September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

ಉಜಿರೆ: ಇಲ್ಲಿನ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ‘ಸಮರ್ಥವಾಗಿ ಓದಿ, ಹೆಚ್ಚು ಕಲಿಯಿರಿ: ಅನ್ವೇಷಿಸಿ, ಬೆಳೆಯಿರಿ ಮತ್ತು ಯಶಸ್ವಿಯಾಗಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆಯ ಎಸ್.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯ ಗ್ರಂಥಪಾಲಕಿ ಹಾಗೂ ಸಹ ಪ್ರಾಧ್ಯಾಪಕಿ ಡಾ. ರಜತಾ ಪಿ. ಶೆಟ್ಟಿ ಅವರು, ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ಗ್ರಂಥಾಲಯಗಳು ಶೈಕ್ಷಣಿಕ ಸಂಸ್ಥೆಗಳ ಹೃದಯಭಾಗವಾಗಿದ್ದು, ಬೋಧನೆ, ಕಲಿಕೆ ಮತ್ತು ಸಂಶೋಧನೆಗೆ ಅಗತ್ಯವಾದ ಬೆಂಬಲವನ್ನು ಒದಗಿಸುತ್ತವೆ. ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲೂ ಗ್ರಂಥಾಲಯಗಳ ಪ್ರಾಮುಖ್ಯತೆ ಕುಂದಿಲ್ಲ” ಎಂದು ಅಭಿಪ್ರಾಯಪಟ್ಟರು.

ಇಂಟರ್ನೆಟ್‌ನಲ್ಲಿ ತಕ್ಷಣವೇ ಉತ್ತರಗಳು ಲಭ್ಯವಿದ್ದರೂ, ವಿಶ್ವಾಸಾರ್ಹ ಹಾಗೂ ಗುಣಮಟ್ಟದ ಜ್ಞಾನವನ್ನು ಪಡೆಯಲು ಗ್ರಂಥಾಲಯಗಳು ಅನಿವಾರ್ಯ. ಗ್ರಂಥಪಾಲಕರು ಕೇವಲ ಪುಸ್ತಕಗಳನ್ನು ನಿರ್ವಹಿಸುವವರಲ್ಲ; ಸರಿಯಾದ ಮಾಹಿತಿಯನ್ನು ಹುಡುಕಲು ಮತ್ತು ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದಿಕ್ಸೂಚಿಗಳಾಗಿದ್ದಾರೆ. ಎಐ ಯುಗದ ಮಾಹಿತಿ ಸಾಗರದಲ್ಲಿ ಸರಿಯಾದ ದಾರಿಯನ್ನು ತೋರಿಸುವ ಜವಾಬ್ದಾರಿ ಗ್ರಂಥಪಾಲಕರ ಮೇಲಿದೆ ಎಂದು ಅವರು ವಿವರಿಸಿದರು.

ಕೇವಲ ಓದುವುದಕ್ಕಿಂತ ‘ಸಮರ್ಥವಾಗಿ ಓದುವುದು’ ಮುಖ್ಯ. ಓದುವಾಗ ಸೂಕ್ತ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು, ಅವುಗಳನ್ನು ಅರ್ಥಮಾಡಿಕೊಳ್ಳುವುದು, ಆಲೋಚಿಸುವುದು ಮತ್ತು ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಈ ಪ್ರಕ್ರಿಯೆಯು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದೇ ವೇಳೆ, ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾಗಿರುವ ವಿವಿಧ ಅಂತರ್ಜಾಲ ಆಧಾರಿತ ಡಿಜಿಟಲ್ ಸಂಪನ್ಮೂಲಗಳನ್ನು ಪರದೆಯ ಮೂಲಕ ನೇರವಾಗಿ ಪರಿಚಯಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿಧಾನವನ್ನು ವಿವರಿಸಿದರು.

ವಿದ್ಯಾರ್ಥಿಗಳು ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ನಿಯಮಿತವಾಗಿ ಓದುವ ಮೂಲಕ ಆಂಗ್ಲ ಭಾಷೆಯ ಸಂವಹನ ಕೌಶಲ್ಯ ಮತ್ತು ಶಬ್ದಕೋಶವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೆ, ಕೃತಕ ಬುದ್ಧಿಮತ್ತೆಯ ಉಪಕರಣಗಳಿಂದ ಸೂಕ್ತ ಉತ್ತರ ಹಾಗೂ ಫಲಿತಾಂಶ ಪಡೆಯಲು ಪರಿಣಾಮಕಾರಿ ‘ಪ್ರಾಂಪ್ಟ್’ ನೀಡುವ ಕೌಶಲ್ಯವನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ಮೊಬೈಲ್ ಬಳಕೆಯ ದುಷ್ಪರಿಣಾಮಗಳಿಂದ ದೂರವಿರಬಹುದು. ತ್ವರಿತ ಮಾಹಿತಿಯನ್ನು ಬಯಸುವ ಜೆನ್‌-ಝೀ ಪೀಳಿಗೆಗೆ ಮೊಬೈಲ್ ಮತ್ತು ಅಂತರ್ಜಾಲವು ಅಧ್ಯಯನಕ್ಕೆ ಪೂರಕವಾಗಿದ್ದರೂ, ಏಕಾಗ್ರತೆಗೆ ಭಂಗ ತರುವ ಹಲವು ಅಪ್ಲಿಕೇಶನ್‌ಗಳು ಮೊಬೈಲ್‌ನಲ್ಲಿ ಇರುವುದರಿಂದ ಕಲಿಕಾ ಸಾಮಗ್ರಿಗಳತ್ತ ಗಮನ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಮಂಗಳೂರು ವಿಭಾಗದಿಂದ ನೀಡಲಾಗುವ ಪ್ರತಿಷ್ಠಿತ ‘ಅತ್ಯುತ್ತಮ ಗ್ರಂಥಪಾಲಕ’ ಪ್ರಶಸ್ತಿಗೆ ಭಾಜನರಾದ ಮುಖ್ಯ ಅತಿಥಿ ಡಾ. ರಜತಾ ಪಿ. ಶೆಟ್ಟಿ ಅವರನ್ನು ಕಾಲೇಜಿನ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ. ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಸಂತೋಷ್ ವಹಿಸಿದ್ದರು. ಎಸ್.ಡಿ.ಎಂ. ಪಾಲಿಟೆಕ್ನಿಕ್‌ನ ಗ್ರಂಥಪಾಲಕಿ ಹಾಗೂ ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ನಮಿತಾ ಶೆಟ್ಟಿ ಸ್ವಾಗತಿಸಿದರು. ಪಾಲಿಟೆಕ್ನಿಕ್ ಕಾಲೇಜಿನ ವ್ಯವಸ್ಥಾಪಕರಾದ ಚಂದ್ರನಾಥ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಪದ್ಮರಾಜ್ ಅಣ್ಣಾಜಿ ವಂದಿಸಿದರು. ಎಸ್.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಸಂದೀಪ್ ಆರ್., ಎಸ್.ಡಿ.ಎಂ. ಪಾಲಿಟೆಕ್ನಿಕ್‌ನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಪೈ ಅವರಿಗೆ ಉಜಿರೆ ವರ್ತಕರ ಸಂಘದಿಂದ ಗೌರವ ಸನ್ಮಾನ-ಉಜಿರೆ ನನ್ನನ್ನು ಬೆಳೆಸಿದ, ಪೋಷಿಸಿದ ಊರು: ಉದ್ಯಮಿ ರಾಜೇಶ್ ಪೈ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ

Suddi Udaya

ಕಲ್ಲೇರಿಯಲ್ಲಿ “ಕಲ್ಲೇರಿ ವೆಲ್‌ನೆಸ್ ಸೆಂಟರ್”ನ ಶುಭಾರಂಭ

Suddi Udaya

ಬಳಂಜ ವಲಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 6 ನೇ ಸ್ಥಳದಲ್ಲಿ ಅವಶೇಷಗಳು ಪತ್ತೆ

Suddi Udaya

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಕಿಡ್ಸ್ ವಿಕ್ಟರಿ ಫಿಯೇಸ್ಟಾ 2025’

Suddi Udaya
error: Content is protected !!