25.7 C
ಪುತ್ತೂರು, ಬೆಳ್ತಂಗಡಿ
August 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಡವರಿಗೆ ವಸತಿ, ನಿವೇಶನ ಕಲ್ಪಿಸಲು ವಿಫಲ: ಲಾಯಿಲ ಗ್ರಾ.ಪಂ. ವಿರುದ್ಧ ಗ್ರಾಮಸ್ಥರ ಆಕ್ರೋಶ

ಬೆಳ್ತಂಗಡಿ: ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗಿದ್ದು, ಸಭೆಗಳಲ್ಲಿ ಗ್ರಾಮಸ್ಥರು ಮಂಡಿಸುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂದು ಆರೋಪಿಸಿ ಲಾಯಿಲ ಗ್ರಾಮ ಪಂಚಾಯತ್‌ನ 1ನೇ ವಾರ್ಡಿನ ಗ್ರಾಮಸ್ಥರು ಪಂಚಾಯತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಲಾಯಿಲ ಗ್ರಾಮದ ಪಡ್ಲಾಡಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಆ.24ರಂದು ನಡೆದ ವಾರ್ಡ್ ಸಭೆಯಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯಿತು. ಸ್ಥಳೀಯರಾದ ಸತೀಶ್ ನಿನ್ನಿಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಿಂದಿನ ವಾರ್ಡ್ ಸಭೆಗಳಲ್ಲಿ ಗ್ರಾಮಸ್ಥರು ಮಂಡಿಸಿದ್ದ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

“ಜನರ ಸಮಸ್ಯೆಗಳು ಹಾಗೆಯೇ ಉಳಿದಿರುವಾಗ ವಾರ್ಡ್ ಸಭೆ, ಗ್ರಾಮ ಸಭೆಗಳನ್ನು ನಡೆಸುವುದರಿಂದ ಏನು ಪ್ರಯೋಜನ?” ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು. ಹಿಂದಿನ ಸಭೆಗಳಲ್ಲಿ ಹಲವು ಬಾರಿ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರೂ ಅವುಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ. ಹೀಗಾಗಿ ಸಭೆಗಳು ಕೇವಲ ಕಾಟಾಚಾರಕ್ಕೆ ನಡೆಯುತ್ತಿವೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ನಮ್ಮ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಷ್ಟು ಸ್ಪಂದಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೇತಾಜಿ ಬಡಾವಣೆ ಅಕ್ರಮದ ಬಗ್ಗೆ ತನಿಖೆಗೆ ಆಗ್ರಹ

ಕಳೆದ ಹಲವು ವರ್ಷಗಳಿಂದ ನೇತಾಜಿ ಬಡಾವಣೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳು ಹಾಗೂ ಅವ್ಯವಹಾರಗಳ ಆರೋಪಗಳು ಕೇಳಿಬರುತ್ತಿವೆ ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದರು. ಅಧಿಕೃತ ವಾರಸುದಾರರಿಲ್ಲದಿರುವುದು, ಕೆಲವರು ಮನೆ ನಿರ್ಮಿಸಿ ಬಾಡಿಗೆಗೆ ನೀಡಿರುವುದು ಹಾಗೂ ನಿವೇಶನಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವ ಆರೋಪಗಳ ಕುರಿತು ಗ್ರಾಮ ಸಭೆಗಳಲ್ಲಿ ಹಲವು ಬಾರಿ ಚರ್ಚೆ ನಡೆದಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.

ಬಡವರಿಗೆ ವಸತಿ ಹಾಗೂ ನಿವೇಶನ ಒದಗಿಸುವಲ್ಲಿ ಪಂಚಾಯತ್ ವಿಫಲವಾಗಿದೆ. ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿರುವ ಕುರಿತು ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು.

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 2010ರಿಂದ 2026ರವರೆಗಿನ ಪಂಚಾಯತ್‌ನ ಎಲ್ಲ ಕಾಮಗಾರಿಗಳು, ವ್ಯವಹಾರಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಲೋಕಾಯುಕ್ತರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ತನಿಖೆಯ ಮೂಲಕ ಪಂಚಾಯತ್ ಆಡಳಿತ ಪಾರದರ್ಶಕವಾಗಿ ನಡೆದಿದೆಯೇ ಅಥವಾ ಯಾವುದೇ ಅವ್ಯವಹಾರ ನಡೆದಿದೆಯೇ ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಬೇಕು ಎಂದು ಒತ್ತಾಯಿಸಿದರು.

ಬೆಳಗ್ಗೆ–ಸಂಜೆ ಬಸ್ ಸೌಲಭ್ಯಕ್ಕೆ ಒತ್ತಾಯ

ಅಗಳಿ, ಹಂದೆವೂರು, ನಿನ್ನಿಕಲ್ಲು ಸೇರಿದಂತೆ ವಿವಿಧ ಪ್ರದೇಶಗಳಿಂದ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಬೆಳ್ತಂಗಡಿ ಸೇರಿದಂತೆ ವಿವಿಧೆಡೆ ಸಂಚರಿಸುತ್ತಿದ್ದಾರೆ. ಸೂಕ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಈ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಬೆಳ್ತಂಗಡಿ-ಲಾಯಿಲ-ನಿನ್ನಿಕಲ್ಲು – ಚಂದ್ಕೂರು- ಕುತ್ರೊಟ್ಟು- ಉಜಿರೆ- ಧರ್ಮಸ್ಥಳ ಈ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

ರಸ್ತೆ, ಬೀದಿದೀಪ, ಚರಂಡಿ ದುರಸ್ತಿಗೆ ಆಗ್ರಹ

ದರ್ಪಿಂಜದಿಂದ ನಿನ್ನಿಕಲ್ಲು ಹಾಗೂ ಹಂದೆವೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೀದಿದೀಪ ಅಳವಡಿಸಬೇಕು. ಲಾಯಿಲ ಬೈಲು,ಬಜಕ್ರೆಸಾಲು ರಸ್ತೆ,ಪಡ್ಲಾಡಿ ಕುಂಡಡ್ಕ,ಆಯಿಲ ರಸ್ತೆ, ಬದಿ ಕುಸಿತ, ಸೇರಿದಂತೆ ವಾರ್ಡಿನ ಹಲವು ರಸ್ತೆಗಳ ಚರಂಡಿ, ವ್ಯವಸ್ಥೆ ಹಾಗೂ ರಸ್ತೆಗಳನ್ನು ದುರಸ್ತಿಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಇದಲ್ಲದೆ, ಹಾಲಿನ ಡಿಪೋ ಸಮೀಪದ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿ, ಆ ಜಾಗವನ್ನು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಲಾಯಿತು. ಈ ಕುರಿತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದರಿಂದ, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆಯನ್ನು ಈ ವೇಳೆ ನೀಡಲಾಯಿತು.

ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯ್ಕ, ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ, ಸಿಬ್ಬಂದಿ ಉಷಾ ಸೂರಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ಪಡ್ಲಾಡಿ ಶಾಲೆ ದುರಸ್ತಿ, ರಂಗ ಮಂದಿರ ನಿರ್ಮಾಣ, ನಿನ್ನಿಕಲ್ಲು ಬಳಿ ಸಾರ್ವಜನಿಕ ತಂಗುದಾಣ, ಪುದ್ದೊಟ್ಟು, ಅಂಕಾಜೆ ಸೇರಿದಂತೆ ಇತರೆಡೆ ಇರುವ ಅಪಾಯಕಾರಿ ಮರಗಳ ತೆರವು, ವಾರ್ಡಿನ ವಿವಿಧ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು.

Related posts

ಲಾಯಿಲ: ಶ್ರೀ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವ

Suddi Udaya

ಜಿಲ್ಲಾಮಟ್ಟದ ಐಟಿ ಕ್ವಿಜ್‌ ಸ್ಪರ್ಧೆ: ಉಜಿರೆಯ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯಲ್ಲಿ “ಶಿಕ್ಷಕರ ದಿನ” ಆಚರಣೆ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಜಿ.ಪಂ.ಕಿ.ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಿಳಾ ಸಮಿತಿ ರಚನೆ

Suddi Udaya

ಇಂದಬೆಟ್ಟು: ಕೋಯ ನಗರದ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!