೆಗೊಂಡ ನೌಕರರ ಕುಟುಂಬ ಸದಸ್ಯರು ಹಾಗೂ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕುದ್ರೆಮುಖ್ ಮಜ್ದೂರ್ ಸಂಘದ ಕಾರ್ಯಾಧ್ಯಕ್ಷ ಭಗವಾನ್ ದಾಸ್ ನಿರೂಪಿಸಿದರು.

ಧರಣಿಯ ಅಂತ್ಯದಲ್ಲಿ ಕೆಐಒಸಿಎಲ್ ಆಡಳಿತ ಮಂಡಳಿಯು ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಈಡೇರಿಸಿ ಸಂಸ್ಥೆಯ ಅಭಿವೃದ್ಧಿ, ಉದ್ಯೋಗ ಭದ್ರತೆ ಹಾಗೂ ಕಾರ್ಮಿಕರ ಹಿತವನ್ನು ಕಾಪಾಡುವಂತೆ ಆಗ್ರಹಿಸಿ ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.

Related posts

ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ಬಳಂಜ ಶಾಲೆಗೆ ಕಂಪ್ಯೂಟರ್ ಕೊಡುಗೆ

Suddi Udaya

ಶ್ರೀ ಶಾರದಾಂಭ ಭಜನಾ ಮಂಡಳಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಸಂಜನಾ ಪೈ ಗೆ ಸನ್ಮಾನ

Suddi Udaya

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ನಿತ್ಯಶ್ರೀ. ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಕಡಬದ ನವ ಜೀವನ ಸದಸ್ಯರಿಂದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರ ಭೇಟಿ

Suddi Udaya

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪುಷ್ಟಿ ಪ್ರಥಮ ಸ್ಥಾನ

Suddi Udaya

ಆಗಷ್ಟ್ 28 : ಸೌಜನ್ಯ ಪ್ರಕರಣದ ತನಿಖೆಗೆ ಒತ್ತಾಯಿಸಿ ಚಲೋ ಬೆಳ್ತಂಗಡಿ ಮಹಾಧರಣಿ

Suddi Udaya
error: Content is protected !!