29.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ರಾಜ್ಯದಲ್ಲಿ ಗುಟ್ಕಾ, ತಂಬಾಕು ಮಿಶ್ರಿತ ಪಾನ್ ಮಸಾಲ ಬ್ಯಾನ್ : ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಳ್ತಂಗಡಿ: ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಕರ್ನಾಟಕದಲ್ಲಿ ಒಂದು ವರ್ಷದ ಅವಧಿಗೆ ನಿಷೇಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತರು ಬುಧವಾರ(ಆ.12) ಆದೇಶ ಹೊರಡಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧ) ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ನಿಷೇಧ ಅನ್ವಯವಾಗಲಿದೆ.

ಯಾವೆಲ್ಲ ಉತ್ಪನ್ನಗಳಿಗೆ ನಿಷೇಧ?: ತಂಬಾಕು/ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಅಂತಿಮ ಉತ್ಪನ್ನದಲ್ಲಿ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಯಾವುದೇ ಉತ್ಪನ್ನಗಳಿಗೆ ನಿಷೇಧ ಅನ್ವಯವಾಗಲಿದೆ. ಉತ್ಪನ್ನ ಪ್ಯಾಕ್ ಮಾಡಿರಲಿ ಅಥವಾ ಬಿಡಿಯಾಗಿ ಮಾರಾಟವಾಗಲಿ, ನಿಷೇಧದಿಂದ ವಿನಾಯಿತಿ ಇರುವುದಿಲ್ಲ.ಒಂದೇ ಪ್ಯಾಕೆಟ್‌ನಲ್ಲಿ ಗುಟ್ಕಾ ಅಥವಾ ಪಾನ್ ಮಸಾಲಾ ಮಾರಾಟ ಮಾಡುವುದರ ಜತೆಗೆ, ತಂಬಾಕು ಮತ್ತು ನಿಕೋಟಿನ್ ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ತುಂಬಿ, ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿಕೊಂಡು ಸೇವಿಸುವ ರೀತಿಯಲ್ಲಿ ಮಾರಾಟ ಅಥವಾ ವಿತರಿಸುವುದಕ್ಕೂ ನಿಷೇಧ ಅನ್ವಯವಾಗಲಿದೆ.ಸಾಚೆಟ್, ಪೌಚ್, ಪ್ಲಾಸ್ಟಿಕ್ ಪ್ಯಾಕೆಟ್ ಅಥವಾ ಇತರ ಯಾವುದೇ ರೀತಿಯ ಪ್ಯಾಕಿಂಗ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳಿಗೂ ಆದೇಶ ಅನ್ವಯಿಸುತ್ತದೆ.

ತಯಾರಿಕೆ, ಸಾಗಣೆಗೂ ಬ್ರೇಕ್: ನಿಷೇಧಿತ ಉತ್ಪನ್ನಗಳ ತಯಾರಿಕಾ ಘಟಕಗಳು, ಶೀತಲ ಸಂಗ್ರಹಾಗಾರಗಳು, ಸಗಟು ವಿತರಣಾ ಕೇಂದ್ರಗಳು, ಜಿಲ್ಲೆಗಳ ನಡುವೆ ಸಾಗಣೆ ಹಾಗೂ ಚಿಲ್ಲರೆ ಮಾರಾಟ ಮಳಿಗೆಗಳ ಮೇಲೂ ಅಧಿಕಾರಿಗಳು ನಿಗಾ ಇರಿಸಲಿದ್ದಾರೆ.ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಸಗಟು ಮಾರುಕಟ್ಟೆ, ಗೋದಾಮುಗಳು ಮತ್ತು ಅಂತಾರಾಜ್ಯ ಗಡಿಗಳಲ್ಲಿ ದಿಢೀ‌ರ್ ತಪಾಸಣೆ ನಡೆಸಲು ಅಧಿಕಾರ ಹೊಂದಿರುತ್ತಾರೆ.

ದಾಸ್ತಾನು ವಶ, ಪರವಾನಗಿ ರದ್ದು: ಆದೇಶ ಉಲ್ಲಂಘಿಸಿ ನಿಷೇಧಿತ ಉತ್ಪನ್ನಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಸಾಗಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ದಾಸ್ತಾನು ವಶಪಡಿಸಿಕೊಳ್ಳಲಾಗುತ್ತದೆ. ಸಂಬಂಧಿತ ಪರವಾನಗಿಯನ್ನು ರದ್ದುಪಡಿಸುವುದರ ಜತೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುತ್ತದೆ.

ಪಾನ್ ಮಸಾಲಾ ಪ್ಯಾಕಿಂಗ್‌ಗೂ ಹೊಸ ನಿಯಮ: ಇದೇ ವೇಳೆ, ದೇಶಾದ್ಯಂತ ಪಾನ್ ಮಸಾಲಾ ಉತ್ಪನ್ನಗಳ ಪ್ಯಾಕೇಜಿಂಗ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಕ್ರಮಗಳನ್ನೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕೈಗೊಂಡಿದೆ. 2026ರ ಪ್ಯಾಕೇಜಿಂಗ್‌ ತಿದ್ದುಪಡಿ ನಿಯಮಗಳ ಪ್ರಕಾರ ಪ್ಲಾಸ್ಟಿಕ್ ಮತ್ತು ಲೋಹದ ಲ್ಯಾಮಿನೇಟೆಡ್ ಪ್ಯಾಕೇಜಿಂಗ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಪರಿಸರ ಸ್ನೇಹಿ ಸೆಲ್ಯುಲೋಸ್, ಪೇಪರ್‌ಬೋರ್ಡ್ ಹಾಗೂ ನೈಸರ್ಗಿಕ ರಿಜಿಡ್ ಕಂಟೇನರ್‌ಗಳಂತಹ ಪರ್ಯಾಯ ವಸ್ತುಗಳ ಬಳಕೆಗೆ ಆದ್ಯತೆ ನೀಡಲಾಗಿದೆ.ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲಿನ ಈ ನಿಷೇಧ ಅಧಿಸೂಚನೆ ಹೊರಡಿಸಿದ ದಿನದಿಂದ ಒಂದು ವರ್ಷದ ಅವಧಿಗೆ ಜಾರಿಯಲ್ಲಿರಲಿದೆ.

Related posts

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಹಕಾರದೊಂದಿಗೆ ಮುಂಗಾರು ಮತ್ತು ಹಿಂಗಾರಿನಲ್ಲಿ ತಾಲೂಕಿನಲ್ಲಿ 500 ಎಕ್ರೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಲರ್ಸ್ ವತಿಯಿಂದ ದಯಾ ವಿಶೇಷ ಶಾಲೆಗೆ ಅಭಿನಂದನಾ ಕಾರ್ಯಕ್ರಮ

Suddi Udaya

ನೆರಿಯ ಗ್ರಾಮ ಕಸ್ತೂರಿರಂಗನ್ ವರದಿ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ತೀವ್ರ ಸಂತಾಪ, 9 ದಿನಗಳ ಶೋಕಾಚರಣೆ

Suddi Udaya

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಡ ಸರಕಾರಿ ಪ್ರೌಢ ಶಾಲೆಯಲ್ಲಿ ‘ಗಣಿತ ಸಂಘದ ಉದ್ಘಾಟನೆ’

Suddi Udaya
error: Content is protected !!