August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಪಿಲ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಬರಾಯಕೆರೆಗೆ ಹಾನಿ : ಅಳದಂಗಡಿ ಗ್ರಾ.ಪಂ. ಎದುರು ಗ್ರಾಮಸ್ಥರ ಪ್ರತಿಭಟನೆ: ಸ್ಥಳ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮನವಿ

ಅಳದಂಗಡಿ: ಪಿಲ್ಯ ಗ್ರಾಮದ ಒನಾಟ ಬರಾಯ ಎಂಬಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯಾಗಿದ್ದು, ಈ ಪ್ರದೇಶದ ನೀರಿನ ಆಶ್ರಯತಾಣವಾದ ಬರಾಯಕೆರೆಗೆ ಹಾನಿಯಾಗಿ ಅಪಾಯದಂಚಿನಲ್ಲಿದೆ ಇದರ ಬಗ್ಗೆ ಸ್ಥಳ ತನಿಖೆ ನಡೆಸಿ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಪಿಲ್ಯ ಪರಿಸರದ ನಾಗರಿಕರು ಆ.3 ರಂದು ಅಳದಂಗಡಿ ಗ್ರಾಮ ಪಂಚಾಯತು ಎದುರು ಪ್ರತಿಭಟನೆ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು.

ಪಿಲ್ಯ ಗ್ರಾಮದ ಸ.ನಂ.೯೨/೨ರಲ್ಲಿ ೧.೨೩ ಎಕ್ರೆ ಪಟ್ಟಾ ಜಾಗದಲ್ಲಿ ಸಮತಟ್ಟು ಮಾಡುವ ಸಲುವಾಗಿ ಕಟ್ಟಡ ಕಲ್ಲು ತೆರವುಗೊಳಿಸಲು 2026 ಜ.1ರಿಂದ ಡಿ.31 ರವರೆಗೆ ಶ್ರೀಕಾಂತ್ ಭಟ್ ಎಂಬವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಆದರೆ ಬರಾಯದ ಸಾರ್ವಜನಿಕ ಕೆರೆಯ ಬದಿಯವರೆಗೆ ಗಣಿಗಾರಿಕೆ ಮಾಡಿಕೊಂಡು ಬಂದಿದ್ದು, ಕೆರೆಗೆ ಹಾನಿಯಾಗಿದೆ. ಗಣಿಗಾರಿಕೆ ಮಾಡಿದ ಪ್ರದೇಶದಿಂದ ನೀರು ಕೆರೆಗೆ ಬರುತ್ತಿದೆ. ಅಲ್ಲದೆ ಗಣಿಗಾರಿಕೆಗಾಗಿ ಪ್ರಬಲವಾದ ಸ್ಫೋಟಕಗಳನ್ನು ಬಳಸಿ ಸ್ಫೋಟಿಸುತ್ತಿರುವುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ, ಜನ ಜಾನುವಾರುಗಳಿಗೆ ನಡೆದುಕೊಂಡು ಹೋಗುವುದಕ್ಕೆ ಭಯವಾಗುತ್ತಿದೆ. ಈ ಪರಿಸರದಲ್ಲಿ ಹೋಗುವ ಕ್ರಾಂಕ್ರೀಟಿಕರಣಗೊಂಡ ರಸ್ತೆ ಮತ್ತು ಮಣ್ಣಿನ ರಸ್ತೆ ಘನ ವಾಹನಗಳಲ್ಲಿ ಕಲ್ಲು ಸಾಗಾಟ ಮಾಡುತ್ತಿರುವುದರಿಂದ ಹಾಳಾಗಿದೆ. ಎರಡು ಕಡೆ ಪಂಚಾಯತು ವತಿಯಿಂದ ಮಾಡಲಾದ ಮೋರಿಗಳು ಕುಸಿದು ಹೋಗಿದೆ. ಬರಾಯ ಬೈಲಿಗೆ ನೀರಿನ ಮೂಲವಾದ ಬರಾಯಕೆರೆ ಅಪಾಯದಲ್ಲಿದ್ದು, ಕೂಡಲೇ ಸಂಬಂಧ ಪಟ್ಟ ಇಲಾಖೆಯವರು, ತಾಲೂಕು ತಹಶೀಲ್ದಾರರು ಸ್ಥಳ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಪಿಲ್ಯ ಪರಿಸರದ ನಾಗರಿಕರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ತಾ.ಪಂ ಮಾಜಿ ಸದಸ್ಯ ಪ್ರಶಾಂತ್ ವೇಗಸ್ ಅವರು ಪ್ರಕೃತಿದತ್ತವಾದ ಬರಾಯಕೆರೆ ಹಾನಿ ತಟ್ಟಿದ್ದು, ಗಣಿಗಾರಿಕೆಯಿಂದಾಗಿ ಕೆರೆಗೆ ನೀರಿನ ಜೊತೆ ಕಲ್ಲುಮಣ್ಣು ಹರಿದು ಬಂದಿದೆ. ಸಾರ್ವಜನಿಕ ಕೆರೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧವಿದ್ದರೂ, ಇಲ್ಲಿ ಕೆರೆಯ ತನಕ ಗಣಿಗಾರಿಕೆ ಮಾಡಲಾಗಿದೆ. 1995 ರಲ್ಲಿ ತಹಶೀಲ್ದಾರ್ ಆಗಿದ್ದ ಶಿವರುದ್ರಸ್ವಾಮಿ ಸ್ಥಳ ತನಿಖೆ ನಡೆಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದರು. ಈಗ ಪುನಃ ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಪಂಚಾಯತು ರಸ್ತೆಗಳು ಪೂರ್ತಿ ಹಾಳಾಗಿದೆ. ಇದರ ಬಗ್ಗೆ ಕಂದಾಯ, ಗಣಿಇಲಾಖೆಯವರು ಬಂದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮನವಿಯನ್ನು ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಪೂರ್ಣೀಮ ಅವರು ಸ್ವೀಕರಿಸಿ, ಗಣಿಗಾರಿಕೆಯಿಂದ ಬರಾಯ ಸಾರ್ವಜನಿಕ ಕೆರೆಗೆ ಹಾನಿಯಾಗಿರುವ ಬಗ್ಗೆ ಈ ಹಿಂದೆಯೇ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಿದ್ದೇವೆ. ಸ್ಥಳ ತನಿಖೆಗೆ ಬರುತ್ತೇವೆ ಎಂದು ಗಣಿ ಇಲಾಖೆಯವರು ಪತ್ರ ಬರೆದಿದ್ದರು. ಸ್ವಲ್ಪ ದಿನಗಳ ಬಳಿಕ ಸ್ಥಳ ತನಿಖೆ ನಡೆಸಿದ್ದೇವೆ ಎಲ್ಲಾ ಸರಿಯಿದೆ ಎಂದು ಮತ್ತೊಂದು ಪತ್ರ ಬರೆದಿದ್ದಾರೆ. ಅವರು ಸ್ಥಳ ತನಿಖೆ ನಡೆಸುವಾಗ ಪಂಚಾಯತದ ಗಮನಕ್ಕೆ ತಂದಿಲ್ಲ, ಈಗ ಗ್ರಾಮಸ್ಥರು ಸಲ್ಲಿಸಿದ ಮನವಿಯನ್ನು ತಹಶೀಲ್ದಾರರಿಗೆ ಡಿ.ಸಿಗೆ ಕಳುಹಿಸುತ್ತೇವೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬರಾಯಕೆರೆ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಮಡಿವಾಳ, ಕೋಶಾಧಿಕಾರಿ ಪ್ರವೀಣ್, ಉಪಾಧ್ಯಕ್ಷರಾದ ಪ್ರಶಾಂತ ಪೂಜಾರಿ, ದಿನೇಶ್, ಗೌರವ ಸಲಹೆಗಾರರಾದ ಲಿಯೋ ಪೀರೇರಾ, ಸಂತೋಷ್ ನಿಲ್ಲಿಕಲ್ಲು, ಕೂಸಾ ಅಳಂದಗಡಿ, ಅಶೋಕ್ ಪೂಜಾರಿ, ನಾರಾಯಣ ಮಡಿವಾಳ, ಮೆಲ್ವಿನ್ ಡಿ.ಸೋಜ, ಗಣೇಶ್ ದೇವಾಡಿಗ, ಧರ್ಣಪ್ಪ ಪೂಜಾರಿ, ಸತೀಶ್ ತಾಮ್ಹಣ್‌ಕರ್, ನಾಸೀರ್‌ಖಾನ್, ಲ್ಯಾನ್ಸಿ ಮೊಂತೊರೋ, ವಿಶ್ವನಾಥ್, ಸಂತೋಷ್, ಜೋಯಿಸನ್, ಶಿವಪ್ರಸಾದ್, ಜೋಕ್ಕಿಂ ಡಿಸೋಜ,ಆ ಪ್ರಸಾದ್, ಸುರೇಶ್ ಶೆಟ್ಟಿ, ವಿಠಲ ವಿಲ್ಪೆಕೆರೆ, ಜೋನ್ ಡಿ ಸೋಜ, ವೀರಪ್ಪ ನಿನ್ನಿಕಲ್ಲು, ಮಮತಾ ನಿನ್ನಿಕಲ್ಲು, ಜಯಶ್ರೀ ನಿನ್ನಿಕಲ್ಲು, ಹರಿಶ್ಚಂದ್ರ ಪೂಜಾರಿ, ಕಾರ್ತಿಕ್ ಪೂಜಾರಿ, ರವಿ ಬರಾಯ, ಹರೀಶ್ ಪೂಜಾರಿ ಹೊಕ್ಕಿಲ ಸೇರಿದಂತೆ ನೂರಕ್ಕೂ ಮಿಕ್ಕಿ ನಾಗರಿಕರು ಈ ಸಂದರ್ಭ ಉಪಸ್ಥಿತರಿದ್ದರು.


ತನಿಖೆ ನಡೆಯಲಿ: ಸಾರ್ವಜನಿಕರು ಪಂಚಾಯತಕ್ಕೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಯಲಿ. ನಾನು ನಡೆಸುತ್ತಿರುವ ಗಣಿಗಾರಿಕೆಯಿಂದಾಗಿ ಬರಾಯಕೆರೆಗೆ ಯಾವುದೇ ಹಾನಿಯಾಗಿಲ್ಲ, ಕೆರೆಯಿಂದ ನೂರು ಮೀಟರ್ ದೂರಲ್ಲಿ ಗಣಿಗಾರಿಕೆ ಇದೆ ಸ್ಥಳ ತನಿಖೆ ನಡೆಸಲಿ. ನನಗೆ ಬರುವ ಡಿಸೆಂಬರ್ ತನಕ ಗಣಿಗಾರಿಕೆಗೆ ಪರವಾನಿಗೆ ಇದೆ ಎಂದು ಶ್ರೀಕಾಂತ್ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

Related posts

ಇಂಟರ್ನ್ಯಾಷನಲ್ ಓಪನ್ ಫಿಡೆ ರೇಟೆಡ್ ಪಂದ್ಯಾಟ : ಬೆಸ್ಟ್ ಅನ್‌ರೇಟೆಡ್ ವಿಭಾಗದಲ್ಲಿ ಕೊಕ್ಕಡದ ಸಮರ್ಥ್ ಭಟ್ ತೃತೀಯ

Suddi Udaya

ಕುಕ್ಕೇಡಿ ಶ್ರೀ ಶಾರದಾಂಭ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಗುರುವಾಯನಕೆರೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

Suddi Udaya

ಆರಂಬೋಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ: 500ಕ್ಕಿಂತ ಹೆಚ್ಚು ಜನರು ವಿವಿಧ ರೀತಿಯ ಆರೋಗ್ಯ ತಪಾಸಣೆ ಮಾಡಿದ್ದು ವಿಶೇಷವಾಗಿತ್ತು

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕ ಸಭೆ

Suddi Udaya

ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಸುರೇಶ್ ಪೂಜಾರಿ ಸೇವೆಯಿಂದ ನಿವೃತ್ತಿ

Suddi Udaya
error: Content is protected !!