34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎರಕ ಶಿಲ್ಪದ ಅಪ್ರತಿಮ ಸಾಧನೆಗೆ ಯಶೋಧರ ಆಚಾರ್ಯ ಪೆರಾಡಿಗೆ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ

ಬೆಳ್ತಂಗಡಿ: ಎರಕ ಶಿಲ್ಪ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಕಾಲ ಅಪೂರ್ವ ಸಾಧನೆಗೈದು, ಕಲಾ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಪೆರಾಡಿಯ ಶ್ರೀ ಯಶೋಧರ ಆಚಾರ್ಯ ಅವರಿಗೆ 2025-26ನೇ ಸಾಲಿನ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಂಗಳೂರಿನ ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 60ನೇ ವಾರ್ಷಿಕ ಮಹಾಸಭೆಯಲ್ಲಿ ಎರಕ ಶಿಲ್ಪ ಕ್ಷೇತ್ರದಲ್ಲಿ ಅವರು ಮಾಡಿರುವ ಅಪ್ರತಿಮ ಸಾಧನೆ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಬೆಳ್ತಂಗಡಿ ತಾಲೂಕಿನ ಪೆರಾಡಿಯ ಸುಂದರ ಆಚಾರ್ಯ ಹಾಗೂ ಶ್ರೀಮತಿ ಸತ್ಯಮ್ಮ ದಂಪತಿಯ ಪುತ್ರರಾದ ಯಶೋಧರ ಆಚಾರ್ಯ ಅವರು ತಂದೆಯ ಪ್ರೇರಣೆಯಿಂದ ಎರಕ ಶಿಲ್ಪ ಕಲೆಯತ್ತ ಆಸಕ್ತಿ ಬೆಳೆಸಿಕೊಂಡರು. ತಮ್ಮನಿಂದ ಎರಕ ಶಿಲ್ಪದ ಕೌಶಲ್ಯವನ್ನು ಹಾಗೂ ಶಿಲ್ಪಿ ಜಗನ್ನಾಥ ಆಚಾರ್ಯ, ಕಾರ್ಕಳ ಇವರಿಂದ ಮರದ ಕೆಲಸದ ಸೂಕ್ಷ್ಮ ಕಲೆಗಳನ್ನು ಕಲಿತುಕೊಂಡ ಅವರು ಸುಮಾರು 30 ವರ್ಷಗಳ ಅಪೂರ್ವ ಅನುಭವವನ್ನು ಹೊಂದಿದ್ದಾರೆ.

ಮೂಡಬಿದ್ರೆಯ ವೀರ ಮಾರುತಿ ದೇವಸ್ಥಾನದ ದಾರಂದದ ಬೆಳ್ಳಿ ಹೊದಿಕೆ, ದೇವರ ವಿಗ್ರಹ, ಬೆಳ್ಳಿ ಪ್ರಭಾವಳಿ, ಪುಷ್ಪಗನ್ನಡಿ, ವೇಣೂರು ಜೈನ ಬಸದಿಯ ಲಾಲಕಿ ಹಾಗೂ ಪಲ್ಲಕ್ಕಿ ಸೇರಿದಂತೆ ಅನೇಕ ದೈವ-ದೇವರುಗಳ ಮೂರ್ತಿಗಳು, ಕವಚಗಳು ಮತ್ತು ದೈವಗಳ ಚಿನ್ನದ ಮೂರ್ತಿಗಳನ್ನು ನಿರ್ಮಿಸಿರುವುದು ಅವರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ.

ಕೇವಲ ಕಲಾ ಕ್ಷೇತ್ರಕ್ಕೆ ಸೀಮಿತರಾಗದೆ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿಯೂ ಯಶೋಧರ ಆಚಾರ್ಯ ಅವರು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡವರಿಗೆ ಮನೆ ನಿರ್ಮಾಣಕ್ಕೆ ನೆರವು ನೀಡುವುದು, ಅಗತ್ಯವಿರುವವರಿಗೆ ಧನಸಹಾಯ ಮಾಡುವುದು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸದಸ್ಯರಾಗಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತ ತಮ್ಮೂರಿನ ಹಾಲು ಉತ್ಪಾದಕರ ಸೇವಾ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರ ಎರಕ ಶಿಲ್ಪ ಕ್ಷೇತ್ರದ ಅಭೂತಪೂರ್ವ ಸಾಧನೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ (ಲಿ.), ಮಂಗಳೂರು ಸಂಸ್ಥೆಯು ತನ್ನ 60ನೇ ವಾರ್ಷಿಕ ಮಹಾಸಭೆಯಲ್ಲಿ 2025-26ನೇ ಸಾಲಿನ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ . ಉಪೇಂದ್ರ ಆಚಾರ್ಯ, ಉಪಾಧ್ಯಕ್ಷರಾದ ಎ. ಆನಂದ ಆಚಾರ್ಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ. ಯಜ್ಞೇಶ್ವರ ಆಚಾರ್ಯ, ವೈ.ವಿ . ವಿಶ್ವಜ್ಞಮೂರ್ತಿ, ವಿ . ಜಯ ಆಚಾರ್, ಕೆ. ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್ ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಶ್ರೀಮತಿ ಜ್ಯೋತಿ ಎಂ.ವಿ ., ರಮೇಶ್ ರಾವ್ ಯು., ಕೆ. ಪ್ರಕಾಶ್ ಆಚಾರ್ಯ, ಮಂಜುನಾಥ್ ಆಚಾರ್ಯ ಹಾಗೂ ಚಂದ್ರಶೇಖರ್ ಎ.ಎಸ್. ಉಪಸ್ಥಿತರಿದ್ದರು.

ಎರಕ ಶಿಲ್ಪದಂತಹ ಸಾಂಪ್ರದಾಯಿಕ ಕಲೆಯನ್ನು ಮೂರು ದಶಕಗಳ ಕಾಲ ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿರುವ ಯಶೋಧರ ಆಚಾರ್ಯ ಅವರ ಸಾಧನೆಯನ್ನು ಗುರುತಿಸಿ ದೊರೆತ ಈ ಪ್ರಶಸ್ತಿ, ಕರಾವಳಿಯ ಸಾಂಪ್ರದಾಯಿಕ ಕಲೆ ಮತ್ತು ಕಲಾವಿದರಿಗೆ ದೊರೆತ ಮಹತ್ವದ ಗೌರವವಾಗಿದೆ.

Related posts

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕವನ ಸ್ಪರ್ಧೆ: ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಪ್ರಣಮ್ಯ ಪ್ರಥಮ

Suddi Udaya

ಕಳಿಯ ಎರುಕಡಪ್ಪು: ಭಾರೀ ಜಡಿಮಳೆಗೆ ತುಂಬಿ ಹರಿಯುತ್ತಿರುವ ಸೋಮಾವತಿ ನದಿ: ಪಂಚಾಯತ್ ನೀರಿನ ಟ್ಯಾಂಕ್ ಮುಳುಗಡೆ

Suddi Udaya

ಕೊರಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮೆಟ್ರಿಕ್ ಮೇಳ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರಿಂದ ನಾಮಪತ್ರ ಸಲ್ಲಿಕೆ‌ ಕ್ಷಣಗಣನೆ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

Suddi Udaya
error: Content is protected !!