27.8 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಸ್ನಾತಕೋತ್ತರ ಎಂಸಿಜೆ ವಿಭಾಗದ ‘ಮೀಡಿಯಾ ಮೆಸೆಂಜರ್ ಕ್ಲಬ್’ಗೆ ಚಾಲನೆ

ಉಜಿರೆ : ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಮುಂಬರುವ ಯಾವುದೇ ನೂತನ ತಾಂತ್ರಿಕ ಆವಿಷ್ಕಾರಗಳನ್ನು ನಿಖರತೆ, ಬದ್ಧತೆ ಮತ್ತು ಎಚ್ಚರದ ಹೊಣೆಗಾರಿಕೆಯೊಂದಿಗೆ ಅನ್ವಯಿಸಿಕೊಂಡಾಗ ಮಾತ್ರ ಸಮೂಹ ಮಾಧ್ಯಮಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಸ್.ಡಿ.ಎಂ ಎಜ್ಯುಕೇಷನಲ್ ಸೊಸೈಟಿಯ ಮಾಹಿತಿ ತಂತ್ರಜ್ಞಾನ ಮತ್ತು ಹಾಸ್ಟೆಲ್ ಆಡಳಿತಾತ್ಮಕ ಸಿಇಓ ಪೂರನ್ ವರ್ಮಾ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (MCJ) ವಿಭಾಗದ ನೂತನ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಪ್ರಯುಕ್ತ ಆಯೋಜಿಸಲಾಗಿದ್ದ ದಿಕ್ಸೂಚಿ ಕಾರ್ಯಕ್ರಮದಲ್ಲಿ ‘ಮೀಡಿಯಾ ಮೆಸೆಂಜರ್ ಕ್ಲಬ್’ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು, ಮುಖ್ಯವಾಗಿ ಇನ್ಸ್ಟಾಗ್ರಾಂ ತನ್ನ ಆಕರ್ಷಣೀಯ ಆಲ್ಗರಿದಂನಿಂದಾಗಿ ಹೆಚ್ಚಿನ ಗಮನ ಸೆಳೆಯುತ್ತಿದೆ. ನಿಖರತೆಯಿಲ್ಲದ ಮಾಹಿತಿಯನ್ನು ರೋಚಕವಾಗಿ ತಲುಪಿಸಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಇದರೊಂದಿಗೆ ಎಐ ತಂತ್ರಜ್ಞಾನವೂ ವೇಗವಾಗಿ ಬೆಳೆಯುತ್ತಿದ್ದು, ಸುಳ್ಳು ಮಾಹಿತಿಗಳೇ ವಿಜೃಂಭಿಸುತ್ತಿವೆ. ಇಂತಹ ಸಂದರ್ಭದಲ್ಲಿ ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ನಿಖರತೆಯ ಮೌಲಿಕ ಬದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಕರೆ ನೀಡಿದರು.

ಹಿಂದೆ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿರಲಿಲ್ಲ, ಆದರೆ ಇಂದು ವಿವಿಧ ಮೂಲಗಳಿಂದ ಹೇರಳವಾದ ಮಾಹಿತಿ ಲಭ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಹರಿಬಿಟ್ಟು ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಜರ್ನಲಿಸ್ಟಿಕ್ ಆಯಾಮ ಹಾಗೂ ಗುಣಾತ್ಮಕತೆ ಗೈರಾಗುತ್ತಿದೆ. ಮಾಧ್ಯಮಗಳಲ್ಲಿ ವ್ಯಕ್ತವಾಗುವ ಟೀಕೆಗಳು ಕೇವಲ ವಿರೋಧಿಸುವುದಕ್ಕಾಗಿ ಇರಬಾರದು; ಸರಿಹಾದಿಯ ನಿರೀಕ್ಷೆಯೊಂದಿಗಿನ ಜವಾಬ್ದಾರಿಯುತ ದೃಷ್ಟಿಕೋನ ಹೊಂದಿರಬೇಕು ಎಂದು ಪೂರನ್ ವರ್ಮಾ ತಿಳಿಸಿದರು.

ಸಮಾಜದಲ್ಲಿ ತಮ್ಮ ಪಾಡಿಗೆ ಕಾರ್ಯೋನ್ಮುಖರಾಗಿ ಮಾದರಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಕೊಡುಗೆಗಳನ್ನು ದಾಖಲಿಸುವ ಕೆಲಸವನ್ನು ವಿದ್ಯಾರ್ಥಿಗಳು ಶಿಕ್ಷಣದ ಹಂತದಲ್ಲೇ ಆರಂಭಿಸಬೇಕು. ನಿಖರ ಸಂವಹನ, ಪರಿಸ್ಥಿತಿ ನಿರ್ವಹಣೆಯ ಚಾಕಚಕ್ಯತೆ ಮತ್ತು ಹೊಸ ವಿಷಯಗಳನ್ನು ತಿಳಿಯುವ ಕುತೂಹಲ ಬೆಳೆಸಿಕೊಂಡಾಗ ಮಾತ್ರ ವಿಶ್ವಾಸಾರ್ಹ ವೃತ್ತಿಪರರಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ, ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಮಾತನಾಡಿ, ೨೦೦೮ರಿಂದ ವಿಭಾಗವು ಬೆಳೆದುಬಂದ ಹಾದಿಯನ್ನು ಮೆಲುಕುಹಾಕಿದರು. ಜ್ಞಾನ ಮತ್ತು ಕೌಶಲಗಳನ್ನು ಅನ್ವಯಿಸಿಕೊಂಡು ಸಾಧಿಸುವ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯೇ ವಿಭಾಗದ ಯಶಸ್ಸಿಗೆ ಕಾರಣ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬರಹಗಳನ್ನೊಳಗೊಂಡ ‘ಹೊಂಗಿರಣ’ ಕೃತಿ ಹಾಗೂ ‘ಎಸ್.ಡಿ.ಎಂ ಗೆಜೆಟ್’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ. ಹಂಪೇಶ್ ಕೆ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜನಾ ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ಆಚಾರ್ ಧನ್ಯವಾದ ಸಮರ್ಪಿಸಿದರು.

Related posts

ಪೆರಿಂಜೆ: ಪರಾರಿ ಮನೆಯ ಶ್ರೀಮತಿ ಕಮಲ ನಿಧನ

Suddi Udaya

ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ‘ ನಶಾ ಮುಕ್ತ ಭಾರತ’ ಬೃಹತ್ ಜಾಗೃತಿ ಕಾರ್ಯಕ್ರಮ

Suddi Udaya

ದ್ವಿತೀಯ ಪಿ.ಯು.ಸಿ ಫಲಿತಾಂಶ: ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಯ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶೇ.100 ಫಲಿತಾಂಶ

Suddi Udaya

ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಕೆ ಎನ್ ಆಯ್ಕೆ

Suddi Udaya

ಉಜಿರೆ ದುರ್ಗಾ ಮೊಬೈಲ್‌ಗೆ ಧರ್ಮದರ್ಶಿ ಹರೀಶ್ ಆರಿಕೋಡಿ ಭೇಟಿ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾ ಕಲರವ ಉದ್ಘಾಟನೆ

Suddi Udaya
error: Content is protected !!