26.9 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಅರಿವಿನ ದೀವಿಗೆ ‘ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ’ ವಿಶೇಷ ಉಪನ್ಯಾಸ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕನ್ನಡ ಹಾಗೂ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿವಂಗತ ಡಾ. ಬಿ ಯಶೋವರ್ಮರವರ ಸ್ಮರಣಾರ್ಥ ಹೇಮಾವತಿ ವೀ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅರಿವಿನ ದೀವಿಗೆ ‘ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮೂಡಿಗೆರೆಯ ಕೀಟ ಶಾಸ್ತ್ರಜ್ಞ ಡಾ. ಅವಿನಾಶ್ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರಸ್ತುತ ದಿನಗಳಲ್ಲಿ ಪ್ರಕೃತಿಯಲ್ಲಿನ ಜೀವವೈವಿಧ್ಯ ನಶಿಸುತ್ತಿದೆ. ಪ್ರಕೃತಿ ಉಳಿದರೆ ಮಾತ್ರ ಮಾನವನ ಬದುಕು ಸುರಕ್ಷಿತವಾಗಿರಲು ಸಾಧ್ಯ. ಅರಣ್ಯ ನಾಶ, ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಮನುಷ್ಯನ ಅತಿಯಾದ ಸ್ವಾರ್ಥದಿಂದ ಅನೇಕ ಜೀವಸಂಕುಲಗಳು ಅಳಿವಿನಂಚಿಗೆ ತಲುಪುತ್ತಿವೆ. ಇದನ್ನು ತಡೆಯಲು ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವುದು ಹಾಗೂ ಅರಣ್ಯದಲ್ಲಿನ ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.

ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಇದ್ದರೆ ಪ್ರಕೃತಿಯೇ ಪಾಠ ಶಾಲೆ. ವಿಶ್ವದ ಪ್ರಮುಖ ಜೀವವೈವಿಧ್ಯ ಹಾಟ್‌ಸ್ಪಾಟ್‌ಗಳಲ್ಲಿ ಪಶ್ಚಿಮ ಘಟ್ಟ ಕೂಡ ಒಂದಾಗಿದೆ. ಇದು ಸಾವಿರಾರು ಅಪರೂಪದ ಸಸ್ಯ, ಪ್ರಾಣಿ, ಪಕ್ಷಿ ಹಾಗೂ ಕೀಟ ಪ್ರಭೇದಗಳಿಗೆ ಆಶ್ರಯ ತಾಣವಾಗಿದೆ. ಮನುಷ್ಯ ತನ್ನ ಉಪಯೋಗ ಮತ್ತು ಪರಿಮಿತಿಗೆ ಬರದ ಜೀವಿಗಳನ್ನು ಪರಿಸರಕ್ಕೂ ಉಪಯೋಗ ಇಲ್ಲ ಎಂದು ಭಾವಿಸುತ್ತಾನೆ. ಆದರೆ ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರತಿಯೊಂದು ಜೀವಿಯದ್ದೂ ಕೂಡ ತನ್ನದೇ ಆದ ಪಾತ್ರವಿದ್ದು, ಕೀಟಗಳೂ ಸಹ ಪರಾಗಸ್ಪರ್ಶ, ಮಣ್ಣಿನ ಫಲವತ್ತತೆ ಹಾಗೂ ಆಹಾರ ಸರಪಳಿಯನ್ನು ಸಮತೋಲನ ದಲ್ಲಿಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಐಟಿ ಹಾಗೂ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಅವರು ತಮ್ಮ ತೀರ್ಥರೂಪರಾದ ಬಿ. ಯಶೋವರ್ಮ ಅವರ ದೂರದೃಷ್ಟಿ ಚಿಂತನೆಯ ಮಾದರಿಯಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ ತಂದ ವಿಶೇಷ ಯೋಜನೆಗಳನ್ನು ನೆನಪಿಸಿಕೊಂಡರು. ಕರೋನಾ ಸಂದರ್ಭದ ಬಳಿಕ ಪ್ರಚುರ ಪಡೆದ ಆನ್ಲೈನ್ ಪರೀಕ್ಷೆ, ತರಗತಿಗಳನ್ನು ತಂದೆಯವರು 2010ರ ಸಂದರ್ಭದಲ್ಲೇ ಕಾಲೇಜಿಗೆ ಪರಿಚಯಿಸಿದ್ದರು. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ವಿಶೇಷ ಆಸಕ್ತಿ ವಹಿಸಿದ್ದರು. ಇಂದು ಕೃತಕ ಬುದ್ಧಿಮತ್ತೆಯಂತ ತಂತ್ರಜ್ಞಾನಗಳು ಹೆಚ್ಚುತ್ತಿದೆ. ಪ್ರಸ್ತುತ ವಿದ್ಯಮಾನಗಳು ಹಾಗು ತಂತ್ರಜ್ಞಾನಗಳಿಂದ ಹಿಂದೆ ಉಳಿಯದೇ ಬದಲಾವಣೆಯೊಂದಿಗೆ ಹೆಜ್ಜೆ ಹಾಕಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ಮಾತನಾಡಿ, ಯಶೋವರ್ಮ ಅವರ ದೂರದೃಷ್ಟಿತ್ವ, ಶಿಕ್ಷಣದ ಮೇಲಿನ ಬದ್ಧತೆ ಹಾಗೂ ವಿದ್ಯಾರ್ಥಿ – ಕೇಂದ್ರಿತ ಚಿಂತನೆಗಳು ಎಸ್.ಡಿ.ಎಂ ಕಾಲೇಜಿಗೆ ಹೊಸ ರೂಪ ನೀಡಿವೆ. ಗುಣಮಟ್ಟದ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದ ಅವರು ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೋನಿಯಾ ಯಶೋವರ್ಮ, ಡಾ. ಬಿ. ಯಶೋವರ್ಮರವರ ಸ್ಮರಣಾರ್ಥದಲ್ಲಿ ರಾಜ್ಯದ ನಾನ ಸಂಪನ್ಮೂಲ ವ್ಯಕ್ತಿಗಳನ್ನು ಕಾಲೇಜಿಗೆ ಕರೆಸಿ ಉಪನ್ಯಾಸ ಮಾಲೆಯನ್ನು ನಿರಂತರವಾಗಿ ನಡೆಸಿ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಕ್ಷಾ ಪೂರನ್ ವರ್ಮ, ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಉಪ ಪ್ರಾಚಾರ್ಯರಾದ ನಂದ ಕುಮಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಗಣೇಶ್ ನಾಯಕ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ
ಕೆ ಎನ್. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕವನ ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಅಭಿಲಾಷ್ ವಂದಿಸಿದರು. ಉಪನ್ಯಾಸ ಡಾ. ನಾಗಣ್ಣ ಕಾರ್ಯಕ್ರಮ ಸಂಯೋಜಿಸಿದರು. ಡಾ. ಹಳೆಮನೆ ರಾಜಶೇಖರ್ ಸಹಕರಿಸಿದರು.

Related posts

ಜೂ.15 : ಅಳದಂಗಡಿಯಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ 17ನೇ ಶಾಖೆ ಉದ್ಘಾಟನೆ

Suddi Udaya

ಹಜ್ ಯಾತ್ರಿಗೆ ಪೆರಾಲ್ದರಕಟ್ಟೆ ಜುಮಾ ಮಸ್ಜಿದ್ ಕಮಿಟಿಯಿಂದ ಬೀಳ್ಕೊಡುಗೆ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಉಡುಪಿಯಲ್ಲಿ 4 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya

ಚಾರ್ಮಾಡಿ : ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ವೀರಣ್ಣ ಶೆಟ್ಟಿರವರಿಗೆ ಸೇವಾ ನಿವೃತ್ತಿ

Suddi Udaya

ಕೊಕ್ಕಡ: ಕಾಪಿನಬಾಗಿಲುನಲ್ಲಿ ಒಂಟಿ ಸಲಗದ ಹಾವಳಿ: ಅಪಾರ ಅಡಿಕೆ ಗಿಡ, ಬಾಳೆ ಗಿಡಗಳಿಗೆ ಹಾನಿ

Suddi Udaya
error: Content is protected !!